ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮೈಸೂರು: ಮಾಹಿತಿ ಪಡೆಯಲು ಕಾನೂನು ತಜ್ಞರ ಅಗತ್ಯ ಇಲ್ಲ - ಶ್ರೀ ಕೆ. ವೆಂಕಟೇಶ್

ಮೈಸೂರು: ಮಾಹಿತಿ ಪಡೆಯಲು ಕಾನೂನು ತಜ್ಞರ ಅಗತ್ಯ ಇಲ್ಲ - ಶ್ರೀ ಕೆ. ವೆಂಕಟೇಶ್

Sat, 06 Mar 2010 03:30:00  Office Staff   S.O. News Service

ಮೈಸೂರು, ಮಾ. ೦೬ (ಕರ್ನಾಟಕ ವಾರ್ತೆ) - ಸಾರ್ವಜನಿಕರು ತಮಗೆ ಬೇಕಾದ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಪಡೆಯಲು ತಜ್ಞರು ಅಥವಾ ವಕೀಲರ ಸಹಾಯ ಬೇಕಾಗಿಲ್ಲ. ಕೇವಲ ಸರಳ ಅರ್ಜಿಯೊಂದಿಗೆ ನಿಗಧಿತ ಅಲ್ಪ ಶುಲ್ಕ ಪಾವತಿಸಿ ಪಡೆಯಬಹುದೆಂದು ಜಿ.ಬಿ. ಸರಗೂರಿನ ಪ್ರಗತಿ ಪರ ರೈತ ಶ್ರೀ ಕೆ. ವೆಂಕಟೇಶ್ ಅವರು ತಿಳಿಸಿದ್ದಾರೆ.

 

ಅವರು ನಿನ್ನೆ (೫.೩.೨೦೧೦) ಮೈಸೂರು ತಾಲ್ಲೂಕು ಸಿದ್ದಲಿಂಗಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಮನಕೆರೆಹುಂಡಿ ಗ್ರಾಮದಲ್ಲಿ ವಾರ್ತಾ ಇಲಾಖೆ, ಮೈಸೂರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಮೈಸೂರು ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಮಾಹಿತಿ ಹಕ್ಕು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಪಡೆಯಲು ಜಾತಿ, ವಿದ್ಯ, ಬಡವ ಬಲ್ಲಿದ, ನಗರವಾಸಿ, ಗ್ರಾಮೀಣರು ಎಂಬ ಯಾವ ಭೇದಭಾವವಿಲ್ಲದೆ ಎಲ್ಲರೂ ತಮಗೆ ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಸ್ವತಂತ್ರರು ಎಂದು ಅವರು ತಿಳಿಸಿದ್ದಾರೆ. ಯುವ ಜನರು ಮಾಹಿತಿ ಹಕ್ಕು ಅಧಿನಿಯಮದಡಿ ಅನುಮಾನ ಬಂದ ಕಾಮಗಾರಿಗಳ ಕುರಿತು ಮಾಹಿತಿ ಪಡೆಯುವುದರಿಂದ ಸರ್ಕಾರದ ಆಡಳಿತ ಪಾರದರ್ಶಕವಾಗಿ ಪರಿಣಾಮಕಾರಿಯಾಗಲಿದೆ ಎಂದರು.

 

ಸಮಾರಂಭದಲ್ಲಿ ಹಾಜರಿದ್ದ ವಾರ್ತಾ ಇಲಾಖೆಯ ಗ್ರಂಥಪಾಲಕ ಚಂದ್ರಶೇಖರ ಆಜಾದ್ ಅವರು ಮಾತನಾಡಿ ಮಾಹಿತಿ ಹಕ್ಕು ಅಧಿನಿಯಮದಡಿ ದೇಶಕ್ಕೆ ಸಂಬಂಧಿಸಿದ ರಕ್ಷಣಾ ವಿಷಯಗಳು, ವೈಯುಕ್ತಿ ವಿಷಯಗಳು ಹೊರತುಪಡಿಸಿ ಸರ್ಕಾರಿ, ಅನುದಾನಿತ ಹಾಗೂ ಸರ್ಕಾರದಿಂದ ಅನುದಾನ ಪಡೆಯುವ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ಪಡೆಯುವ ಹಕ್ಕು ಇದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಂಶುಪಾಲರಾದ ಶ್ರೀ ಎಂ. ಜಯೇಂದ್ರಪ್ಪ ಅವರು ವಹಿಸಿದ್ದರು.

ಕಾಮನಕೆರೆಹುಂಡಿ ಗ್ರಾಮದ ಹಿರಿಯರಾದ ಶ್ರೀ ದೇವೇಗೌಡ, ನಾರಾಯಣರಾವ್, ಸಿ. ನಾಗೇಂದ್ರಪ್ಪ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯೆ ಶ್ರೀಮತಿ ಗೌರಮ್ಮ ಮುಂತಾದವರು ಭಾಗವಹಿಸಿದ್ದರು.

ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಶ್ರೀ ಹೆಚ್.ಆರ್. ಪ್ರಸಾದ್, ವಾರ್ತಾ ಇಲಾಖೆ ಶ್ರೀ ತೀರ್ಥಲಿಂಗಪ್ಪ ಅವರು ಈ ಸಂದರ್ಭದಲ್ಲಿ ಮಾತನಾಡಿದರು.

ಮಾಹಿತಿ ಹಕ್ಕು ಕುರಿತು ವಾರ್ತಾ ಇಲಾಖೆ ವತಿಯಿಂದ ಚಲನಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.


Share: