ಭಟ್ಕಳ ಕಡವಿನಕಟ್ಟ ನದಿಯಲ್ಲಿ ಮುಳುಗಿ ಓರ್ವ ಬಾಲಕ ಹಾಗು ಮಹಿಳೆ ಸಾವು
ಭಟ್ಕಳ: ತಾಲೂಕಿನ ಗ್ರಾಮೀಣ ಪೊಲೀಸ್ ಠಾಣ ವ್ಯಾಪ್ತಿಯ ಕಡವಿನಕಟ್ಟೆ ಹೊಳೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ 4 ಗಂಟೆಗೆ ನಡೆದಿದೆ.
ಮೃತರನ್ನು ಪುರಸಭೆಯ ಕಾರು ಚಾಲಕ ಶಂಕರ್ ನಾಯ್ಕ ಅವರ ಪತ್ನಿ ಪಾರ್ವತಿ ನಾಯ್ಕ (39) ಹಾಗೂ ಸರ್ಕಾರಿ ITI ಕಾಲೇಜಿನಲ್ಲಿ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಸೂರಜ್ ಪಾಂಡು ನಾಯ್ಕ (17) ಎಂದು ಗುರುತಿಸಲಾಗಿದೆ.
ಐದಾರು ಮಂದಿ ಸ್ನೇಹಿತರು ಬಿಸಿಲಿನ ತಾಪವನ್ನು ತಣಿಸಲು ಕಡವಿನಕಟ್ಟೆ ನದಿಯ ಹಿನ್ನಿರಲ್ಲಿ ಈಜಲು ತೆರಳಿದ್ದರು ಎಂದು ತಿಳಿದುಬಂದಿದೆ.
ಇವರಲ್ಲಿ ಸೂರಜ್ ನೀರಿನ ಸೆಳೆತಕ್ಕೆ ಒಳಗಾಗಿ ಮುಳುಗಲು ಆರಂಭಿಸಿದ್ದಾನೆ. ಇದನ್ನು ಕಂಡು ಅಲ್ಲಿಯೇ ಇದ್ದ ಪಾರ್ವತಿ ಮುಳುಗುತ್ತಿರುವ ಸೂರಜ್ ನನ್ನು ರಕ್ಷಿಸಲು ಹೋಗಿ ಅವರೂ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ಮೂವರು ಬಾಲಕರು, ಓರ್ವ ಮಹಿಳೆ ಹಾಗು ಮೂರು ಬಾಲಕಿಯರು ಸೇರಿದಂತೆ ಒಟ್ಟು ಏಳು ಮಂದಿ ಹೊಳೆಗೆ ಹೋಗಿದ್ದರು ಎನ್ನಲಾಗಿದೆ.
ಸುದ್ದಿ ತಿಳಿಯುತಿದಂತೆ ನೂರಾರು ಮಂದಿ ಸರ್ಕಾರಿ ಆಸ್ಪತ್ರೆಯ ಶವಗಾರದ ಮುಂದೆ ಜಮಾಯಿಸಿದ್ದು ಮೃತ ಕುಟುಂಬದ ಸದಸ್ಯರಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಘಟನೆ ಕುರಿತಂತೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 21ರಂದು ಸೂಡಿಗದ್ದೆಬಳಿಯ ಹಡಿನ ಮುಳ್ಳಿ ಹಿತ್ಲು ಸಮುದ್ರದಲ್ಲಿ ಇಬ್ಬರು, ಮೇ 5 ರಂದು ಮುರ್ಡೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿದ್ದರು. ಪಾರ್ವತಿ ಹಾಗು ಸೂರಜ್ ಸೇರಿದಂತೆ ಕಳೆದ 30 ದಿನಗಳಲ್ಲಿ ಇದು ಮೂರನೆಯ ಘಟನೆಯಾಗಿದ್ದು ಇಲ್ಲಿಯ ತನಕ ಒಟ್ಟು 6 ಜನ ನೀರಿನಲ್ಲಿ ಮುಳುಗಿ ತಮ್ಮ ಪ್ರಾಣ ಕಳೆದುಕೊಂಡಂತಾಗಿದೆ.