ಬೆಂಗಳೂರು,ಮಾರ್ಚ್ 2;ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರದ ನೆರವಿನೊಂದಿಗೆ ಗುಪ್ತಳದವನ್ನು ಬಲಪಡಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.
ನೆನ್ನೆ ಶಿವಮೊಗ್ಗ ಹಾಗೂ ಹಾಸನಗಳಲ್ಲಿ ನಡೆದ ಗಲಭೆಯ ಕುರಿತಂತೆ ವಿಧಾನಸಭೆಯಲ್ಲಿಂದು ಪ್ರತಿಪಕ್ಷಗಳು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು ಈ ವಿಷಯ ಪ್ರಕಟಿಸಿದರು.
ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಲು ಗುಪ್ತದಳವನ್ನು ಬಲಪಡಿಸಬೇಕಿದೆ.ಹೀಗಾಗಿ ಗುಪ್ತದಳಕ್ಕೆ ಪ್ರತ್ಯೇಕ ನೇಮಕಾತಿ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ ಎಂದ ಅವರು,ಈ ಸಂಬಂಧ ಕೇಂದ್ರ ಸಚಿವ ಪಿ.ಚಿದಂಬರಂ ಅವರೊಂದಿಗೆ ಚರ್ಚೆ ನಡೆಸಿರುವುದಾಗಿ ನುಡಿದರು.
ನೆನ್ನೆ ನಡೆದ ಘಟನೆಯಲ್ಲಿ ಮೃತರಾದವರ ಕುಟುಂಬಗಳಿಗೆ ಮತ್ತು ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವುದಾಗಿ ಪ್ರಕಟಿಸಿದ ಅವರು,ರಾಜ್ಯದಲ್ಲಿ ಕಾನೂನು ಹಾಗೂ ಸುವ್ಯಸ್ಥೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಂಡಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡಲು ಸರ್ಕಾರ ಬದ್ಧವಿದೆ ಎಂದ ಅವರು,ನೆನ್ನೆ ನಡೆದ ಘಟನೆ ಅನಿರೀಕ್ಷಿತವಾದದ್ದು.ಇಷ್ಟಾದರೂ ಘಟನೆ ನಡೆದ ಕೂಡಲೇ ಪೋಲೀಸರು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದ್ದು ಶಿವಮೊಗ್ಗದಲ್ಲಿ ಪೂರ್ವ ವಲಯದ ಐಜಿಪಿ ಹಾಗೂ ಹಾಸನದಲ್ಲಿ ದಕ್ಷಿಣ ವಲಯದ ಐಜಿಪಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದೂ ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಲು ಅಗತ್ಯವಾದ ವಾತಾವರಣವನ್ನು ನಿರ್ಮಿಸಬೇಕು ಎಂದು ಸದನಕ್ಕೆ ಮನವಿ ಮಾಡಿದ ಅವರು,ನೆನ್ನೆ ನಡೆದ ಗಲಭೆಯಲ್ಲಿ ಆಗಿರುವ ಜೀವ ಹಾನಿ ಹಾಗೂ ಆಸ್ತಿ ಪಾಸ್ತಿ ಹಾನಿಯ ಕುರಿತು ವಿವರ ನೀಡಿದರು.
ಶಿವಮೊಗ್ಗದಲ್ಲಿ ವಿವಾದಗ್ರಸ್ತ ಲೇಖನ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಒಂಭತ್ತು ಪ್ರಕರಣಗಳು ದಾಖಲಾಗಿದ್ದು ಗೋಲಿಬಾರ್‌ನಿಂದ ಒಬ್ಬರು,ಹಾಗೂ ಗಲಭೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.ಐವತ್ತೇಳು ಮಂದಿ
ದಸ್ತಗಿರಿಯಾಗಿದ್ದು ಐವತ್ತು ಅಂಗಡಿಗಳಿಗೆ ಹಾನಿಯಾಗಿದೆ.ಮೂವತ್ತು ವಾಹನಗಳು ಹಾನಿಯಾಗಿದ್ದು ಹದಿನಾರು ಮಂದಿ ಪೋಲೀಸರಿಗೆ ಇಪ್ಪತ್ನಾಲ್ಕು ಮಂದಿಗೆ ಗಾಯಗಳಾಗಿವೆ ಎಂದು ಸ್ಪಷ್ಟ ಪಡಿಸಿದರು.
ಹಾಸನಲ್ಲಿ ಗಲಭೆಯಿಂದ ಒಂಭತ್ತು ಮಂದಿ ಸಾರ್ವಜನಿಕರು ಹಾಗೂ ಒಂಭತ್ತು ಮಂದಿ ಪೋಲೀಸರಿಗೆ ಗಾಯಗಳಾಗಿದ್ದು ನಲವತ್ತಾರು ಮಂದಿಯನ್ನು ದಸ್ತಗಿರಿ ಮಾಡಲಾಗಿದೆ.ಇಪ್ಪತ್ನಾಲ್ಕು ಅಂಗಡಿಗಳು ಹಾಗು ಇಪ್ಪತ್ತು ವಾಹನಗಳು ಹಾನಿಗೀಡಾಗಿವೆ ಎಂದು ನುಡಿದರು.
ರಾಜ್ಯದಲ್ಲಿ ಇಂತಹ ಪ್ರಕರಣಗಳು ನಡೆಯಲು ಬಿಡುವುದಿಲ್ಲ ಎಂದ ಅವರು,ಯಾವ ಶಕ್ತಿಯೇ ಆದರೂ ಕಾನೂನನ್ನು ಕೈಗೆತ್ತಿಕೊಂಡರೂ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ವಿವಾದಗ್ರಸ್ತ ಲೇಖನ ಪ್ರಕಟಿಸಿದ ಪತ್ರಿಕೆಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನುಡಿದ ಅವರು,ಒಟ್ಟಿನಲ್ಲಿ ಎಲ್ಲರೂ ಸೇರಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸುವಂತೆ ಮನವಿ ಮಾಡಿದರು.
ಇದಕ್ಕೂ ಮುನ್ನ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ,ನೆನ್ನೆ ನಡೆದ ಘಟನೆಯ ಬಗ್ಗೆ ಮುಖ್ಯಮಂತ್ರಿಗಳಿಗೆ ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ನೀಡಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರಲ್ಲದೇ ಗುಪ್ತದಳವಂತೂ ಸಂಪೂರ್ಣ ವಿಫಲವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ವಯಸ್ಸಾದವರು,ಕೆಲಸಕ್ಕೆ ಬಾರದವರು,ಪ್ರಭಾವ ಇಲ್ಲದವರು,ದೂರುಗಳನ್ನು ಹೊತ್ತವರನ್ನು ಗುಪ್ತದಳಕ್ಕೆ ನೇಮಕ ಮಾಡಲಾಗುತ್ತಿದ್ದು ಇದರ ಬದಲು ಆ ದಳವನ್ನು ಚುರುಕಾಗಿಡುವ ಉದ್ದೇಶದಿಂದ ಅಲ್ಲಿಗೆ ಪ್ರತ್ಯೇಕ ನೇಮಕಾತಿಯನ್ನೇ ಮಾಡಬೇಕು ಎಂದು ಒತ್ತಾಯಿಸಿದರು.
ಈ ವಿಷಯವನ್ನು ಹಿಡಿದು ಯಾರೂ ರಾಜಕೀಯ ಮಾಡುವ ಅಗತ್ಯವಿಲ್ಲ.ನಾಡಿನ ಹಿಂದೂ,ಮುಸ್ಲಿಂ ಹಾಗೂ ಕ್ರೈಸ್ತರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು.ಯಾವ ಕಾರಣಕ್ಕೂ ಪ್ರಚೋದನೆಗೊಳಗಾಗಬಾರದು ಎಂದು ಮನವಿ ಮಾಡಿದರು.
ನೆನ್ನೆ ನಡೆದ ಬೆಳವಣಿಗೆಗೆ ಸಂಬಂಧಿಸಿದಂತೆ ಸರ್ಕಾರ ಗಾಯಗೊಂಡವರಿಗೆ,ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ,ಸತ್ತವರಿಗೆ,ಮುಗ್ಧರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ರೇವಣ್ಣ;ನೆನ್ನೆ ನಡೆದ ಘಟನೆಗೆ ಕುಮ್ಮಕ್ಕು ನೀಡಿದವರು ಯಾರು ಎಂದು ಹೇಳಬೇಕಿಲ್ಲ.ಆದರೆ ಪತ್ರಿಕೆಯೊಂದರಲ್ಲಿ ಬಂದ ಲೇಖನದಿಂದ ಮನನೊಂದ ಅಲ್ಪಸಂಖ್ಯಾತ ಸಮುದಾಯದವರು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದರು.ಅವರಿಗೆ ಕುಮ್ಮಕ್ಕು ನೀಡಿದವರು ಯಾರು ಎಂದು ಹೇಳುವುದು ಬೇಡ.ಆದರೆ ಇನ್ನು ಮುಂದೆ ಇಂತಹ ಘಟನೆಗಳು ನಡೆಯಬಾರದು ಎಂದು ಹೇಳಿದರು.
ನೆನ್ನೆ ನಡೆದ ಘಟನೆಯಲ್ಲಿ ತೀರಿಕೊಂಡವರಿಗೆ,ಗಾಯಗೊಂಡವರಿಗೆ,ಆಸ್ತಿ ಪಾಸ್ತಿ ಕಳೆದುಕೊಂಡವರಿಗೆ ತಕ್ಷಣವೇ ಪರಿಹಾರ ನೀಡಬೇಕು ಎಂದೂ ಇದೇ ಸಂಧರ್ಭದಲ್ಲಿ ಅವರು ಒತ್ತಾಯಿಸಿದರು.