ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಗೋವಾದಲ್ಲಿ ಸ್ಫೋಟ: ರಾಜ್ಯದ ಇಬ್ಬರ ಬಂಧನ

ಗೋವಾದಲ್ಲಿ ಸ್ಫೋಟ: ರಾಜ್ಯದ ಇಬ್ಬರ ಬಂಧನ

Sun, 01 Nov 2009 03:22:00  Office Staff   S.O. News Service
ಪಣಜಿ: ದೀಪಾವಳಿ ಸಂದರ್ಭದಲ್ಲಿ ಗೋವಾದ ಸ್ಯಾನ್‌ಕೋಲೆಯಲ್ಲಿ ಟೈಮ್ ಬಾಂಬ್ ಇಟ್ಟಿದ್ದ ಆರೋಪದ ಮೇಲೆ ಗೋವಾ ಪೊಲೀಸರು ಕರ್ನಾಟಕದ ಇಬ್ಬರನ್ನು ಬಂಧಿಸಿದ್ದಾರೆ. ಇವರಿಬ್ಬರನ್ನೂ ನ್ಯಾಯಾಲಯ ೧೩ ದಿನ ಪೊಲೀಸ್ ವಶಕ್ಕೊಪ್ಪಿಸಿದೆ. 
 
ಬೆಳಗಾವಿಯ ವಿನಾಯಕ ಪಾಟೀಲ್ (೨೭) ಹಾಗೂ ಕಾರವಾರದ ವಿನಯ್ ತಳೇಕರ್ (೩೦) ಬಂಧಿತರು.  ದೀಪಾವಳಿ ವೇಳೆ ಸ್ಕೂಟರ್‌ನಲ್ಲಿ ಒಯ್ಯುತ್ತಿದ್ದ ಬಾಂಬ್ ಮಾರ್ಗೋವಾದಲ್ಲಿ ಸ್ಫೋಟಗೊಂಡು ಸನಾತನ ಸಂಸ್ಥೆಯ ಸದಸ್ಯರಾದ ಮಲಗೊಂಡಾ ಪಾಟೀಲ್ ಹಾಗೂ ಯೋಗೇಶ್ ನಾಯಕ್ ಸತ್ತಿದ್ದರು.    
 
ಇದಾದ ಬೆನ್ನಲ್ಲೇ ಮಾರ್ಗೋವಾದಿಂದ ೨೦ ಕಿ.ಮೀ. ದೂರದಲ್ಲಿರುವ ಸ್ಯಾನ್‌ಕೋಲೆಯ ವ್ಯಾನೊಂದರಲ್ಲಿ ಬಾಂಬ್ ಪತ್ತೆಯಾಗಿತ್ತು. ತನ್ನ ವ್ಯಾನ್‌ನಲ್ಲಿ ಅನುಮಾನಾಸ್ಪದ ಬ್ಯಾಗ್ ಇದೆ, ಅದರಿಂದ ಗಡಿಯಾರದ ಟಿಕ್ ಟಿಕ್ ಶಬ್ದ ಬರುತ್ತಿದೆ ಎಂದು ಆ ವ್ಯಾನ್ ಚಾಲಕ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದ. ಪೊಲೀಸರು ತಪಾಸಣೆ ನಡೆಸಿ ಜಿಲಾಟಿನ್ ಕಡ್ಡಿಗಳು, ಡಿಟೋನೇಟರ್, ಟೈಮರ್ ಹಾಗೂ ಪವರ್ ಸರ್ಕೀಟ್ ಇದ್ದ ಆ ಬ್ಯಾಗನ್ನು ವಶಕ್ಕೆ ತೆಗೆದುಕೊಂಡು ನಿಷ್ಕ್ರಿಯಗೊಳಿಸಿದ್ದರು. 
 
ಈ ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರು ಇದೀಗ ವಿನಾಯಕ ಪಾಟೀಲ್ ಹಾಗೂ ವಿನಯ್ ತಳೇಕರ್‌ನನ್ನು ಬಂಧಿಸಿದ್ದಾರೆ. ‘ವಿಚಾರಣೆಗೆಂದು ಪಾಟೀಲ್ ಹಾಗೂ ತಳೇಕರ್ ಅವರನ್ನು ಕರೆಸಿ ಬಂಧಿಸಲಾಗಿದೆ’ ಎಂದು ಪೊಲೀಸ್ ಉಪ ಮಹಾನಿರ್ದೇಶಕ ರವೀಂದ್ರ ಯಾದವ್ ಸುದ್ದಿಗಾರರಿಗೆ ತಿಳಿಸಿದ್ದಾರೆ. 
 
ಪಾಟೀಲ್ ಹಾಗೂ ತಳೇಕರ್ ಗೋವಾದ ಪೊಂಡಾ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಈ ಪ್ರಕರಣದ ಕುರಿತು ಹೆಚ್ಚಿನ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ. 


ಸೌಜನ್ಯ: ಕನ್ನಡಪ್ರಭ


Share: