ಭಟ್ಕಳ, ಜನವರಿ 14: ಇತ್ತಿಚೆಗೆ ಕುಮಟಾ ತಾಲೂಕಿನ ದೀವಗಿ ಗ್ರಾಮಪಂಚಾಯತ್ ನ ಅಂತ್ರವಳ್ಳಿಯಲ್ಲಿ ಜರುಗಿದ ಜನಸ್ಪಂದನಾ ಸಭೆಯಲ್ಲಿ ಶಾಸಕ ದಿನಗಕೆ ಶೆಟ್ಟಿ ಹಾಗೂ ಸಹಾಯಕ ಕಮಿಷನರ್ ಗಂಗೂಬಾಯಿ ಮಾನಕರ ರ ಮಧ್ಯೆ ನಡೆಯಿತೆನ್ನಲಾದ ಮಾತಿನ ಚಕಮಕಿ ಪ್ರಕರಣದ ಹಿನ್ನೆಲೆಯಲ್ಲಿ ಅದರ ತನಿಖೆಯನ್ನು ನಡೆಸುವ ಹೊಣೆಯನ್ನು ಭಟ್ಕಳದ ಸಹಾಯಕ ಕಮಿಷನರ್ ತ್ರಿಲೋಕ ಚಂದ್ರ ರಿಗೆ ಒಪ್ಪಿಸಲಾಗಿದ್ದು ಈ ನಿಟ್ಟಿನಲ್ಲಿ ಅಂತ್ರವಳ್ಳಿ ಜನಸ್ಪಂದನಾ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಒಟ್ಟು ಸೇರಿ ೮೪ ಜನರಿಗೆ ಭಟ್ಕಳ ಸಹಾಯಕ ಕಮಿಷನರ್ ತನಿಖೆಯನ್ನು ಕೈಗೊಳ್ಳಲು ತಮ್ಮ ಕಛೇರಿಗೆ ಹಾಜರಾಗಬೇಕೆಂದು ನೋಟಿಸು ಜಾರಿ ಮಾಡಿದ್ದರ ಹಿನ್ನೆಲೆಯಲ್ಲಿ ಬುಧವಾರದಂದು ಕುಮಟಾ ಸಹಾಯಕ ಕಮಿಷನರ್ ಗಂಗೂಬಾಯಿ ಮಾನಕರ್ ಸೇರಿದಂತೆ ಕುಮಟಾದ ಅಧಿಕಾರಿಗಳು, ತಾ.ಪಂ.ಗ್ರಾ.ಪಂ ಅಧ್ಯಕ್ಷರು ಸೇರಿದಂತೆ ಸುಮಾರು 45 ಜನ ಹಾಜರಾಗಿ ಮೌಖಿಕ ಹಾಗೂ ಲಿಖಿತ ಹೇಳಿಕೆಯನ್ನು ದಾಖಲು ಮಾಡಿದರು.

ಬುಧವಾರ ಬೆಳಿಗ್ಗೆಯಿಂದ ಆರಂಭವಾದ ಈ ವಿಚಾರಣೆಯು ಸಂಜೆ ತನಕವು ಮುಂದುವರಿದಿತ್ತು. ತನಿಖೆಗೆಂದು ಹಾಜರಾದ ಗಂಗೂಬಾಯಿ ಮಾನಕರ್ ತನಿಖಾಧಿಕಾರಿ ತ್ರಿಲೋಕಚಂದ್ರರ ಎದುರು ಸುಮಾರು ಒಂದು ಗಂಟೆಗೂ ಅಧಿಕ ಮೌಖಿಕ ಹಾಗೂ ಲಿಖಿತ ವಿಚಾರಣೆಗೊಳಗಾದರು ಎನ್ನಲಾಗಿದೆ. ಅದರಂತೆ ಕುಮಟಾದ ತಾ.ಪಂ.ಅಧ್ಯಕ್ಷೆ ಮಾಲತಿ ಹೆಗೆ, ಗ್ರಾ.ಪಂ ಅಧ್ಯಕ್ಷೆ ಶೋಭಾ ಭಟ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ದಿನೇಶ್ ಟಿ, ತಹಸಿಲ್ದಾರ್ ಎ.ಜಿ.ನಾಯ್ಕ, ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೆಜರ್ ವಿ.ಎಸ್. ಶ್ರೀಧರ್‌ಮೂರ್ತಿ, ಶಿಕ್ಷಣಾಧಿಕಾರಿ ಸಿ.ಟಿ.ನಾಯ್ಕ, ಸೇರಿದಂತೆ ಮುಂತಾದ ಅಧಿಕಾರಿಗಳು ಘಟನೆಯ ಕುರಿತು ಮೌಖಿಕ ಹಾಗೂ ಲಿಖಿತ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.
ಮಾನಕರ್ ಪ್ರತಿಕ್ರಿಯೆ: ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಕುಮಟಾದ ಸಹಾಯಕ ಕಮಿಷನರ್ ಗಂಗೂಬಾಯಿ ಮಾನಕರ್ ಕುಮಟಾದ ಅಂತ್ರವಳ್ಳಿಯಲ್ಲಿ ನಡೆದ ಜನಸ್ಪಂಧನಾ ಸಭೆಯಲ್ಲಿ ತಮ್ಮ ಕಡೆಯಿಂದ ಯಾವುದೆ ತಪ್ಪುಗಳು ಸಂಭವಿಸಿಲ್ಲ ಎಂದು ಹೇಳಿದ್ದು ಈ ಕುರಿತು ತಾನು ತನಿಖಾಧಿಕಾರಿಗಳ ಸಮಕ್ಷಮ ದಾಖಲೆಗಳ ಸಮೇತ ಹೇಳಿಕೆಯನ್ನು ನೀಡಿದ್ದೇನೆ ಎಂದು ಪ್ರತಿಕ್ರಿಯೆಸಿದ್ದಾರೆ. ಭಟ್ಕಳ ಸಹಾಯಕ ಕಮಿಷನರ್ ರ ಮುಂದೆ ಹೇಳಿಕೆಯನ್ನು ನೀಡಿ ಹೊರಬಂದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಇಲ್ಲಿಗೆ ತನಿಖೆಗಾಗಿ ಬಂದ ಅಧಿಕಾರಿಗಳು ಸಹ ವಾಸ್ತವಾಂಶವನ್ನು ಮುಂದಿಟ್ಟಿರುವ ಬಗ್ಗೆ ತಮಗೆ ವಿಶ್ವಾಸವಿದೆ ಎಂದರು. ತಾನು ಯಾರ ಅಧಿಕಾರವನ್ನು ಕಿತ್ತುಕೊಂಡಿಲ್ಲ ಮತ್ತು ಯಾರಿಗೂ ಅಗೌರವವನ್ನು ತೋರಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.