ಹಾಸನ, ನ.೨೯- ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಸಿರುವ ಬೆನ್ನಲ್ಲೆ ಚುನಾವಣೆ ಎದುರಿಸಲು ರಣತಂತ್ರ ರೂಪಿಸುವ ಕಾರ್ಯ ಆರಂಭಿಸಿದೆ. ಕಾರ್ಯಕರ್ತರ ಸಭೆಗಳನ್ನು ನಡೆಸಿ ವಿಶ್ವಾಸಕ್ಕೆ ತೆಗೆದುಕೊಂಡು ಡಿ.೪ ರಿಂದ ಪ್ರಚಾರ ಆರಂಭಿಸಲು ನಿರ್ಧರಿಸಿದೆ.
ಹಾಸನ ನಗರದಲ್ಲಿ ಭಾನುವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಒಮ್ಮತದಿಂದ ಪಕ್ಷದ ಅಭ್ಯರ್ಥಿ ಪಟೇಲ್ ಶಿವರಾಂ ಅವರ ಗೆಲುವಿಗೆ ಶ್ರಮಿಸಲು ನಿರ್ಧರಿಸಲಾಯಿತು.
ಡಿ.೪ ರಿಂದ ನಾಲ್ಕು ದಿನಗಳ ಕಾಲ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ರೇವಣ್ಣ ಅವರ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಜನಪ್ರತಿನಿಧಿಗಳ ಸಭೆ ನಡೆಸಲಾಗುವುದು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹೆಚ್.ಕೆ.ಜವರೇಗೌಡ ತಿಳಿಸಿದರು.
ಡಿ.೪ಕ್ಕೆ ಬೇಲೂರು, ೫ ರಂದು ಸಕಲೇಶಪುರ, ಆಲೂರು, ಡಿ.೬ ಅರಸೀಕೆರೆ, ಚನ್ನರಾಯಪಟ್ಟಣ, ಡಿ.೭ ರಂದು ಹಾಸನ, ಹೊಳೆನರಸೀಪುರ, ಅರಕಲಗೂಡು ಪಟ್ಟಣದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಲಾಗುವು ಎಂದು ಹೇಳಿದರು.
ಮಾಜಿ ಶಾಸಕರಾದ ಎ.ಟಿ.ರಾಮಸ್ವಾಮಿ, ಹೆಚ್.ಎಂ.ವಿಶ್ವನಾಥ್, ಬಿ.ವಿ.ಕರೀಗೌಡ, ಅಭ್ಯರ್ಥಿ ಪಟೇಲ್ ಶಿವರಾಂ, ಜಿ.ಪಂ. ಅಧ್ಯಕ್ಷೆ ಶ್ರೀಮತಿ ಕಾಮಾಕ್ಷಿರಾಜು, ಉಪಾಧ್ಯಕ್ಷ ಎ.ಇ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ, ಸದಸ್ಯ ಎಸ್.ದ್ಯಾವೇಗೌಡ, ಮುಖಂಡರಾದ ಎಂ.ಜಿ.ದೊಡ್ಡೇಗೌಡ, ಅಪ್ಪಣ್ಣಯ್ಯ ಇತರರು ಉಪಸ್ಥಿತರಿದ್ದರು.