ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಕ್ಷೇತ್ರ ಬಿಜೆಪಿ ಸಮಿತಿಯಿಂದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಭಟ್ಕಳ: ಕ್ಷೇತ್ರ ಬಿಜೆಪಿ ಸಮಿತಿಯಿಂದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

Wed, 06 Jan 2010 02:56:00  Office Staff   S.O. News Service
ಭಟ್ಕಳ, ಜನವರಿ 5: ಭಟ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಸಮಿತಿಯು ನೂತನ ಬೂತ್ ಮಟ್ಟದ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 
 
ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಟ್ಕಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಪರಮೇಶ್ವರ ಮೇಸ್ತ, ಪಕ್ಷದ ಸಂವಿಧಾನದಂತೆ ಕಾರ್ಯಕರ್ತರ ಸಲಹೆ ಪಡೆದು ಪದಾಧಿಕಾರಿಗಳ ಪಟ್ಟಿಯನ್ನು ರಚಿಸಲಾಗಿದೆ. ಪಕ್ಷ ಯಾರಿಗೆ ಜವಾಬ್ದಾರಿಯನ್ನು ನೀಡಿದೆಯೋ ಅವರೇ ಆ ಕೆಲಸವನ್ನು ಮಾಡಬೇಕಾಗುತ್ತದೆ. ಜಿಲ್ಲಾ ಬಿಜೆಪಿ ಸಮಿತಿಯ ನಿರ್ಣಯದಂತೆ ಪರಮೇಶ್ವರ ದೇವಾಡಿಗ ತಾಲೂಕು ಬಿಜೆಪಿ ಚುನಾವಣಾ ಸಂಚಾಲಕರಾಗಿದ್ದು, ಅವರ ಸಲಹೆಯನ್ನು ನೂತನ ಕಮಿಟಿ ರಚನೆಯ ಸಂದರ್ಭದಲ್ಲಿ ಪರಿಗಣಿಸಲಾಗಿದೆ ಎಂದು ವಿವರಿಸಿದರು. ಪಕ್ಷದೊಳಗಿನ ಭಿನ್ನಮತದ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಪ್ರಮುಖರ ಆಯ್ಕೆಯ ಕುರಿತಂತೆ ಜಿಲ್ಲಾ ಚುನಾವಣಾ ವೀಕ್ಷಕ ಆರ್.ಎನ್.ನಾಯಕ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಶಂಭು ಹೆಗಡೆ ಹಾಗೂ ಮಾಜಿ ಸಚಿವ ಶಿವಾನಂದ ನಾಯ್ಕರ ಸಮ್ಮುಖದಲ್ಲಿ ಈ ಹಿಂದೆ ಕರೆಯಲಾದ ಸಭೆಯಿಂದ ಜಿಲ್ಲಾ ಪಂಚಾಯತ ಸದಸ್ಯ ಎಮ್.ಎಮ್.ನಾಯ್ಕ ಹೊರ ನಡೆದಿದ್ದಾರೆ. ಅವರು ಪಕ್ಷದ ಚೌಕಟ್ಟಿನ ಹೊರಗಡೆ ಮಾತನಾಡುವುದಕ್ಕೆಲ್ಲ ಅರ್ಥವಿರುವುದಿಲ್ಲ ಎಂದು ತಿರುಗೇಟು ನೀಡಿದರು.
 
ಬಿಜೆಪಿಯ ಪ್ರಮುಖರೇ ವಿರೋಧಿ ಪಾಳಯದಲ್ಲಿ ಗುರುತಿಸಿಕೊಂಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಜನಪ್ರತಿನಿಧಿಗಳಾದಂತವರು ಪಕ್ಷದ ಕಾರ್ಯಕರ್ತರ ಪರಿಶ್ರಮದಿಂದಲೇ ಆ ಮಟ್ಟಕ್ಕೇರಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಕಾರ್ಯಕರ್ತರೇ ಇಂತಹ ಬೆಳವಣಿಗೆಯ ವಿರುದ್ಧ ತೀರ್ಮಾನ ತೆಗೆದುಕೊಳ್ಳುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಮಾರ್ನುಡಿದರು. ಜಿಲ್ಲೆ ಹಾಗೂ ತಾಲೂಕಿನ ಪಕ್ಷದ ಪ್ರಸಕ್ತ ಸ್ಥಿತಿಯ ಸುಧಾರಣೆಯ ಬಗ್ಗೆ ಪಕ್ಷದ ಹಿರಿಯರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಪಕ್ಷದಲ್ಲಿ ಯಾವುದೇ ಬಣಗಳಿಗೆ ಮಹತ್ವವಿಲ್ಲ ಎಂದ ಅವರು ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿಯೇ ಕೆಲಸ ಮಾಡುತ್ತಾರೆ ಎಂದು ವಿವರಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಚುನಾವಣಾ ಸಂಚಾಲಕ ಪರಮೇಶ್ವರ ದೇವಾಡಿಗ, ಕ್ಷೇತ್ರ ಬಿಜೆಪಿ ಸಮಿತಿಯ ಉಪಾಧ್ಯಕ್ಷ ಕೃಷ್ಣ ನಾಯ್ಕ, ಮುಖಂಡರುಗಳಾದ ನಾಗರತ್ನ ಪಡಿಯಾರ, ಪರಮೇಶ್ವರ ನಾಯ್ಕ, ಮೋಹನ ದೇವಾಡಿಗ, ಗೋವರ್ಧನ ನಾಯ್ಕ, ಕುಮಾರ ಹೆಬ್ಳೆ, ಮಂಗಳಾ ಗೊಂಡ, ಪಾಂಡು ನಾಯ್ಕ ಶಿರಾಲಿ, ದೀಪಕ ನಾಯ್ಕ, ಕೃಷ್ಣ ಮೊಗೇರ ಹೊನ್ನೆಗದ್ದೆ, ಗಣಪಯ್ಯ ಗೊಂಡ, ವೆಂಕಟೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ, ವರದಿ: ವಸಂತ ದೇವಾಡಿಗ, ಭಟ್ಕಳ


Share: