ಬೆಂಗಳೂರು, ಜ.೧೮: ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡಿ ಕತ್ತಲಿನಲ್ಲಿ ಸಂಭವಿಸುವ ಅವಗಡಗಳಿಂದ ರೈತರು ಸಾವನ್ನಪ್ಪುತ್ತಿದ್ದು, ಈ ಕೊಲೆ ಪ್ರಕರಣಗಳಲ್ಲಿ ರಾಜ್ಯ ಸರಕಾರವೇ ಆರೋಪಿ ಎಂದು ರೈತರ ಮುಖಂಡರು ಕಿಡಿಕಾರಿದ್ದಾರೆ.
ಹಗಲು ವೇಳೆ ನಿರಂತರವಾಗಿ ೧೨ ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ನಂಜುಂಡಸ್ವಾಮಿ ಬಣದ ರೈತ ಸಂಘದ ಕಾರ್ಯಕರ್ತರು ಬೆಂಗಳೂರಿನಲ್ಲಿಂದು ಪ್ರತಿಭಟನೆ ನಡೆಸಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ವಿಫಲ ಯತ್ನ ನಡೆಸಿದರು. ಆದರೂ ಪಟ್ಟು ಬಿಡದೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ, ಬಳ್ಳಾರಿ, ಬೆಳಗಾವಿ, ಗದಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ರೈತರು ನಿರಂತರ ವಿದ್ಯುತ್ ಪೂರೈಕೆಯ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಇಂಧನ ಇಲಾಖೆ ಪ್ರಧಾನ ಕಾರ್ಯದರ್ಶಿ ಜೈರಾಜ್, ಒಂದು ವಾರದೊಳಗಾಗಿ ಬೇಡಿಕೆ ಈಡೇರಿಕೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿ ರೈತರನ್ನು ಸಮಾಧಾನ ಪಡಿಸಿದರು.
ಇದಕ್ಕೂ ಮೊದಲು ರೈತರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು ಸರಕಾರ ಐಟಿಬಿಟಿ ಕಂಪೆನಿಯವರು ಹವಾನಿಯಂತ್ರಿತ ಕೊಠಡಿಯಲ್ಲಿ ಕಾಲ ಕಳೆಯಲು ದಿನ ಪೂರ್ತಿ ವಿದ್ಯುತ್ ಪೂರೈಕೆ ಮಾಡುತ್ತಾರೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತನಿಗೆ ರಾತ್ರಿ ವೇಳೆ ವಿದ್ಯುತ್ ನೀಡಿ ಕೊಲೆ ಮಾಡುತ್ತಿದೆ ಎಂದು ಕಿಡಿಕಾರಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹುಚ್ಚವ್ವನಹಳ್ಳಿ ಮಂಜುನಾಥ್ ಮಾತನಾಡಿ, ಕೃಷಿ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆ ಮಾಡುವುದರಿಂದ ಕತ್ತಲಿನಲ್ಲಿ ಹೊಲಗಳಿಗೆ ತೆರಳಿದ ರೈತರಿಗೆ ಹಾವು ಕಡಿತ, ಕರಡಿ ದಾಳಿಯಂತಹ ಅವಗಡಗಳು ಸಂಭವಿಸುತ್ತಿವೆ. ಇವು ಉದ್ದೇಶ ಪೂರ್ವಕವಾಗಿ ಸರಕಾರ ಮಾಡುವ ತಪ್ಪಿನಿಂದ ಸಂಭವಿಸುತ್ತಿವೆ. ಈ ಕೊಲೆ ಆರೋಪವನ್ನು ರಾಜ್ಯ ಸರಕಾರ ಹೊತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೊಲಗಳಿಗೆ ತೆರಳಿದ ರೈತರಿಗಾದ ಅನಾಹುತಗಳಿಗೆ ಚಿಕಿತ್ಸೆ ವೆಚ್ಚ ಭರಿಸಲು ಕೆಲವೊಮ್ಮೆ ಕಷ್ಟವಾಗುತ್ತದೆ. ಆ ಸಂದರ್ಭದಲ್ಲಿ ರಾಜ್ಯ ಸರಕಾರ ಸೌಜನ್ಯ ಪೂರ್ವಕ ನೆರವಿಗೂ ಧಾವಿಸುವುದಿಲ್ಲ. ಅದೇ ಐಟಿ ಬಿಟಿ ಕಂಪೆನಿಗಳಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕಾಲ ಕಳೆಯಲು ಹಗಲು ರಾತ್ರಿ ಪೂರ್ತಿಯಾಗಿ ವಿದ್ಯುತ್ ಪೂರೈಕೆ ಮಾಡುತ್ತದೆ ಎಂದು ಅವರು ಕಿಡಿಕಾರಿದರು.
ಇದರ ಮಧ್ಯೆ ವಿದ್ಯುತ್ ಸೊರಿಕೆಗೆ ರೈತರ ಮೇಲೆ ಕಳ್ಳತನದ ಆರೋಪ ಹೊರಿಸಲಾಗುತ್ತಿದೆ. ವಾಸ್ತವವಾಗಿ ದೊಡ್ಡ ದೊಡ್ಡ ಕಂಪೆನಿಗಳು ಅಧಿಕಾರಿಗಳಿಗೆ ಲಂಚ ನೀಡಿ ವಾಮಮಾರ್ಗದ ಮೂಲಕ ಕೊಟ್ಯಂತರ ರೂಪಾಯಿ ಮೌಲ್ಯದ ವಿದ್ಯುತ್ ಕಳವು ಮಾಡುತ್ತಿದ್ದಾರೆ. ಅದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಯಡಿಯೂರಪ್ಪನವರ ಸಂಪುಟದಲ್ಲಿರುವ ವಿದ್ಯುತ್ ಕಳ್ಳತನದ ಆರೋಪಿ ಸಚಿವ ಮುರುಗೇಶ್ ನಿರಾನಿ ಎಂದು ಆರೋಪಿಸಿದರು.
ರೈತರು ಪ್ರಮಾಣಿಕವಾಗಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದಾರೆ. ಅಲ್ಲೊಮ್ಮೆ ಇಲ್ಲೊಮ್ಮೆ ಅನಧಿಕೃತ ಸಂಪರ್ಕಗಳಿದ್ದರೂ ಅಲ್ಲಿನ ಸೊರಿಕೆಯ ಪ್ರಮಾಣ ಕಡಿಮೆಯಾಗಿರುತ್ತದೆ. ಇದಕ್ಕಿಂತಲೂ ಭಾರೀ ಪ್ರಮಾಣದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ವಿದ್ಯುತ್ ಕಳವನ್ನು ಕೈಗಾರಿಕೆಗಳು ಮಾಡುತ್ತಿವೆ. ಸರಕಾರ ಮೊದಲು ಇದನ್ನು ತಡೆಗಟ್ಟಲಿ ಎಂದು ಅವರು ಸವಾಲು ಹಾಕಿದರು.
ಸಂಘದ ಅಧ್ಯಕ್ಷ ಕಲ್ಯಾಣ್‌ರಾವ್ ಮುಚ್ಚಳಂಬಿ ಮಾತನಾಡಿ, ರಸ್ತೆಗೆ ಮಣ್ಣು ಹಾಕಿ, ಗೋಡೆಗಳಿಗೆ ಸುಣ್ಣ ಬಳಿಯುವುದೇ ಅಭಿವೃದ್ಧಿಯಲ್ಲ. ದೇಶದ ಬೆನ್ನುಲುಬು ರೈತನಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಸಂತೃಪ್ತಿಯಿಂದ ಇರಿಸುವುದು ಅಭಿವೃದ್ಧಿಯ ಸಂಕೇತ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅರಿತುಕೊಳ್ಳಬೇಕು ಎಂದರು.
ಕರ್ನಾಟಕ ಜನಪರ ವೇದಿಕೆಯ ಕುಮಾರ ಸಮತಳ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರೈತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು.