ಭಟ್ಕಳ, ಜನವರಿ 31: ಭಟ್ಕಳದಲ್ಲಿ ಕ್ರೈಸ್ತರ ಪವಿತ್ರ ಕ್ಷೇತ್ರಗಳ ಮೇಲಿನ ದಾಳಿಗೆ ಪೊಲೀಸ್ ಅಧಿಕಾರಿಗಳೇ ಕಾರಣ ಎಂದು ಅಲ್ಪಸಂಖ್ಯಾತರ ಆಯೋಗದ ಸದಸ್ಯ ಅಂತೋನಿ ಫರ್ನಾಂಡೀಸ್ ಆರೋಪಿಸಿದ್ದಾರೆ.
ಆರೋಪಿಗಳು ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಲಿಖಿತವಾಗಿ ಬೆದರಿಕೆಯ ಹೇಳಿಕೆ ನೀಡಿದ ದಿನವೇ ಅವರನ್ನು ಬಂಧಿಸಲು ಪೊಲೀಸರು ಮೀನಮೇಷ ಎಣಿಸಿದ್ದೇಕೆ ಎಂದು ಪ್ರಶ್ನಿಸಿದ ಅವರು, ಈ ಸಂಬಂಧ ಸರಕಾರಕ್ಕೆ ಹಾಗೂ ಅಲ್ಪಸಂಖ್ಯಾತರ ಆಯೋಗಕ್ಕೆ ಬರೆದುಕೊಳ್ಳಲಾಗುವುದು. ಆರೋಪಿಗಳ ಹಿಂಸಾತ್ಮಕ ಪ್ರಚೋದನೆಗೆ ಡಿವಾಯ್ಎಸ್ಪಿ ವೇದಮೂರ್ತಿಯವರ ತಾರತಮ್ಯ ನೀತಿಯೇ ಕಾರಣವಾಗಿರುವುದರಿಂದ ಸರಕಾರ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿರುವುದು ಸಮಾಧಾನ ತಂದಿದೆ ಎಂದ ಅವರು ಶಾಂತಿ ಪಾಲನೆಯ ದೃಷ್ಟಿಯಿಂದ ಇಂತಹ ಪ್ರಕರಣಗಳು ಪುನರಾವರ್ತನೆಯಾಗದಂತೆ ತಡೆಯಬೇಕಾಗಿದೆ ಎಂದು ಹೇಳಿದರು. ಕ್ರೈಸ್ತರ ಪವಿತ್ರ ಕ್ಷೇತ್ರಗಳಲ್ಲಿನ ಪ್ರತಿಮೆಗಳ ಸುತ್ತಮುತ್ತ ಕಬ್ಬಿಣದ ಬೇಲಿಯನ್ನು ಹಾಕುವ ಸಂಬಂಧ ಪೊಲೀಸ್ ಅಧಿಕಾರಿಗಳ ನೀಡಿರುವ ಸಲಹೆಯನ್ನು ಅವರು ಇದೇ ಸಂದರ್ಭದಲ್ಲಿ ತಿರಸ್ಕರಿಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಹೊಣೆಗಾರಿಕೆಯ ಬಗ್ಗೆ ಆಯೋಗದ ಅಧ್ಯಕ್ಷ ಖುಸ್ರೋ ಖುರೇಶಿ ಶನಿವಾರ ನೀಡಿದ ಹೇಳಿಕೆಗೆ ಇದು ತದ್ವಿರುದ್ದವಾಗಿರುವುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು.