ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಬಿಐಎಂಸಿ ಯೋಜನೆ ಅವ್ಯವಹಾರ ಬಹಿರಂಗಪಡಿಸಲು ಸಿಬಿಐ ತನಿಖೆ ನಡೆಸಲು ರೇವಣ್ಣ ಒತ್ತಾಯ

ಬೆಂಗಳೂರು: ಬಿಐಎಂಸಿ ಯೋಜನೆ ಅವ್ಯವಹಾರ ಬಹಿರಂಗಪಡಿಸಲು ಸಿಬಿಐ ತನಿಖೆ ನಡೆಸಲು ರೇವಣ್ಣ ಒತ್ತಾಯ

Wed, 13 Jan 2010 17:59:00  Office Staff   S.O. News Service
ಬೆಂಗಳೂರು,ಜನವರಿ ೧೩: ಬಿ‌ಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಇದುವರೆಗೆ ನಡೆದ ಎಲ್ಲ ವ್ಯವಹಾರಗಳನ್ನು ಬಹಿರಂಗಪಡಿಸುವ ದೃಷ್ಟಿಯಿಂದ ಸಿಬಿ‌ಐ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಜೆಡಿ‌ಎಸ್ ಶಾಸಕಾಂಗ ನಾಯಕ ಹೆಚ್.ಡಿ.ರೇವಣ್ಣ ಇಂದಿಲ್ಲಿ ರಾಜ್ಯಪಾಲರನ್ನು ಒತ್ತಾಯಿಸಿದ್ದಾರೆ.

ವಿಧಾನಸೌಧದಲ್ಲಿಂದು ಸುದ್ಧಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು,ನೈತಿಕತೆಯಿದ್ದರೆ ಯಡಿಯೂರಪ್ಪ ಅವರೇ ಈ ಬಗ್ಗೆ ಸಿಬಿ‌ಐ ತನಿಖೆ ನಡೆಸಲು ಒಪ್ಪಿಗೆ ನೀಡಬೇಕು.ಹಾಗೊಂದು ವೇಳೆ ಅವರು ಒಪ್ಪದಿದ್ದರೆ ರಾಜ್ಯಪಾಲರೇ ಮಧ್ಯೆ ಪ್ರವೇಶಿಸಬೇಕು ಎಂದು ಒತ್ತಾಯ ಮಾಡಿದರು.

ದೇವೇಗೌಡರ ಕಾಲದಿಂದ ಹಿಡಿದು ಇಲ್ಲಿಯವರೆಗೆ ನೈಸ್ ಯೋಜನೆಗೆ ಸಂಬಂಧಿಸಿದಂತೆ ಏನೇನಾಗಿದೆ?ಎಂಬುದು ಬಹಿರಂಗವಾಗಲಿ,ಯಾರೇ ತಪ್ಪಿತಸ್ಥರಿದ್ದರೂ ಶಿಕ್ಷೆಯಾಗಲಿ ಎಂದು ರೇವಣ್ಣ ಆಗ್ರಹಿಸಿದರು.

ಇವತ್ತು ತುರ್ತಾಗಿ ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ,ನೈಸ್‌ನ ಅಶೋಕ್ ಖೇಣಿ ಹಾಗೂ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಅಶೋಕ್ ಖೇಣಿ ಶತಮಾನದ ಮಹಾನ್ ವ್ಯಕ್ತಿ.ಅವರು ಬಂದರೆ ಎಲ್ಲ ಕೆಲಸ ಮಾಡಿಕೊಡುವಂತೆ ಯಡಿಯೂರಪ್ಪ ಅಧಿಕಾರಿಗಳಿಗೆ ಆದೇಶ ನೀಡಿದ್ದು ಅದರನುಸಾರ ಕಾನೂನು ಬಾಹಿರವಾಗಿ ನೈಸ್‌ಗೆ ಅನುಕೂಲ ಮಾಡಿಕೊಡಲಾಗುತ್ತಿದೆ.

ವಾಸ್ತವದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಯೋಜನೆಯ ರಸ್ತೆಗೆ ಬೇಕಾಗಿರುವುದೇ ೨೮೦೦ ಎಕರೆ.ಆದರೆ ಸರ್ಕಾರ ನೀಡಲು ಹೊರಟಿರುವುದು ೨೮ ಸಾವಿರ ಎಕರೆ ಭೂಮಿ ಎಂದು ಆರೋಪಿಸಿದ ಅವರು,ಹೀಗಾದರೆ ರಾಜ್ಯ ಉಳಿಯಲು ಸಾಧ್ಯವೇ?ಎಂದು ಪ್ರಶ್ನೆ ಮಾಡಿದರು.

ನವೆಂಬರ್ ೧೯ ರಂದು ನಡೆದ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ೧೮೦೦ ಎಕರೆ ಜಮೀನನ್ನು ಕ್ರಯಪತ್ರ ಮಾಡಿ ಹಸ್ತಾಂತರಿಸುವಂತೆ ಸೂಚನೆ ನೀಡಲಾಗಿದೆ.

ಇದೇ ರೀತಿ ಬೆಂಗಳೂರಿನಿಂದ ಎಂಟು ಕಿಮಿ ದೂರದಲ್ಲಿರುವ ಗೋಣಿಪುರ ಟೌನ್‌ಷಿಪ್‌ಗೆ ೨೭೦೦ ಎಕರೆ ಭೂಮಿ,ಬಿಡದಿ ಹತ್ತಿರುವ ೧೭೦೦ ಎಕರೆ ಭೂಮಿಯನ್ನು ಕೊಡಲು ಸರ್ಕಾರ ಹೊರಟಿದ್ದು ಅದೇ ರೀತಿ ಬೆಂಗಳೂರು ಹಾಗೂ ರಾಮನಗರದ ವ್ಯಾಪ್ತಿಯಲ್ಲಿ ೨೨೦ ಕೆರೆಗಳನ್ನು ನೈಸ್‌ನ ಅಶೋಕ್ ಖೇಣಿಗೆ ಕೊಡಲು ಮುಂದಾಗಿದೆ.

ಗುತ್ತಿಗೆ ಆಧಾರದ ಮೇಲೆ ಭೂಮಿ ನೀಡಬೇಕು ಎಂಬುದು ಮೂಲ ಒಪ್ಪಂದದ ಕರಾರು.ಆದರೆ ಕ್ರಯಪತ್ರದ ಆಧಾರದ ಮೇಲೆ ನೈಸ್ ಕಂಪನಿಗೆ ಭೂಮಿಯನ್ನು ನೀಡಿದರೆ ರೈತರಿಂದ ತಲಾ ಒಂದು ಲಕ್ಷ ರೂಪಾಯಿಗಳಿಗೆ ಪಡೆದ ಭೂಮಿಯನ್ನು ಆತ ಐದು ಕೋಟಿಗೆ ಒಂದು ಎಕರೆಯಂತೆ ಮಾರಿಕೊಳ್ಳುತ್ತಾನೆ.ಇದರ ಬಗ್ಗೆ ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ನಿಜ ಹೇಳಬೇಕು ಎಂದು ಒತ್ತಾಯಿಸಿದರು.

ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಈ ಹಿಂದೆ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿ ತೆಗೆದುಕೊಳ್ಳುತ್ತಿತ್ತು.ಮತ್ತು ಎಲ್ಲ ಅಧಿಕಾರಿಗಳು ಅಲ್ಲಿ ಸಾಧ್ಯಾಸಾಧ್ಯತೆಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಸಾಧ್ಯವಾಗುತ್ತಿತ್ತು.

ಆದರೆ ಇದೀಗ ಬಳಿಗಾರ್ ಹಾಗೂ ಅಡ್ವೋಕೇಟ್ ಜನರಲ್ ಅವರು ಸುಪ್ರೀಂಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿ ಈ ಸಮಿತಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವಂತೆ ಮಾಡಿರುವುದರಿಂದ ಅಧಿಕಾರಿಗಳು ಮಾತನಾಡಲೇ ಸಾಧ್ಯವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ.

ಯಾಕೆಂದರೆ ಸಭೆಯಲ್ಲಿ ನೈಸ್‌ನ ಅಶೋಕ್ ಖೇಣಿಯನ್ನು ಈ ಶತಮಾನದ ಮಹಾನ್ ವ್ಯಕ್ತಿ ಎಂದು ಬಣ್ಣಿಸುವ ಮುಖ್ಯಮಂತ್ರಿಗಳು ಯೋಜನೆಗೆ ಇಂತಲ್ಲಿ ಭೂಮಿ ಕೊಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದರೆ,ನಾನು ಹೇಳಿದಂತೆ ಕೇಳಿ ಎಂದು ಗದರಿಸುತ್ತಾರೆ.ಹೀಗಾಗಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುವುದೇ ಕಷ್ಟವಾಗಿ ಹೋಗಿದೆ ಎಂದರು.

ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳು,ಕೈಗಾರಿಕೆ ಇಲಾಖೆ ಅಧಿಕಾರಿಗಳು ಸೇರಿದಂತೆ ಹಲವರು ನೈಸ್ ಯೋಜನೆಯಲ್ಲಾಗುತ್ತಿರುವ ಅನ್ಯಾಯದ ಬಗ್ಗೆ ವಿವರವಾಗಿ ಹೇಳಿದ್ದರೂ ಯಡಿಯೂರಪ್ಪ ಅದನ್ನು ಗಣನೆಗೇ ತೆಗೆದುಕೊಳ್ಳುತ್ತಿಲ್ಲ.

ಹೀಗಾಗಿ ಇಡೀ ಪ್ರಕರಣದಲ್ಲಿ ನಡೆದ ವ್ಯವಹಾರದ ಬಗ್ಗೆ ಸಿಬಿ‌ಐ ತನಿಖೆ ನಡೆಸಬೇಕು.ನೈತಿಕತೆಯಿದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ಸಿಬಿ‌ಐ ತನಿಖೆಗೆ ತಾವಾಗಿಯೇ ವಹಿಸಿಕೊಡಬೇಕು.ಇಲ್ಲದಿದ್ದರೆ ರಾಜ್ಯಪಾಲರೇ ಮಧ್ಯೆ ಪ್ರವೇಶಿಸಿ ನೈಸ್ ವ್ಯವಹಾರವನ್ನು ಸಿಬಿ‌ಐ ತನಿಖೆಗೆ ವಹಿಸಿಕೊಡುವಂತೆ ನಿರ್ದೇಶನ ಕೊಡಬೇಕು ಎಂದು ಒತ್ತಾಯಿಸಿದರು.


Share: