ಭಟ್ಕಳ, ಡಿಸೆಂಬರ್ ೬: ದೇಶದ ಮುಸ್ಲೀಮರನ್ನು ಹೊರ ದೇಶದ ಮುಸ್ಲೀಮರೂ ಪ್ರೀತಿಯಿಂದ ಕಾಣುತ್ತಿಲ್ಲ. ಬಹುಸಂಖ್ಯಾತರೆನಿಸಿಕೊಂಡ ಒಳಗಿನವರೂ ಅವರ ಮೇಲೆ ಸಂಶಯದ ನೋಟಗಳನ್ನು ಹರಿಬಿಡುತ್ತಿದ್ದು, ಇಲ್ಲಿಯ ಮುಸ್ಲೀಮರು ಒಂದು ರೀತಿಯಲ್ಲಿ ಅತಂತ್ರರಾಗಿದ್ದಾರೆ ಎಂದು ಹಿರಿಯ ಸಾಹಿತಿ ವಿಷ್ಣು ನಾಯ್ಕ ಹೇಳಿದ್ದಾರೆ.
ಅವರು ಡಾ.ಜಮಿರುಲ್ಲಾ ಷರೀಫರ ಅಭಿನಂದನಾ ಗ್ರಂಥ ಸಮರ್ಪಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜಮಿರುಲ್ಲಾ ಷರೀಫರ ‘ಅಲ್ಪಸಂಖ್ಯಾತರು ನಾವು, ಅಲ್ಪಬುದ್ದಿಯವರಲ್ಲ..’ ಎಂಬ ಕವನ ಸಾಲನ್ನು ಉಲ್ಲೇಖಿಸಿದ ಅವರು, ಸ್ವಾತಂತ್ರ್ಯ ಬಂದು ಅರವತ್ತು ವರ್ಷ ಕಳೆದರೂ ಅವರ ತಲೆಯಲ್ಲಿ ಆ ಭಾವನೆ ಬರಲು ನಾವೇ ಕಾರಣರಾಗಿದ್ದಾರೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದೊಂದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ಮಾನವ ಪ್ರಜ್ಞೆಯ ಮೊರೆ ಹೋದ ಮನಸ್ಸು ಮಾತ್ರ ಭೇದ ಭಾವವನ್ನು ಎಣಿಸಲಾರದು ಎಂದ ಅವರು ಇದರಲ್ಲಿ ಅಧ್ಯಯನ ಎಂಬುದು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ತಿಳಿಸಿದರು.