ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಶಿರೂರಿನಲ್ಲಿ ಗುಡ್ಡ ಕುಸಿತ ದುರಂತ - ನಾಪತ್ತೆಯಾದವರ ಪತ್ತೆ ಕಾರ್ಯಚರಣೆ ಮುಂದುವರಿಸಲು ಆಗ್ರಹ

ಭಟ್ಕಳ: ಶಿರೂರಿನಲ್ಲಿ ಗುಡ್ಡ ಕುಸಿತ ದುರಂತ - ನಾಪತ್ತೆಯಾದವರ ಪತ್ತೆ ಕಾರ್ಯಚರಣೆ ಮುಂದುವರಿಸಲು ಆಗ್ರಹ

Sat, 26 Oct 2024 00:09:09  Office Staff   SOnews

 

ಭಟ್ಕಳ: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಗುಡ್ಡ ಕುಸಿತದ ದುರಂತದಲ್ಲಿ ನಾಪತ್ತೆಯಾದ ಸಮಾಜದವರ ಪತ್ತೆ ಕಾರ್ಯಚರಣೆ ಮುಂದುವರಿಸಲು ಮತ್ತು ಅವರಿಗೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ, ಭಟ್ಕಳ ನಾಮಧಾರಿ ಸಮಾಜದ ಸದಸ್ಯರು ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ, ನಾಮಧಾರಿ ಸಮಾಜದ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಮಾತನಾಡಿ, "ಅಂಕೋಲಾದ ಶಿರೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಗುಡ್ಡ ಕುಸಿತದಲ್ಲಿ ನಮ್ಮ ಸಮುದಾಯದ ಜಗನ್ನಾತ ನಾಯ್ಕ ಮತ್ತು ಲೋಕೇಶ ನಾಯ್ಕ ನಾಪತ್ತೆಯಾಗಿದ್ದಾರೆ. ಅವರ ಶವಗಳು ಇನ್ನೂ ಪತ್ತೆಯಾಗಿಲ್ಲ. ಸರ್ಕಾರವು ಶೀಘ್ರ ಕ್ರಮ ಕೈಗೊಂಡು ಶವಗಳನ್ನು ಪತ್ತೆ ಮಾಡಬೇಕು ಮತ್ತು ಅವರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು. ನಮ್ಮ ಮನವಿಗೆ ಸೂಕ್ತ ಪ್ರತಿಕ್ರಿಯೆ ಸಿಗದಿದ್ದರೆ, ನಾವು ಬೀದಿಗಿಳಿದು ಹೋರಾಟ ನಡೆಸುವಂತಾಗುತ್ತದೆ," ಎಂದು ಅವರು ಎಚ್ಚರಿಸಿದರು.

ಈ ಮನವಿಯನ್ನು ಭಟ್ಕಳ ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ಅಶೋಕ ಭಟ್ ಅವರ ಮೂಲಕ ಸಲ್ಲಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದಿಂದ ಅನೇಕರು ತಮ್ಮ ಪ್ರಾಣ ಕಳೆದುಕೊಂಡಿದ್ದು, متاثرರಾದವರ ಕುಟುಂಬಗಳು ಅತಿದು:ಖದ ಮಡುವಿನಲ್ಲಿ ಇದ್ದಾರೆ. ನಾಮಧಾರಿ ಸಮಾಜದ ಜಗನ್ನಾತ ನಾಯ್ಕ ಮತ್ತು ಲೋಕೇಶ ನಾಯ್ಕ ಶವಗಳು ಪತ್ತೆಯಾಗಿಲ್ಲ. ಈ ದುರಂತಕ್ಕೆ ಐಆರ್‌ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಆರೋಪಿಸಲಾಗಿದ್ದು, ಪ್ರಾಕೃತಿಕ ಸಮತೋಲನ ಕದಡಿದ ಪರಿಣಾಮವಾಗಿ ಗುಡ್ಡ ಕುಸಿತ ಸಂಭವಿಸಿದೆ.

ನಾಪತ್ತೆಯಾದವರ ಪತ್ತೆ ಕಾರ್ಯ ನಿಲ್ಲಿಸಿರುವುದು ಸಂಬಂಧಿತ ಕುಟುಂಬಗಳಿಗೆ ಬೇಸರ ಉಂಟುಮಾಡಿದೆ. ದುರಂತವನ್ನು ಗಂಭೀರವಾಗಿ ಪರಿಗಣಿಸಿ, ನಾಪತ್ತೆಯಾದವರ ಪತ್ತೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಮತ್ತು ಹೆಚ್ಚಿನ ಪರಿಹಾರ ನೀಡಲು ಜಿಲ್ಲಾಡಳಿತಕ್ಕೆ ಸೂಕ್ತ ಸೂಚನೆ ನೀಡಬೇಕೆಂದು ಮನವಿ ಮಾಡಲಾಗಿದೆ. ಐಆರ್‌ಬಿ ಕಂಪನಿಯ ವಿರುದ್ಧ ಸೂಕ್ತ ತನಿಖೆ ನಡೆಸಬೇಕೆಂದೂ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ವೇಳೆ, ಭಟ್ಕಳ ಗುರುಮಠ ದೇವಸ್ತಾನದ ಅಧ್ಯಕ್ಷ ಅರುಣ್ ನಾಯ್ಕ, ಶಿರಾಲಿ ಸಾರದಹೋಳೆ ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಆರ್.ಕೆ. ನಾಯ್ಕ, ಪ್ರಮುಖರಾದ ಸುಬ್ರಾಯ ನಾಯ್ಕ, ಎಂ.ಆರ್. ನಾಯ್ಕ, ಡಿ.ಎಲ್. ನಾಯ್ಕ, ವಾಸು ನಾಯ್ಕ, ವಿಠ್ಠಲ್ ನಾಯ್ಕ, ಕೆ.ಆರ್. ನಾಯ್ಕ, ಮಹಾಬಲೇಶ್ವರ ನಾಯ್ಕ ಸೇರಿದಂತೆ ನಾಮಧಾರಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

 


Share: