ಭಟ್ಕಳ, ಫೆಬ್ರವರಿ ೨೬,ಇಲ್ಲಿನ ಪ್ರವಾಸಿ ಬಂಗ್ಲೆಯಲ್ಲಿ ಗುರುವಾರದಂದು ಸಂಜೆ ಪೋಲಿಸ್ ಇಲಾಖೆಯಿಂದ ಈದ್ ಮಿಲಾದುನ್ನಬಿ ಹಾಗೂ ಹೋಳಿ ಹಬ್ಬದ ಪ್ರಯುಕ್ತ ಶಾಂತಿ ಸಭೆಯು ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿವೈಸ್ಪಿ ಡಾ. ವೇದಮೂರ್ತಿ ಹಿಂದು ಮುಸ್ಲಿಮ್ ಸಮುದಾಯದ ಹಬ್ಬಗಳು ಒಟ್ಟಿಗೆ ಕೂಡಿ ಬಂದಿರುವುದು ಪ್ರಕೃತಿಯರುವ ಸೌಹಾರ್ಧತೆಯನ್ನು ಎತ್ತಿ ತೋರಿಸುತ್ತದೆ. ಈ ಎರಡೂ ಹಬ್ಬಗಳನ್ನು ನಾವು ಶಾಂತಿ ಸೌಹಾರ್ದತೆಯಿಂದ ಆಚರಿಸುವಂತಾಗಬೇಕು ಎಂದು ಅವರು ಕರೆ ನೀಡಿದರು.
ಭಟ್ಕಳದಲ್ಲಿ ಸೌಹಾರ್ದತೆಯ ವಾತಾವರಣವನ್ನು ಮೂಡಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದ ಅವರು, ಯಾವುದೇ ಕಾರಣಕ್ಕೂ ಭಟ್ಕಳದ ಹೆಸರನ್ನು ಕೆಡಿಸಿವಂತಹ ಕಾರ್ಯವನ್ನು ಕೈಗೊಳ್ಳಬೇಡಿ ಎಂದು ಎರಡೂ ಸಮುದಾಯಕ್ಕೆ ಕಿವಿಮಾತನ್ನು ಹೇಳಿದರು. ದೇಶದಲ್ಲಿ ಎಲ್ಲೇ ಬಾಂಬ್ ಸ್ಪೋಟವಾದರೂ ಭಟ್ಕಳದ ಹೆಸರು ಕೇಳಿ ಬರುತ್ತಿರುವುದು ವಿಷಾದನೀಯ ಎಂದ ಅವರು ದೇಶದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರನ್ನು ಮಟ್ಟ ಹಾಕಲು ಪೊಲೀಸ್ ಇಲಾಖೆಗೆ ಸಾರ್ವಜನಿಕರು ಸಹಕರಿಸಬೇಕು. ದೇಶದ್ರೋಹಿ ಚಟುವಟಿಕೆಗಳನ್ನು ನಡೆಸುತ್ತಿರುವವರ ಬಗ್ಗೆ ಏನಾದರೂ ಮಾಹಿತಿ ಇದ್ದಲ್ಲಿ ಅದನ್ನು ಪೊಲೀಸ ಇಲಾಖೆಯ ಗಮನಕ್ಕೆ ತರುವ ಕೆಲಸ ಮಾಡಬೇಕಿದೆ. ಇತ್ತಿಚಿಗೆ ರಾಜ್ಯದ ದಿನಪತ್ರಿಕೆಯೊಂದರಲ್ಲಿ ಭಟ್ಕಳ ಕುರಿತಾಗಿ ಬಂದ ವರದಿಯನ್ನು ಉಲ್ಲೇಖಿಸುತ್ತ ಸೂಕ್ಷ್ಮ ಪ್ರದೇಶವಾದ ಭಟ್ಕಳದಲ್ಲಿ ಜನರು ಆತಂಕ ಪಡುವಂತಹ ಹೊರಗಿನ ಜನರು ಭಟ್ಕಳದ ಹೆಸರನ್ನು ಕೇಳಿ ಸಂಶಯ ವ್ಯಕ್ತಪಡಿಸುವಂತಹ ವರದಿ, ಲೇಖನಗಳು ಬರೆಯುದು ಬೇಡ ಎಂದ ಅವರು ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಇಲ್ಲಿ ಸದಾ ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕೆ ಎಲ್ಲರೂ ಒಗ್ಗಟ್ಟಾಗಬೇಕು ಎಂದು ಕರೆ ನೀಡಿದರು. ತಹಶೀಲ್ದಾರ ಎಸ್ ಎಂ ನಾಯ್ಕ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಎನೇ ಸಮಸ್ಯೆಯಾದರೂ ಇಲಾಖೆಯ ಗಮನಕ್ಕೆ ತರಬೇಕು ಎಂದರು. ಬಝ್ಮೆ ಪೈಝೆ ರಸೂಲ್ ಸಂಘಟನೆಯ ಮಸ್ತಾನ್ ಚಡ್ಡುಬಾಪ ಮಾತನಾಡಿ ಫೆ.೨೭ ರಂದು ಈದ್ ಮಿಲಾದ ಹಬ್ಬ ನಡೆಯುತ್ತಿದ್ದು, ಆ ಪ್ರಯುಕ್ತ ಅಂದು ಮಧ್ಯಾಹ್ನ ೩ ಗಂಟೆಗೆ ಈದ್ಗಾ ಮೈದಾನದಿಂದ ಮೆರವಣಿಗೆ ನಡೆಸಲಾಗುತ್ತದೆ. ಅದರಂತೆ ಮಾರ್ಚ ೧ ರಂದು ತಹಶೀಲ್ದಾರ ಕಚೇರಿಯ ಹಿಂಬದಿ ಮೈದಾನದಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗುತ್ತಿದ್ದು, ಇದಕ್ಕೆ ಅನುಮತಿ ಬೇಕು ಎಂದರು. ಆಸರಕೇರಿಯ ಶ್ರೀಧರ ನಾಯ್ಕ ಫೆ.೨೮ ರಂದು ಹೋಳಿ ಹಬ್ಬ ಆಚರಿಸಲಾಗುತ್ತಿದ್ದು, ಅಂದು ಸಂಜೆ ಆಸರಕೇರಿಯಿಂದ ನಗರದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದರು. ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಎಸ್ ಜೆ ಸೈಯ್ಯದ್ ಹಾಷಿಂ ಹಾಗೂ ಜಾಲಿ ಗ್ರಾಪಂ ಸದಸ್ಯ ಅಬ್ದುಲ್ ಸಲಾಮ ಮಾದ್ಯಮಗಳಲ್ಲಿ ಭಟ್ಕಳವನ್ನು ಭಯೋತ್ಪಾದಕರ ತಾಣವೆಂದು ವೈಭವಿಕರಿಸಿ ಬಂದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ವರದಿಯನ್ನು ಖಂಡಿಸಿ ಇದರಿಂದಾಗಿ ಇಲ್ಲಿನ ಸಮಸ್ತ ಮುಸ್ಲೀಂ ಸಮುದಾಯಕ್ಕೆ ನೋವು ತಂದಿದೆ. ಮಾದ್ಯಮಗಳಲ್ಲಿ ದಿನೇ ದಿನೇ ಒಂದೊಂದು ರೀತಿಯಲ್ಲಿ ವರದಿ ಬರುತ್ತಿರುವುದರಿಂದ ಭಟ್ಕಳದ ಹೆಸರು ಮತ್ತಷ್ಟು ಹಾಳಾಗುವಂತೆ ಮಾಡಿದೆ. ಮಾದ್ಯಮಗಳಲ್ಲಿ ತಿಳಿಸಿದಂತೆ ಇಲ್ಲಿ ಯಾವುದೇ ಚಟುವಟಿಕೆಗಳೂ ನಡೆಯುತ್ತಿಲ್ಲ. ಈ ಬಗ್ಗೆ ಯಾರಿಗಾದರೂ ಸಂಶಯವಿದ್ದಲ್ಲಿ ಯಾವುದೇ ಮಸೀದಿಗಳನ್ನು, ಮುಸ್ಲೀಂರು ವಾಸಿಸುತ್ತಿರುವ ಪ್ರದೇಶವನ್ನು ಪರಿಶೀಲಿಸಬಹುದು ಎಂದರು. ಸಭೆಯಲ್ಲಿ ನಾಮಧಾರಿ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಟಿ ಎನ್ ನಾಯ್ಕ, ಶ್ರೀನಿವಾಸ ಶೇಟ್, ನಾಗೇಶ ಪೈ, ಕೆ ಸುಲೇಮಾನ, ಅಂಜುಮನ್ ಸಂಸ್ಥೆಯ ಕಾರ್ಯದರ್ಶಿ ಸಿದ್ದಿಕ ಇಸ್ಮಾಹಿಲ್ ಮುಂತಾದವರು ಉಪಸ್ಥಿತರಿದ್ದರು