ಬೆಂಗಳೂರು,ಜ,೨೨: ರಾಜ್ಯದಲ್ಲಿರುವ ಎಲ್ಲಾ ಸೂರು ರಹಿತರಿಗೆ ಸೂರು ಒದಗಿಸಿಕೊಡುವ ಮಹತ್ವಾಕಾಂಕ್ಷೆಯನ್ನು ಹೊಂದಿರುವ ನೂತನ ವಸತಿ ನೀತಿಯನ್ನು ಫೆಬ್ರವರಿ ೧೫ ರೊಳಗೆ ಪ್ರಕಟಿಸುವುದಾಗಿ ವಸತಿ ಸಚಿವ ಕಟ್ಟಾಸುಬ್ರಮಣ್ಯ ನಾಯ್ಡು ಇಂದಿಲ್ಲಿ ಹೇಳಿದ್ದಾರೆ.
ತಮ್ಮನ್ನು ಭೇಟಿ ಮಾಡಿದ ಸುದ್ಧಿಗಾರರ ಜತೆ ಮಾತನಾಡಿದ ಅವರು ಈ ವಿಷಯ ತಿಳಿಸಿದರಲ್ಲದೇ,ರಾಜ್ಯದಲ್ಲಿರುವ ಸೂರು ರಹಿತರ ಸಂಖ್ಯೆ ಎಷ್ಟು ವಿವರವನ್ನು ಒದಗಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು ಮುಂದಿನ ಕೆಲವು ವರ್ಷಗಳಲ್ಲಿ ಇವರಿಗೆಲ್ಲ ಸೂರು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ೪.೫ ಲಕ್ಷ ಗುಡಿಸಲುಗಳಿರುತ್ತವೆ ಎಂದು ಅಂದಾಜು ಮಾಡಲಾಗಿದ್ದು ಪ್ರತೀ ವರ್ಷ ಒಂದೂವರೆ ಲಕ್ಷ ಮನೆಗಳನ್ನು ಕಟ್ಟುವ ಮೂಲಕ ಮೂರು ವರ್ಷಗಳಲ್ಲಿ ರಾಜ್ಯವನ್ನು ಗುಡಿಸಲು ರಹಿತ ರಾಜ್ಯವನ್ನಾಗಿ ಮಾರ್ಪಡಿಸುವುದಾಗಿ ಹೇಳಿದರು.
ಇದಕ್ಕಾಗಿ ೯೦೦ ಕೋಟಿ ರೂ ವೆಚ್ಚವಾಗಲಿದ್ದು ಈ ಪೈಕಿ ೨೬೪ ಕೋಟಿ ರೂಗಳನ್ನು ಕೇಂದ್ರ ಸರ್ಕಾರ ಒದಗಿಸಲಿದೆ.೪೦೦ ಕೋಟಿ ರೂ ನಂಜುಂಡಪ್ಪ ವರದಿಯ ಜಾರಿಗೆ ನೀಡಲಾಗುವ ಹಣದ ಬಾಬ್ತಿನಿಂದ ಬರಲಿದೆ.ಉಳಿದ ಹಣವನ್ನು ಸರ್ಕಾರವೇ ಭರಿಸಲಿದೆ ಎಂದು ನುಡಿದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡವರಿಗೆ ತಲಾ ೧.೧೦ ಲಕ್ಷ ರೂ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲು ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಅವರು ವಿವರಿಸಿದರು.
ಯೋಜನೆಯಡಿ ಬ್ಯಾಂಕುಗಳಿಂದ ಐವತ್ತು ಸಾವಿರ ರೂ ಸಾಲ ಕೊಡಿಸಲಾಗುವುದು,ಮೂವತ್ತೈದು ಸಾವಿರ ರೂಗಳನ್ನು ಕರ್ನಾಟಕ ಗೃಹ ಮಂಡಳಿ ಸಬ್ಸಿಡಿಯಾಗಿ ನೀಡುವುದು ಎಂದ ಅವರು,ಉಳಿದಂತೆ ರಾಜ್ಯ ಸರ್ಕಾರ ಹದಿನೈದು ಲಕ್ಷ ರೂಗಳನ್ನು ಅನುದಾನದ ರೂಪದಲ್ಲಿ ನೀಡಲಿದ್ದರೆ ಫಲಾನುಭವಿಗಳು ಹತ್ತು ಸಾವಿರ ರೂಗಳನ್ನು ನೀಡಬೇಕಾಗುತ್ತದೆ ಎಂದರು.
ಈ ವರ್ಷ ಅಂತಹ ಮೂರುವರೆ ಲಕ್ಷ ಮನೆಗಳನ್ನು ನಿರ್ಮಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ನುಡಿದ ಅವರು,ಇಂತಹ ಮನೆಗಳ ಪೈಕಿ ಪರಿಶಿಷ್ಟರಿಗೆ ಶೇಕಡಾ ೨೧ ರಷ್ಟು ಹಾಗೂ ಅಂಗವಿಕಲರಿಗೆ ಶೇಕಡಾ ೩ ರಷ್ಟು ಮನೆಗಳನ್ನು ಮೀಸಲಿರಿಸುವುದಾಗಿ ಸ್ಪಷ್ಟ ಪಡಿಸಿದರು.
ಅದೇ ರೀತಿ ನಗರಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದವರಿಗಾಗಿ ಒಂದು ಲಕ್ಷ ಮನೆಗಳನ್ನು ಕಟ್ಟಿಕೊಡಲು ಕೇಂದ್ರ ಸರ್ಕಾರ ಸೂಚಿಸಿದ್ದು ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ವಿವರ ನೀಡಿದರು.
ಇದರಲ್ಲಿ ಶೇಕಡಾ ಎರಡರ ಬಡ್ಡೀ ದರದಲ್ಲಿ ಸಾಲ ಒದಗಿಸಲಾಗುವುದು ಎಂದ ಅವರು,ಫೆಬ್ರವರಿ ಹತ್ತರೊಳಗೆ ಇದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗುವುದು ಎಂದೂ ಹೇಳಿದರು.
ಕರ್ನಾಟಕ ಗೃಹ ಮಂಡಳಿಯ ವತಿಯಿಂದ ಎರಡು ಲಕ್ಷ ನಿವೇಶನಗಳು ಹಾಗೂ ಒಂದು ಲಕ್ಷ ಮನೆಗಳನ್ನು ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ ಎಂದು ಇದೇ ಸಂಧರ್ಭದಲ್ಲಿ ಕಟ್ಟಾ ವಿವರಿಸಿದರು.
ವಸತಿ ಯೋಜನೆಗಳಿಗಾಗಿ ರೈತರಿಂದ ಭೂಮಿ ಪಡೆಯುವಾಗ ಯಾವುದೇ ರೀತಿಯ ಬಲವಂತ ಮಾಡುವುದಿಲ್ಲ.ತಾವಾಗಿಯೇ ಮುಂದೆ ಬಂದು ಅವರು ಭೂಮಿ ಕೊಟ್ಟರೆ ಮಾತ್ರ ಪಡೆಯುವುದಾಗಿ ಹೇಳಿದರು.
ಇದೇ ರೀತಿ ಅವರಿಂದ ಪಡೆದ ಭೂಮಿಯನ್ನು ಅಭಿವೃದ್ಧಿ ಪಡಿಸಿದ ಮೇಲೆ ಅವರಿಗೆ ಶೇಕಡಾ ಮೂವತ್ತೈದರಷ್ಟು ಪ್ರಮಾಣದ ಭೂಮಿಯನ್ನು ಕೊಡುವುದಾಗಿ ನುಡಿದ ಅವರು,ಒಂದು ವೇಳೆ ಅವರು ಇದು ಬೇಡ ಎಂದು ಹಣ ನೀಡಲಾಗುವುದು ಎಂದು ಸ್ಪಷ್ಟ ಪಡಿಸಿದರು.
ವಸತಿ ಯೋಜನೆಯ ಉದ್ದೇಶಕ್ಕಾಗಿ ಭೂಮಿಯನ್ನು ಪಡೆಯುವಾಗ ಕೇವಲ ನಿವೇಶನಗಳನ್ನಷ್ಟೇ ಮಾಡದೇ ಪ್ಲಾಟ್ಗಳನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಟ್ಟಲು ಆದ್ಯತೆ ನೀಡುವುದಾಗಿ ಹೇಳಿದರು.