ಬೆಂಗಳೂರು, ಫೆ.೧೩ : ಜಗತ್ತಿನಾದ್ಯಂತ ಇಂದು ನಡೆಯಲಿರುವ ಪ್ರೇಮಿಗಳ ದಿನಾಚರಣೆಗೆ ಅಡ್ಡಿಪಸಿಲು ಪ್ರಮೋದ್ ಮುತಾಲಿಕ್ ಯಾರು? ಅವರಿಗೆ ಅಧಿಕಾರ ಕೊಟ್ಟವರ್‍ಯಾರು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ಬೆಳವಣಿಗೆಳಿಂದ ಸಮಾಜದ ಆರೋಗ್ಯವನ್ನು ಹಾಳಾಗುತ್ತದೆ. ಇಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದರು.
ಪ್ರೇಮಿಗಳ ದಿನಾಚರಣೆಗೆ ನಮ್ಮ ಬೆಂಬಲವಿದೆ. ಇದನ್ನು ಆಚರಿಸಿಕೊಳ್ಳುವುದಕ್ಕೆ ಯಾವುದೇ ಅಡ್ಡಿಮಾಡಬಾರದು. ಇದಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ ಎಂದು ಹೇಳಿದರು.
ಉಡುಪಿಯಲ್ಲಿ ಕಾಂಗ್ರೆಸ್ ಮುಖಂಡರಾದ ಆಸ್ಕರ್ ಫರ್ನಾಂಡಿಸ್, ವಸಂತ ಸಾಲಿಯಾನ ಅವರ ನಿವಾಸದ ಮೇಲೆ ದಾಳಿ ನಡೆಸಿರುವುದು ಖಂಡನೀಯ. ಈ ಘಟನೆಗೆ ಕಾರಣರಾದವರನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಗದಗ್‌ನಲ್ಲಿ ಹಿರಿಯ ಸಹಕಾರಿ ಧುರೀಣ ಕೆ.ಎಚ್.ಪಾಟೀಲ್ ಅವರ ಪ್ರತಿಮೆಗೆ ಅಪಮಾನ ಮಾಡಿದ ಕಿಡಿಗೇಡಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದರು.