ಜೈಪುರ, ನ.2: ಇಲ್ಲಿಗೆ ಸಮೀಪದ ಭಾರತೀಯ ತೈಲ ನಿಗಮದ ಕೋಠಿಯೊಂದರಲ್ಲಿ ನಾಲ್ಕು ದಿನಗಳ ಹಿಂದೆ ಭುಗಿಲೆದ್ದಿರುವ ಬೆಂಕಿ ಇನ್ನೂ ಆರದಿದ್ದು, ಇಂದು ಕೂಡ ಘಟಕದಿಂದ ಭೀಕರ ಸ್ಫೋಟದ ಶಬ್ದಗಳು ಕೇಳಿ ಬಂದಿವೆ.
ಗಾಯಾಳುಗಳಲ್ಲಿ ಒಬ್ಬ ಇಂದು ಕೊನೆಯುಸಿರೆಳೆಯುವುದರೊಂದಿಗೆ ಐಒಎಲ್ ಅಗ್ನಿ ಅನಾಹುತಕ್ಕೆ ಬಲಿಯಾದವರ ಸಂಖ್ಯೆ ೧೧ಕ್ಕೇರಿದೆ.
ಪೆಟ್ರೋಲ್ ಹಾಗೂ ಡೀಸೆಲ್ ತುಂಬಿದ್ದ ೧೧ ಟ್ಯಾಂಕ್‌ಗಳಲ್ಲಿ ೭ರ ಬೆಂಕಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದ್ದರೆ, ೪ ಟ್ಯಾಂಕ್‌ಗಳಲ್ಲಿ ಇನ್ನೂ ಜ್ವಾಲೆಯಾಡುತ್ತಿದೆ. ಪ್ರದೇಶದ ೩-೪ ಕಿ.ಮೀ. ವ್ಯಾಪ್ತಿಯಲ್ಲಿ ದಟ್ಟ ಕರಿ ಧೂಮ ತುಂಬಿಕೊಂಡಿದೆ.
ಜೈಪುರದಿಂದ ೨೦ ಕಿ.ಮೀ. ದೂರದ ಸೀತಾಪುರದ ಭಾರತೀಯ ತೈಲ ನಿಗಮದ ಡಿಪೊದಲ್ಲಿ ಗುರುವಾರ ಸಂಜೆ ೭:೧೫ರ ವೇಳೆ ಬೆಂಕಿ ಭುಗಿಲೆದ್ದಿತ್ತು. ಅಲ್ಲಿದ್ದ ರೂ. ೧೫೦-೨೦೦ ಕೋಟಿ ಮೌಲ್ಯದ ೫೦ ಸಾವಿರ ಕಿಲೋ ಲೀಟರ್‌ಗಳಷ್ಟು ತೈಲವನ್ನು ಅಧಿಕಾರಿಗಳು ಅನಿವಾರ್ಯವಾಗಿ ಉರಿಯಲು ಬಿಟ್ಟುದರಿಂದಾಗಿ ಆವರಣದೊಳಗಿಂದ ಭಾರೀ ಸ್ಫೋಟದ ಶಬ್ದಗಳು ಕೇಳಿಸುತ್ತಿವೆ.
ಎಣ್ಣೆ ಸಂಪೂರ್ಣ ಸುಟ್ಟು ಮುಗಿಯದೆ ಏನೂ ಮಾಡಲು ಸಾಧ್ಯವಿಲ್ಲ. ಮೂರು ಟ್ಯಾಂಕ್‌ಗಳಲ್ಲಿದ್ದ ಸೀಮೆ ಎಣ್ಣೆ ಸಂಪೂರ್ಣ ಉರಿದಿದೆಯೆಂಬ ಮಾಹಿತಿ ಬಂದಿದೆಯೆಂದು ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರದೇಶದ ಸುತ್ತಮುತ್ತಲಿನ ಹಲವು ನಿವಾಸಿಗಳಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಘಟನೆಯ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಪರಿಸರದ ಕೈಗಾರಿಕೆಗಳು, ಶಾಲಾ-ಕಾಲೇಜುಗಳು ಮಂಗಳವಾರ ತೆರೆಯುವ ನಿರೀಕ್ಷೆಯಿದೆ.
ಸುತ್ತಲಿನ ಕೈಗಾರಿಕಾ ಘಟಕಗಳು ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದರೆ, ನಿವಾಸಿಗಳು ತೈಲ ಉಗ್ರಾಣವನ್ನು ಸ್ಥಳಾಂತರಿಸುವಂತೆ ಅಥವಾ ತಮಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದೇ ವೇಳೆ, ಘಟನೆಯ ಕುರಿತು ಸರ್ವೇಕ್ಷಣ ವರದಿ ಸಲ್ಲಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ರಾಜಸ್ಥಾನ ಸರಕಾರವು ಅಧಿಕಾರಿಗಳಿಗೆ ಆದೇಶ ನೀಡಿದೆ.