ಭಟ್ಕಳ, ನವೆಂಬರ್ ೫: ಹಿಂದೆ ಏನು ನಡೆದಿದೆಯೋ ಅದೀಗ ಮುಖ್ಯವಲ್ಲ. ವರ್ತಮಾನದ ಕಳಕಳಿಯೊಂದಿಗೆ ಭವಿಷ್ಯದ ಬಗ್ಗೆ ಆಶಾಭಾವನೆಯನ್ನು ಹೊಂದಿರುವುದಾಗಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಖುಸ್ರೋ ಖುರೇಷಿ ತಿಳಿಸಿದ್ದಾರೆ.
ಅವರು ಕೋಮು ಸೂಕ್ಷ್ಮ ಪ್ರದೇಶ ಎಂಬ ಹಣೆ ಪಟ್ಟಿ ಹಚ್ಚಿಕೊಂಡಿರುವ ಭಟ್ಕಳದಲ್ಲಿ ಗುರುವಾರ ಅಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಸದಸ್ಯರೊಂದಿಗೆ ಮಾತುಕತೆ ನಡೆಸಿದ ನಂತರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಸಮಸ್ಯೆಯ ಮೂಲ ಕಾರಣವನ್ನು ಅರಿಯದೇ ಪರಿಹಾರ ಕಂಡುಕೊಳ್ಳುವುದು ಅಸಾಧ್ಯ ಎಂದ ಅವರು ಅಲ್ಪ ಸಂಖ್ಯಾತರಲ್ಲಿ ಶೈಕ್ಷಣಿಕ ಹಾಗೂ ಸಾಮಾಜಿಕ ಜಾಗೃತೆ ಮೂಡಿಸಲು ಸರಕಾರ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಗೋಹತ್ಯೆ, ಮತಾಂತರ, ಲವ್ ಟೆರರಿಸಂ, ನಿರುದ್ಯೋಗದಂತಹ ವಿಷಯಗಳ ಕುರಿತು ಪರಸ್ಪರ ಚರ್ಚೆ ಸಾಗಿದ್ದು, ಮುಂದಿನ ದಿನಗಳಲ್ಲಿ ಧನಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಸುವುದಾಗಿ ತಿಳಿಸಿದರು. ನಾವೆಲ್ಲರೂ ದೇವರ ಮಕ್ಕಳು ಎಂದ ಅಧ್ಯಕ್ಷರು ನಮ್ಮಲ್ಲಿ ಭೇದ ಭಾವ ಸಲ್ಲ. ಆರೆಸ್ಸೆಸ್, ಭಜರಂಗದಳದಂತಹ ಸಂಘಟನೆಗಳ ಜೊತೆಗೆ ಈಗಾಗಲೇ ಮಾತುಕತೆ ನಡೆದಿದ್ದು, ಅವುಗಳ ಮೇಲೆ ಇರುವ ಸಂಶಯಗಳನ್ನು ದೂರ ಮಾಡುವ ಪ್ರಯತ್ನ ನಡೆದಿದೆ ಎಂದರು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳತ್ತ ನಿಗಾ ಇರಿಸಿದ್ದು, ಶಾಂತಿ ಪ್ರಕ್ರಿಯೆಯನ್ನು ಮುಂದುವರೆಸಿಕೊಂಡು ಹೋಗುವ ಭರವಸೆಯನ್ನು ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು. ಶಾಸಕ ಜೆ.ಡಿ.ನಾಯ್ಕ, ಅಲ್ಪಸಂಖ್ಯಾತ ಆಯೋಗದ ಸದಸ್ಯ ಅಂತೋನಿ ಫರ್ನಾಂಡೀಸ್ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.