ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು:ರೈತರಿಗೆ ಅನ್ಯಾಯವಾಗದಂತೆ ಭೂಸ್ವಾಧೀನ:ಸಚಿವ ಮುರುಗೇಶ್ ನಿರಾಣಿ

ಮಂಗಳೂರು:ರೈತರಿಗೆ ಅನ್ಯಾಯವಾಗದಂತೆ ಭೂಸ್ವಾಧೀನ:ಸಚಿವ ಮುರುಗೇಶ್ ನಿರಾಣಿ

Mon, 15 Feb 2010 03:09:00  Office Staff   S.O. News Service

ಮಂಗಳೂರು,ಫೆ.13: ರಾಜ್ಯದಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಸಂದರ್ಭದಲ್ಲಿ ಕಚೇರಿಯಲ್ಲಿ ಕುಳಿತು ನಕ್ಷೆ ಮುಂದಿರಿಸಿ ಭೂಸ್ವಾಧೀನ ಪಡಿಸಿಕೊಳ್ಳದೆ, ಸ್ಥಳಕ್ಕೆ ತೆರಳಿ ನೈಜ ಪರಿಸ್ಥಿತಿ ಅರಿತು ರೈತರ ಸಹಮತವಿದ್ದರೆ ಮಾತ್ರ ಫಲವತ್ತಲ್ಲದ ಭೂಮಿಯನ್ನು ವಶಪಡಿಸಿಕೊಳ್ಳಲು ಮುಖ್ಯಮಂತ್ರಿಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್. ಮುರುಗೇಶ್ ನಿರಾಣಿ ಅವರು ಹೇಳಿದರು.

Nirani.JPG
 
ಇಂದು ಮಂಗಳೂರಿನ ಕೈಗಾರಿಕ ಮತ್ತು ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತರ ರಾಜ್ಯಗಳಲ್ಲಿರುವಂತೆ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ರಾಜ್ಯದಲ್ಲೂ ಅಳವಡಿಸಲು ನಿರ್ಧರಿಸಲಾಗಿದೆ. 2009-14 ರವರೆಗೆ ನೂತನ ಕೈಗಾರಿಕಾ ನೀತಿ ರೂಪಿಸಿದ್ದು ಐದು ಪ್ರಮುಖ ಜವಳಿ ಉದ್ಯಮದಡಿ ಮಹಿಳೆಯರಿಗೋಸ್ಕರ 10,000 ಉದ್ಯೋಗಗಳನ್ನು ಮೀಸಲಿರಿಸಿದೆ. ರಾಷ್ಟ್ರೀಯ ಹೆದ್ದಾರಿ ನಾಲ್ಕು ಮತ್ತು 7 ರ ಪಕ್ಕದಲ್ಲಿ ಕೃಷಿ ಯೋಗ್ಯವಲ್ಲದ ಜಮೀನನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕಾ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಭೆ ಜೂನ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಕೈಗಾರಿಕೋದ್ಯಮಿಗಳಿಗೆ ತೆರಿಗೆ ಭಾರವಾಗದ ಹಾಗೆ ಯೋಜನೆ ರೂಪಿಸಿದೆ ಎಂದರು.ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ 200 ಎಕರೆ ವ್ಯಾಪ್ತಿಯಲ್ಲಿ ಗ್ಲೋಬಲ್ ಫಿನಾನ್ಷಿಯಲ್ ಡಿಸ್ಟ್ರಿಕ್ಟ್ ನ್ನು ರಚಿಸಲಾಗುವುದು. ಈ ಬಗ್ಗೆ ಪ್ರಾಥಮಿಕ ಹಂತದಲ್ಲಿ 45 ಬ್ಯಾಂಕ್ ಗಳ ಸಭೆಯನ್ನು ಕರೆಯಲಾಗಿದೆ. ಮೂರು ಲಕ್ಷದ ಐದು ಸಾವಿರ ಕೋಟಿ ಯೋಜನೆಯಡಿ 658 ಪ್ರಾಜೆಕ್ಟ್ ಗಳನ್ನು ಸಂಪೂರ್ಣಗೊಳಿಸಿದ್ದು, 2 ಲಕ್ಷ ನಿರುದ್ಯೋಗಿಗಳಿಗೆ ಕೆಲಸ ನೀಡಲಾಗಿದೆ. ಕೈಗಾರಿಕೋದ್ಯಮಿಗಳಿಗೆ ಹಾಗೂ ಉದ್ದಿಮೆದಾರರಿಗೆ ತೊಂದರೆಯಾಗದಂತೆ ಯೋಜನೆಗಳು ಕಾರ್ಯಾನುಷ್ಠಾನಗೊಳ್ಳಲಿದೆ. ಸಣ್ಣ, ಗುಡಿ ಕೈಗಾರಿಕೆಗಳಿಗೆ 2007-08 ನೇ ಸಾಲಿನಲ್ಲಿ 30 ಕೋಟಿ ರೂ.ಬಿಡುಗಡೆ ಮಾಡಲಾಗಿದೆ. ಜನಸ್ಪಂದನ ಮಾದರಿಯಲ್ಲೇ ಕೈಗಾರಿಕಾ ಅದಾಲತ್ ನ್ನು ಹಮ್ಮಿಕೊಳ್ಳಲಾಗಿದೆ. ರೈತರ ಬೇಡಿಕೆಯಂತೆ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ ರೂಪಿಸಲಾದ ಸುವರ್ಣ ಕಾರಿಡಾರ್ ಯೋಜನೆಗೆ ಭೂಸ್ವಾಧೀನ ರದ್ದು ಮಾಡವ ಬಗ್ಗೆ ಅಲ್ಲಿನ ಜನಪ್ರತಿನಿಧಿಗಳು ಮತ್ತು ರೈತರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಯೋಗೀಶ್ ಭಟ್, ಕರಾವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ ಮತ್ತು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಉಪಸ್ಥಿತರಿದ್ದರು.
 
ಸೌಜನ್ಯ: ವಾರ್ತಾ ಭವನ 

Share: