`ಮೈ ನೇಮ್ ಈಸ್ ಖಾನ್, ರಿಜ್ವಾನ್ ಖಾನ್! ನಾನು ಭಯೋತ್ಪಾದಕನಲ್ಲ'. ಹೌದು ಇದು ಜಗತ್ತಿನ ಇಂದಿನ ಬಹುತೇಕ ಮುಸ್ಲಿಮರ ಮನದಾಳದ ನೋವಿನ ಅಭಿವ್ಯಕ್ತಿ ಈ ಮಾತು. ಭಯೋತ್ಪಾದಕರಲ್ಲಿ ಹಲವಾರು ಧರ್ಮಕ್ಕೆ ಸೇರಿದವರಿರುವಂತೆ ಮುಸ್ಲಿಮರೂ ಸಹ ಇರಬಹುದು. ಆದರೆ ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ. ಕೆಲವು ಮತಾಂಧ ಲಾಡೆನ್ನಂತಹವರ ಅಸಹನೆ, ಕುಕೃತ್ಯದಿಂದ ಅದೇ ಮತದ ದುಡಿದುಣ್ಣುವ ಬಹುಸಂಖ್ಯಾತರ ಬದುಕು ಬರ್ಬರವಾಗಿದೆ. ಇರಿಯುವಂತೆ ನೋಡುವ ಗುಮಾನಿ ಕಣ್ಣುಗಳ ಅಡಿಯಲ್ಲಿ ಈ ಅಮಾಯಕರ ಜೀವನವೇ ದುಸ್ತರವಾಗಿದೆ.
ಇಂತಹ ಒಬ್ಬ ಮುಗ್ಧ, ತನ್ನ ಭಾವನೆಗಳನ್ನು ಅಭಿವ್ಯಕ್ತಗೊಳಿಸಲಾಗದ, ತನ್ನ ಸುತ್ತಲಿನ ಸಮಾಜದೊಂದಿಗೆ ಸಹಜವಾಗಿ ಹೊಂದಿಕೊಳ್ಳಲಾಗದ ಖಾಯಿಲೆಯಿಂದ (asperger syndrome) ಬಳಲುವ ಮುಸ್ಲಿಮನೊಬ್ಬನ ಬದುಕಿನ ಮೇಲಾಗುವ ದಾಳಿ, ಆತನ ತವಕ-ತಲ್ಲಣಗಳ ಚಿತ್ರಣವೇ `ಮೈ ನೇಮ್ ಈಸ್ ಖಾನ್- ಐಯಾಮ್ ನಾಟ್ ಎ ಟೆರರಿಸ್ಟ್'.
ಪ್ರಪಂಚದಲ್ಲಿರುವುದು ದುಷ್ಟರು - ಸಭ್ಯರು ಎಂಬ ಎರಡೇ ಬೇಧಗಳು ಮಾತ್ರ, ಮತಧರ್ಮಗಳಲ್ಲಿ ಅಲ್ಲ ಎಂಬ ತಾಯಿಯ ಆದರ್ಶದ ಪ್ರಭಾವದಡಿಯಲ್ಲಿ ಬೆಳೆಯುವ ರಿಜ್ವಾನ್ ಖಾನ್ ಎಲ್ಲರಿಗೂ ಒಳ್ಳೆಯದನ್ನೇ ಬಯಸುವ ಸಹೃದಯಿ. ಅಷ್ಟೇ ತೀಕ್ಷ್ಣಮತಿ. ಆದರೆ ತನ್ನ ಖಾಯಿಲೆಯಿಂದಾಗಿ ಸಮಾಜಮುಖಿಯಾಗದೇ ಸದಾ ಅಂತರ್ಮುಖಿಯಾಗಿರುತ್ತಾನೆ. ಬದುಕು ಅರಸಿಕೊಂಡು ಅಮೆರಿಕಕ್ಕೆ ತೆರಳುತ್ತಾನೆ ರಿಜ್ವಾನ್. ವಿಮಾನ ನಿಲ್ದಾಣದಲ್ಲಿಯೇ ಅಮೆರಿಕನ್ ಸರ್ಕಾರದ ಅಮಾನವೀಯ ತಪಾಸಣೆಗೆ ಒಳಪಟ್ಟು ಮಾನಸಿಕವಾಗಿ ಅಘಾತ ಅನುಭವಿಸುತ್ತಾನೆ. (ಇತ್ತೀಚೆಗೆ ಸ್ವತಃ ಶಾರುಖ್ ಖಾನ್ಗೆ ಇಂತದ್ದೇ ಪರಿಸ್ಥಿತಿ ನಿರ್ಮಾಣವಾಗಿ ದೊಡ್ಡ ಸುದ್ದಿಯಾಗಿದ್ದನ್ನು ಗಮನಿಸಬಹುದು) ಅಲ್ಲಿ ತಮ್ಮನ ವ್ಯಾಪಾರದಲ್ಲಿ ಕೈಜೋಡಿಸಿ, ಸೌಂದರ್ಯವರ್ಧಕ ವಸ್ತುಗಳನ್ನು ಬೀದಿಬೀದಿ ಸುತ್ತಿ ಮಾರಾಟಮಾಡುವ ಸೇಲ್ಸ್ಮನ್ ಆಗುತ್ತಾನೆ. ಅಲ್ಲಿ ಗಂಡನಿಂದ ದೂರವಾದ, ಹಿಂದು ಮಹಿಳೆ ಮಂದಿರಾ ಭೇಟಿಯಾಗುತ್ತಾಳೆ. ಈತನ ಮುಗ್ಧತೆಗೆ ಮಾರುಹೋಗುವ ಆಕೆ ಈತನನ್ನು ಮದುವೆಯಾಗುತ್ತಾಳೆ. ಆಕೆಗೆ ಒಬ್ಬ ಮಗನೂ ಇರುತ್ತಾನೆ. ರಿಜ್ವಾನ್ ಇಬ್ಬರನ್ನು ಬಹಳ ಪ್ರೀತಿಸುತ್ತಾನೆ.
ಸೆಪ್ಟೆಂಬರ್ 11ರ ದಾಳಿಯ ನಂತರದ ಕರಾಳತೆ
ಸಂತಸದಿಂದ ಇದ್ದ ಕುಟುಂಬಕ್ಕೆ ಅಘಾತವೊಂದು ಅಪ್ಪಳಿಸುತ್ತದೆ. ಸೆಪ್ಟೆಂಬರ್ 11, 2001 ರ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಭಯೋತ್ಪಾದಕರ ದಾಳಿ ಅಮೆರಿಕದ ಸಮಾಜದಲ್ಲಿನ ಅನೇಕ ಪಲ್ಲಟಗಳಿಗೆ ಕಾರಣವಾಗುತ್ತದೆ. ಎಲ್ಲೆಡೆಯೂ ಅವರನ್ನು ಗುಮಾನಿಯಿಂದ ಕಾಣುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಸರ್ಕಾರವೂ ಅವರ ಬಗ್ಗೆ ಬಿಗಿ ನಿಲುವು ತಾಳುವ ಕಾರಣದಿಂದ ಅವರಮೇಲೆ ದಾಳಿ ಹೆಚ್ಚಾಗುತ್ತವೆ. ಇಂತಹ ದಾಳಿಯಲ್ಲೇ ರಿಜ್ವಾನ್-ಮಂದಿರಳ ಮಗನ ಹತ್ಯೆಯಾಗುತ್ತದೆ.
ಮಗನನ್ನು ಕಳೆದುಕೊಂಡ ಮಂದಿರಾ ಇದಕ್ಕೆ ರಿಜ್ವಾನ್ನನ್ನೇ ದೂರುತ್ತಾಳೆ. ಆತನನ್ನು ಮದುವೆಯಾಗಿದ್ದೇ ತಪ್ಪೆಂದು, ಆತನ ಧರ್ಮದ ಕಾರಣದಿಂದಲೇ ಈ ಸ್ಥಿತಿ ಬಂದಿದ್ದೆಂದು, ತನನ್ನ್ನು ಬಿಟ್ಟು ಹೋಗುವಂತೆ ಆಗ್ರಹಿಸುತ್ತಾಳೆ. ಮಗನ ಸಾವಿನಿಂದ ನೊಂದ ರಿಜ್ವಾನ್, ಈಗ ಮಂದಿರಳ ತಿರಸ್ಕಾರದಿಂದ ಇನ್ನೂ ಕುಗ್ಗಿಹೋಗುತ್ತಾನೆ. ತನ್ನ ಹೆಸರು ರಿಜ್ವಾನ್ ಖಾನ್ ಎಂದಿರುವುದೇ ತಪ್ಪೆ ಎಂದು ಎಂದು ಪ್ರಶ್ನಿಸಿದಾಗ ಮಂದಿರಾ `ಇದನ್ನು ಹೋಗಿ ಅಮೆರಿಕದ ಅಧ್ಯಕ್ಷನ್ನು ಕೇಳು. ನನ್ನ ಹೆಸರು ಖಾನ್, ನಾನು ಭಯೋತ್ಪಾದಕನಲ್ಲ ಎಂದು ಹೇಳು' ಎಂದು ಆವೇಶದಲ್ಲಿ ಹೇಳುತ್ತಾಳೆ. ಅದನ್ನು ಗಂಭೀರವಾಗೇ ಪರಿಗಣಿಸುವ ರಿಜ್ವಾನ್ನ ಅಮೆರಿಕನ್ ಅಧ್ಯಕ್ಷರ ಭೇಟಿಯ ಪಯಣ ಶುರುವಾಗುತ್ತದೆ.
ಈ ಪಯಣದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಾನೆ ರಿಜ್ವಾನ್, ಪೊಲೀಸರಿಂದ ಬಂಧನಕ್ಕೊಳಗಾಗುತ್ತಾನೆ. ಟಿ.ವಿ. ಮಾಧ್ಯಮದಿಂದಾಗಿ ಅವನು ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಾನೆ. ವಿನಾಕಾರಣ ಬಂಧಿತನಾಗಿರುವುದಕ್ಕೆ ಅಮೆರಿಕಾದದ್ಯಂತ ಅಕ್ಷೇಪಣೆಯಿಂದಾಗಿ ಸರ್ಕಾರ ಆತನನ್ನು ಬಿಡುಗಡೆ ಮಾಡುತ್ತದೆ. ನಂತರವೂ ರಿಜ್ವಾನ್ ಅಧ್ಯಕ್ಷರ ಭೇಟಿಯ ಪಯಣ ಮುಂದುವರೆಸುತ್ತಾನೆ. ನೆರೆ ಹಾವಳಿಗೆ ಸಿಕ್ಕ ಜನರನ್ನು ಸಂಕಷ್ಟದಿಂದ ಪಾರು ಮಾಡಲು ಸಹಾಯ ಮಾಡುವ ಮೂಲಕ ತನ್ನ ಮಾನವೀಯತೆಯ ಪರಿಚಯ ಮಾಡಿಕೊಡುತ್ತಾನೆ. ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗುವ ರಿಜ್ವಾನ್, ಮುಸ್ಲಿಮರೆಲ್ಲರೂ ಭಯೋತ್ಪಾದಕರಲ್ಲ ಎಂದು ಜಗತ್ತಿಗೆ ಮನದಟ್ಟು ಮಾಡಿಕೊಡುತ್ತಾನೆ. ಮಂದಿರಾಳು ರಿಜ್ವಾನ್ನ ಪ್ರಾಮಾಣಿಕತೆ, ಸಹೃದಯತೆಗೆ ಮರುಗಿ ಮತ್ತೆ ಆತನನ್ನು ಕೂಡಿಕೊಳ್ಳುತ್ತಾಳೆ.
ಅಮೆರಿಕದಲ್ಲಿ ಬದಲಾವಣೆಯ ಗಾಳಿ ಬೀಸಿ, ಒಬಮಾ ಅಧ್ಯಕ್ಷ ಪದವಿಗೇರುತ್ತಾನೆ. ಸಾರ್ವಜನಿಕ ಸಮಾರಂಭವೊಂದರಲ್ಲಿ ರಿಜ್ವಾನ್ ಅಧ್ಯಕ್ಷರನ್ನು ಭೇಟಿಯಾಗಲು ಪ್ರಯತ್ನಿಸುತ್ತಾನೆ. ಇಷ್ಟೊತ್ತಿಗಾಗಲೇ ಸಾಕಷ್ಟು ಸುದ್ದಿಯಾಗಿದ್ದ ರಿಜ್ವಾನ್ನ್ನು ಸ್ವತಃ ಒಬಮಾ ಆತನನ್ನು ಭೇಟಿಯಾಗಲು ಬಯಸಿ, ಕರೆಸಿಕೊಳ್ಳುತ್ತಾನೆ. ಸಾರ್ವಜನಿಕವಾಗಿ ರಿಜ್ವಾನ್ ತನ್ನ ಮಾತನ್ನು ಹೇಳಲು ಅವಕಾಶ ಸಿಗುತ್ತದೆ. ಒಬಾಮಾ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿ, ಇಂತಹ ಪರಿಸ್ಥಿತಿಯನ್ನು ಸರಿಪಡಿಸುವ ಆಶ್ವಾಸನೆಯೊಂದಿಗೆ ಚಿತ್ರ ಮುಗಿಯುತ್ತದೆ.
ನಿರ್ದೇಶಕ ಕರಣ್ ಜೋಹರ್ ಮನರಂಜನೀಯ ಅಂಶಗಳಿಗೆ ಒತ್ತು ಕೊಡದೆ ಕಥೆಗೇ ಪ್ರಾಮುಖ್ಯತೆ ನೀಡಿ, ಅದರಲ್ಲಿ ಯಶಸ್ವಿಯಾಗಿದ್ದಾರೆ. ಕೆಲವೆಡೆ ಜಾಳು ಎನಿಸಿದರೂ ಕಥೆಯ ಪ್ರಸ್ತುತತೆಯಿಂದಾಗಿ ಚಿತ್ರ ಮನಮುಟ್ಟುತ್ತದೆ. ತಮ್ಮ ವಿಶಿಷ್ಟ ಅಭಿನಯದಿಂದ ರಿಜ್ವಾನ್ ಖಾನ್ ಪಾತ್ರದಲ್ಲಿ ಶಾರುಕ್ಖಾನ್ ಇಡೀ ಚಿತ್ರವನ್ನು ಆವರಿಸಿದ್ದಾರೆ. ತಮ್ಮ ಅಂಗಿಕ ಅಭಿನಯ ಮಾತ್ರವಲ್ಲದೇ, ಸಂಭಾಷಣೆಯ ಶೈಲಿ, ಧ್ವನಿಯನ್ನೂ ಸಾಕಷ್ಟು ಬದಲಾಯಿಸಿಕೊಂಡಿದ್ದಾರೆ ಶಾರುಕ್. ಹಿಂದು ಮಹಿಳೆ ಮಂದಿರಾ ಪಾತ್ರದಲ್ಲಿ ಕಾಜೋಲ್ ಅಭಿನಯವೂ ಗಮನಾರ್ಹ.
ಒಬಾಮ ಅಮೇರಿಕದ ಅಧ್ಯಕ್ಷರಾದ ಮೇಲೆ ಪರಿಸ್ಥಿತಿ ಬದಲಾಗಿದೆಯೇ? ತಮ್ಮ ತಾಯ್ನೆಲದಲ್ಲೇ ಪ್ಯಾಲೆಸ್ತೇನರನ್ನು ತಬ್ಬಲಿಗಳನ್ನಾಗಿಸುವ ಇಸ್ರೇಲ್ನ ಘೋರ ಆಕ್ರಮಣವನ್ನು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಬೆಂಬಲಿಸುವ ಅಮೇರಿಕದ ಧೋರಣೆ ಬದಲಾಗಿಲ್ಲ. ಭಯೋತ್ಪಾದನೆ ವಿರುದ್ಧ ಜಾಗತಿಕ ಸಮರ ಎನ್ನುವ ಪೊಳ್ಳು ಘೋಷಣೆಯಡಿ ಮುಸ್ಲಿಂ ಸಮುದಾಯವನ್ನು ದಾಳಿಗೆ ಗುರಿ ಮಾಡಿರುವ ಅಮೇರಿಕದ ಧೋರಣೆಯಲ್ಲಿ ಮೂಲಭೂತ ಬದಲಾವಣೆಯೇನು ಬಂದಿಲ್ಲ.
ಅಫಘಾನಿಸ್ತಾನದಲ್ಲಿ ತಾಲಿಬಾನರನ್ನು ಹುಟ್ಟುಹಾಕಿ ತರಬೇತಿ, ಶಾಸ್ತ್ರಾಸ್ತ್ರ ನೀಡಿ ಘೋಷಿಸಿದ್ದೇ ಅಮೇರಿಕನ್ ಸಾಮ್ರಾಜ್ಯಶಾಹಿ. ಈ ಅದರ ಕುತಂತ್ರ ಅದಕ್ಕೆ ತಿರುಗು ಬಾಣವಾಗಿದೆ. ವಿಷಯದ ಆಳ ಅಗಲವನ್ನು ಅರ್ಥ ಮಾಡಿಕೊಂಡವರು ಭಯೋತ್ಪಾದನೆಯ ಕುರಿತು ಧಾರ್ಮಿಕ ನೆಲೆಯಲ್ಲಿ ಯಾರನ್ನು ದಾಳಿಗೆ ಗುರಿ ಮಾಡುವುದಿಲ್ಲ.
ನಕುಲ
- ಸೌಜನ್ಯ: ಜನಶಕ್ತಿ