ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಲತಾಮಂಗೇಶ್ಕರ್ ಜೀವನಚರಿತ್ರೆ ಲೋಕಾರ್ಪಣೆ

ಬೆಂಗಳೂರು: ಲತಾಮಂಗೇಶ್ಕರ್ ಜೀವನಚರಿತ್ರೆ ಲೋಕಾರ್ಪಣೆ

Thu, 22 Apr 2010 03:32:00  Office Staff   S.O. News Service
ಬೆಂಗಳೂರು, ಅಕ್ಟೋಬರ್ 27:  ವಿಜಯಕರ್ನಾಟಕ ದಿನಪತ್ರಿಕೆಯ ಸುದ್ದಿ ಸಂಪಾದಕ ವಸಂತ್ ನಾಡಿಗೇರ್ ಬರೆದಿರುವ ಗಾನ ಕೋಗಿಲೆ ಲತಾಮಂಗೇಶ್ಕರ್ ಕುರಿತ ಹಾಡುಹಕ್ಕಿಯ ಹೃದಯಗೀತೆ ಕೃತಿಯನ್ನು ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಮ್ ಬೆಂಗಳೂರಿನಲ್ಲಿಂದು ಬಿಡುಗಡೆ ಮಾಡಿದರು.

ದಕ್ಷಿಣ ಭಾರತೀಯ ಭಾಷೆಯಲ್ಲಿ ಲತಾಜೀ ಅವರ ಕುರಿತು ಪ್ರಕಟವಾಗಿರುವ ಮೊದಲ ಕೃತಿ ಇದಾಗಿದ್ದು, ಇಂಥ ಅಮೂಲ್ಯ ಕೃತಿಯನ್ನು ಬಿಡುಗಡೆ ಮಾಡುವ ಸೌಭಾಗ್ಯ ತಮಗೆ ದೊರೆತಿದೆ ಎಂದು ವಿನಮ್ರವಾಗಿ ನುಡಿದರು.

ಲತಾ ಮಂಗೇಶ್ಕರ್ ಅವರ ಗಾನ ಮಾಧುರ್ಯಕ್ಕೆ ಮರುಳಾಗದವರೇ ಇಲ್ಲ. ಬಹುತೇಕ ಎಲ್ಲ ಭಾರತೀಯ ಸಂಗೀತ ಪ್ರಿಯರೂ, ಸಂಗೀತಾಸಕ್ತರಿಗೂ ಲತಾಜೀ ಸ್ಫೂರ್ತಿಯ ಸೆಲೆಯಾಗಿದ್ದಾರೆ. ತಾವು ಕೂಡ ಲತಾ ಮಂಗೇಶ್ಕರ್ ಅವರ ಗೀತೆಗಳಿಂದ ಪ್ರಭಾವಿತನಾಗಿಯೇ ಹಾಡುಗಾರನಾಗಿದ್ದೆಂದು ಹೇಳಿದರು.

ಕಿನ್ನರ ಕಂಠದ ಲತಾ ಅವರು ಶಾಪಗ್ರಸ್ತ ಗಂದರ್ಭ ಕನ್ನಿಕೆಯೇ ಇರಬೇಕು. ಆಕೆ ಭೂಮಿಯಲ್ಲಿ ಜನಿಸಿದ್ದು ನಮ್ಮ ಅದೃಷ್ಟ ಎಂದ ಎಸ್.ಪಿ.ಬಿ., ತಾವು ಲತಾಜೀ ಅವರೊಂದಿಗೆ ಹಾಡಿದ ಮಧುರ ಕ್ಷಣಗಳನ್ನು ಮೆಲಕು ಹಾಕಿದರು.

ಏಕ್ ದೂಜೆ ಕೇ ಲಿಯೇ ಚಿತ್ರದಲ್ಲಿ ಲತಾಜಿ ಅವರೊಂದಿಗೆ ಹಾಡುವ ಅವಕಾಶ ದೊರೆಯಿತಾದರೂ ಲಕ್ಷ್ಮೀಕಾಂತ್ ಪ್ಯಾರೇ ಲಾಲ್ ಅವರಿಗೆ ದಕ್ಷಿಣ ಭಾರತೀಯರೊಬ್ಬರಿಂದ ಹಿಂದಿ ಹಾಡು ಹಾಡಿಸುವ ಮನಸ್ಸಿರಲಿಲ್ಲ. ಆದರೆ, ಬಾಲಚಂದರ್ ತಮಗೆ ಆ ಅವಕಾಶ ದೊರಕಿಸಿಕೊಟ್ಟರು. ಲತಾಜಿ ಅವರ ಎದುರು ಕುಳಿತಿದ್ದ ತಮಗೆ ನಡುಕ ಉಂಟಾಗಿ ಕೈಯಲ್ಲಿದ್ದ ಚಹ ಲತಾಜೀ ಅವರ ಮೇಲೆ ಚಲ್ಲಿತು. ನನ್ನ ಬಾಂಬೆಯ ನಂಟು ಇಂದಿಗೆ ಮುಕ್ತಾಯ ಎಂದುಕೊಂಡೆ ಆದರೆ, ಇದೊಂದು ಶುಭ ಶಕುನ ಎಂದು ಹೇಳುವ ಮೂಲಕ, ಲತಾ ಮಂಗೇಶ್ಕರ್ ತಮ್ಮ ಮಗನನ್ನು ಸಂತೈಸುವಂತೆ ತಮ್ಮನ್ನು ಸಂತೈಸಿ ಧೈರ್ಯ ನೀಡಿದರು ಎಂದು ಹೇಳುವಾಗ ಭಾವುಕರಾದರು.

ಲತಾ ಮಂಗೇಶ್ಕರ್ ಅವರು ಅಷ್ಟು ದೊಡ್ಡ ಗಾಯಕಿಯಾದರೂ, ಸಾರ್ವಜನಿಕ ಸಮಾರಂಭಗಳಲ್ಲಿ ಹಾಡುವ ಮುನ್ನ ರಿಹರ್ಸಲ್ ಮಾಡದೆ ಹೋಗುವುದಿಲ್ಲ. ಕಾರ್ಯಕ್ರಮ ಸ್ಥಳಕ್ಕೆ 3 ಗಂಟೆ ಮೊದಲೇ ಬರುವ ಅವರ ಸಮಯಪಾಲನೆ ಅನುಕರಣೀಯ ಎಂದರು.

ಕನ್ನಡನಾಡಲ್ಲಿ ಹುಟ್ಟಬೇಕು : ತಾವು ತಮ್ಮ ವೃತ್ತಿ ಜೀವನದಲ್ಲಿ ಹಾಡಿದ ಎರಡನೇ ಹಾಡೇ ಕನ್ನಡ ಹಾಡು. ತಮಗೆ ಕನ್ನಡಿಗರು ತೋರಿಸಿರುವ, ತೋರಿಸುತ್ತಿರುವ ಪ್ರೀತಿ, ವಾತ್ಸಲ್ಯಕ್ಕೆ ತಾವು ಆಭಾರಿ ಎಂದ ಎಸ್.ಪಿ.ಬಿ. ತಮಗೆ ಮುಂದಿನ ಜನ್ಮ ಅಂತ ಒಂದಿದ್ದರೆ ತಾವು ಕನ್ನಡ ನಾಡಲ್ಲಿ ಹುಟ್ಟುಲು ಬಯಸುವುದಾಗಿ ಹೇಳಿದರು.

ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್  ಸುಂದರ ಬರವಣಿಗೆ, ಸುಲಲಿತ ನಿರೂಪಣೆಯಿಂದ ಕೂಡಿದ ಈ ಕೃತಿ ಓದುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇನ್ನು 500 ವರ್ಷ ಕಳೆದರೂ ಲತಾ ಮಂಗೇಶ್ಕರ್ ಅವರು ಹಾಡಿರುವ ಹಾಡುಗಳು ಚಿರಸ್ಥಾಯಿಯಾಗಿರುತ್ತವೆ ಎಂದರು.

ನಟಿ ಜಯಮಾಲಾ ಮಾತನಾಡಿ, ಒಮ್ಮೆ ಲತಾ ಮಂಗೇಶ್ಕರ್ ಅವರಿಗೆ ದಿಲೀಪ್ ಕುಮಾರ್ ಅವರು, ಮರಾಠಿಗರಿಗೆ ಉರ್ದು ಬರುವುದಿಲ್ಲ, ಅವರು ಉರ್ದು ಹಾಡು ಹಾಡಿದರೆ ಚೆನ್ನಾಗಿರುವುದಿಲ್ಲ ಎಂದರಂತೆ. ಅಂದಿನಿಂದಲೇ ಉರ್ದು ಕಲಿಯಲು ಆರಂಭಿಸಿದ ಲತಾಜಿ ಚೆನ್ನಾಗಿ ಉರ್ದು ಕಲಿತು ಉರ್ದು ಗೀತೆ ಹಾಡಿ ದಿಲೀಪ್ ಕುಮಾರ್ ಅವರಿಂದಲೇ ಶಹಬ್ಬಾಶ್ ಎನಿಸಿಕೊಂಡರು. ಇದು ಅವರ ಛಲ ತೋರಿಸುತ್ತದೆ ಎಂದರು.

ಕೃತಿ ಲೇಖಕ ವಸಂತ್ ನಾಡಿಗೇರ್, ತಮ್ಮ ಈ ಕೃತಿ ರಚನೆಗೆ ಕಾರಣರಾದ ವಿಶ್ವೇಶ್ವರಭಟ್,  ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಸಹೋದ್ಯೋಗಿಗಳಾದ ಕರಿಸ್ವಾಮಿ ಮತ್ತಿತರರನ್ನು ಕೃತಜ್ಞತೆಯಿಂದ ಸ್ಮರಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ವಿಶ್ವೇಶ್ವರ ಭಟ್, ಪತ್ರಿಕೆಯಲ್ಲಿ ಶೀರ್ಷಿಕೆ ಕೊಡುವುದರಲ್ಲಿ ಸಿದ್ಧಹಸ್ತರಾದ ವಸಂತ್ ನಾಡಿಗೇರ್ ಅವರ ಮೂಸೆಯಿಂದ ಮತ್ತಷ್ಟು ಉತ್ತಮ ಕೃತಿಗಳು ಹೊರ ಬರಲಿ ಎಂದು ಆಶಿಸಿದರು.

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ವಿಜಯಕರ್ನಾಟಕ ಪತ್ರಿಕೆಯ ಅಂಕಣಕಾರರಾದ ಷಡಷ್ಕರಿ, ಕಿರುತೆರೆಯ ನಿರ್ದೇಶಕ ಟಿ.ಎನ್. ಸೀತಾರಾಂ, ನಿರ್ಮಾಪಕ ಬಸಂತ್ ಕುಮಾರ್ ಪಾಟೀಲ್, ಮಂಗಳ ದಿನಪತ್ರಿಕೆಯ ಸಂಪಾದಕ ವೆಂಕಟನಾರಾಯಣ್ ಮತ್ತಿತರರು ಪಾಲ್ಗೊಂಡಿದ್ದರು.
 
ಸೌಜನ್ಯ: ೨೪ ದುನಿಯಾ 

Share: