ಭಟ್ಕಳ: ಪ್ರವಾದಿ ಮುಹಮ್ಮದ್ (ಸ) ವಿರುದ್ದ ನಿಂದನಾತ್ಮಕ ಹೇಳಿಕೆ ನೀಡುತ್ತಿರುವ ಉತ್ತರ ಪ್ರದೇಶದ ಯತಿ ನರಸಿಂಗಾನಂದ ಸ್ವಾಮಿಜಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಟ್ಕಳದ ಸಾಮಾಜಿಕ ಹಾಗೂ ರಾಜಕೀಯ ಸಂಸ್ಥೆ ತಂಝೀಮ್ ನೇತೃತ್ವದಲ್ಲಿ ಸರ್ವಜಮಾಅತ್ ಸಂಘಟನೆಗಳು ಮಂಗಳವಾರ ಭಟ್ಕಳ ಬಂದ್ ಗೆ ಕರೆ ನೀಡಿದ್ದು, ಮುಸ್ಲಿಂ ಸಮುದಾಯದಿಂದ ಅದಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಶಾಲಾ-ಕಾಲೇಜುಗಳು ಸೇರಿದಂತೆ ಎಲ್ಲ ರೀತಿಯ ವ್ಯಾಪಾರ ವ್ಯವಹಾರಗಳು ಸ್ಥಬ್ಧಗೊಂಡಿದ್ದು, ಮುಸ್ಲಿಂ ವ್ಯಾಪಾರಿಗಳ ಸಂಪೂರ್ಣ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು.
ಸೋಮವಾರದಂದು ತಾಲೂಕು ಆಡಳಿತ ಸೌಧದ ಮುಂದೆ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮುಸ್ಲಿಮರು ಹಾಗೂ ಹಿಂದೂ ಸಮುದಾಯದವರು ಈ ಬಂದ್ ಗೆ ಬೆಂಬಲ ಸೂಚಿಸಬೇಕೆಂದು ವಿನಂತಿಸಿದ್ದರು. ಆದರೆ, ಮಂಗಳವಾರ ಮುಸ್ಲಿಂ ಸಮುದಾಯ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದರೂ, ಹಿಂದೂ ಸಮುದಾಯದ ವ್ಯಾಪಾರಿಗಳು ಎಂದಿನಂತೆ ತಮ್ಮ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು.
ಯಾವುದೇ ಧಾರ್ಮಿಕ ವ್ಯಕ್ತಿಗಳ ವಿರುದ್ಧ ನಿಂದನಾತ್ಮಕ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ವಹಿಸುವುದು, ಮತ್ತು ನಿಂದಕರಾದ ನರಸಿಂಗಾನಂದ ಸ್ವಾಮಿಜಿಯನ್ನು ದೇಶದ್ರೋಹದ ಕೇಸುಗಳಡಿ ಬಂಧಿಸುವಂತೆ ಆಗ್ರಹಿಸುವುದು ಈ ಬಂದ್ ಉದ್ದೇಶವಾಗಿದೆ. ಪ್ರತಿಭಟನಾ ಸಭೆಯಲ್ಲಿ ಆಯೋಜಕರು ಒತ್ತಡವಿಲ್ಲದೆ ಸ್ವಯಂ ಪ್ರೇರಣೆಯಿಂದ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದ್ದು, ಮುಸ್ಲಿಂ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ಬೆಂಬಲ ನೀಡಿದ್ದಾರೆ.
ಭಟ್ಕಳದ ಪ್ರಮುಖ ಮಾರ್ಗಗಳಾದ ಕೇರಿ ರಸ್ತೆ, ಮುಖ್ಯ ರಸ್ತೆ, ಹಾಗೂ ಇತರ ವ್ಯಾಪಾರ ಕೇಂದ್ರಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಮುಸ್ಲಿಂ ಆಟೋ ರಿಕ್ಷಾ ಸೇವೆಗಳೂ ಸ್ಥಗಿತಗೊಂಡಿದ್ದವು. ಮುಸ್ಲಿಮೇತರ ಆಟೋ ರಿಕ್ಷಾಗಳು ಓಡುತ್ತಿದ್ದರೂ ಅದರಲ್ಲಿ ಪ್ರಯಾಣಿಸುವವರ ಕೊರತೆ ಎದ್ದು ಕಾಣುತ್ತಿತ್ತು. ಹಳೆಯ ಮೀನು ಮಾರುಕಟ್ಟೆ ತೆರೆದಿದ್ದರೂ ವ್ಯಾಪಾರಸ್ಥರ ಓಡಾಟ ಇರಲಿಲ್ಲ.
ವ್ಯಾಪಕ ಪೋಲೀಸ್ ಬಂದೋಬಸ್ತ್:
ಆಹಿತಕರ ಘಟನೆಗಳನ್ನು ತಡೆಯಲು ಸ್ಥಳೀಯ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, ಅತಿಯಾದ ಸುರಕ್ಷತೆಗಾಗಿ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ಬಲವರ್ಧನೆ ಮಾಡಲಾಗಿದೆ. ತಂಝೀಮ್ ಹಾಗೂ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಕಾರ್ಯಕರ್ತರು ಸ್ವಯಂ ಸೇವಕರಾಗಿ ಶಾಂತಿ ಕಾಪಾಡುವಲ್ಲಿ ಸಹಕರಿಸುತ್ತಿರುವುದು ಕಂಡು ಬಂತು.
ಮುಖ್ಯ ರಸ್ತೆ, ಹಳೆಯ ಬಸ್ ನಿಲ್ದಾಣ, ಮಾರಿಕಟ್ಟೆ, ರಥಬೀದಿ, ಮೊಹಮ್ಮದ್ ಅಲಿ ರಸ್ತೆ, ಶಂಸುದ್ದೀನ್ ವೃತ್ತ, ನವಾಯತ್ ಕಾಲೋನಿ, ಹಾಗೂ ಮದೀನಾ ಕಾಲೋನಿಯ ವ್ಯಾಪಾರಿಗಳು ಸಂಪೂರ್ಣವಾಗಿ ತಮ್ಮ ವ್ಯಾಪಾರವನ್ನು ಸ್ಥಗಿತಗೊಳಿಸಿದ್ದರು.
ಮುರುಡೇಶ್ವರದಲ್ಲೂ ಬಂದ್ ಗೆ ಬೆಂಬಲ: ಮುರುಡೇಶ್ವರದಲ್ಲಿ ಬಂದ್ ಗೆ ನೀಡದಿದ್ದರೂ ಸಹ ಅಲ್ಲಿನ ಜನರು ಸ್ವಯಂ ಪ್ರೇರಿತಗೊಂಡು ಬಂದ್ ಗೆ ಬೆಂಬಲ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮುರುಡೇಶ್ವರದ ನವಾಯತ್ ಕೇರಿ, ನ್ಯಾಶನಲ್ ಕಾಲೋನಿ, ನೂರ್ ಕಾಲೋನಿಯ ವ್ಯಾಪಾರಿಗಳೂ ತಮ್ಮ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಸ್ಲಿಮೇತರ ಅಂಗಡಿಗಳು ಕೆಲವೊಂದು ತೆರೆದಿದ್ದರೂ, ವ್ಯಾಪಾರ ಇರಲಿಲ್ಲ ಎಂದು ತಿಳಿದುಬಂದಿದೆ.