ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು:ಬಿಜೆಪಿ ಅಂದ್ರೆ ಭಾರತೀಯ ಜಗಳ ಪಾರ್ಟಿ!

ಬೆಂಗಳೂರು:ಬಿಜೆಪಿ ಅಂದ್ರೆ ಭಾರತೀಯ ಜಗಳ ಪಾರ್ಟಿ!

Wed, 23 Dec 2009 03:03:00  Office Staff   S.O. News Service
ಬೆಂಗಳೂರು, ಡಿ. 22 : ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿದಿರುವ ಬಿಜೆಪಿಯ ಗ್ರಹಗತಿಯೇ ಚೆನ್ನಾಗಿದ್ದಂತಿಲ್ಲ. ಬಹುಶಃ ಯಡಿಯೂರಪ್ಪ ರಾಹುಕಾಲದಲ್ಲಿ ಮುಖ್ಯಮಂತ್ರಿ ಆಗಿ ಪ್ರಮಾಣ ಸ್ವೀಕರಿಸಿದರೆ? ಸರಕಾರ ರಚನೆಯಾದಾಗಿನಿಂದಲೂ ಈ ಸರಕಾರಕ್ಕೆ ನೂರೆಂಟು ವಿಘ್ನಗಳು, ಅಡ್ಡಿಗಳು, ಆತಂಕಗಳು ಎದುರಾಗತ್ತಲೇ ಇವೆ. ಪಕ್ಷದೊಳಗಿನ ಶಾಸಕರೇ ಈ ಸರಕಾರಕ್ಕೆ ಮುಳುವಾಗಿರುವುದು ವಿಪರ್ಯಾಸ. ಶಿಸ್ತಿನ ಪಕ್ಷಕ್ಕೆ ಮತ ಕೊಟ್ಟ ಮತದಾರ ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಾನೆ.

ಈ ಮೊದಲು ರೆಡ್ಡಿಗಳು ಅಬ್ಬರಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಿತ್ತೊಗೆಯಬೇಕು ಎಂದು ಶತಾಯಗತಾಯ ಪ್ರಯತ್ನ ನಡೆಸಿದರು. ಆದರೆ, ಹೈಕಮಾಂಡ್ ಮಧ್ಯೆ ಪ್ರವೇಶದಿಂದ ಬಿಕ್ಕಟ್ಟು ಶಮನಗೊಂಡಿತು. ಅದು ಮುಗಿದು ತಿಂಗಳು ಕಳೆದಿಲ್ಲ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮತ್ತವರ ಗ್ಯಾಂಗ್ ಭಿನ್ನಮತೀಯ ಚಟುವಟಿಕೆ ಆರಂಭಿಸಿ ಸರಕಾರದ ಬುಡಕ್ಕೆ ನೀರು ಬೀಡುವ ಕೆಲಸಕ್ಕೆ ಕೈಹಾಕಿದರು. ಗುರುವಾರ ಮಂತ್ರಿ ಮಾಡುವ ಭರವಸೆಯನ್ನು ರೇಣುಕಾಚಾರ್ಯಗೆ ನೀಡಿ ನಿರಮ್ಮಳವಾಗಿದ್ದ ಯಡಿಯೂರಪ್ಪ ಅವರಿಗೆ ಮತ್ತೊಂದು ಪೀಕಲಾಟ ಶುರುವಾಗಿದೆ. 

ಸದ್ಯ ಬಿಜೆಪಿ ಪಕ್ಷ ಮತ್ತು ಸರಕಾರದಲ್ಲಿ ಏನು ನಡೆಯುತ್ತದೆ ಎಂದು ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಾಗಲಿ, ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಗಾಗಲಿ, ರಾಜ್ಯಾಧ್ಯಕ್ಷ ಡಿ ವಿ ಸದಾನಂದಗೌಡ ಅವರಿಗಾಗಲಿ ತಿಳಿಯುತ್ತಿಲ್ಲ. ಎಲ್ಲರೂ ಅಸಹಾಯಕರಾಗಿ ಕೈಚೆಲ್ಲಿ ಕುಳಿತಿದ್ದಾರೆ. ಗಣಿಧಣಿಗಳು ಮಾತ್ರ ನಮಗೆ ಸಂಬಂಧಿಸಿದ್ದಲ್ಲ ಎಂದು ತಣ್ಣಗೆ ಬಳ್ಳಾರಿಯಲ್ಲಿ ತಮ್ಮ ವ್ಯವಹಾರದಲ್ಲಿ ಮಗ್ನರಾಗಿದ್ದಾರೆ. ಆದರೆ, ನಿಜವಾಗಿ ನರಳತೊಡಗಿರುವುದು ರಾಜ್ಯದ ಆರು ಕೋಟಿ ಮತದಾರರು. ಹಿಡಿ ಶಾಪ ಹಾಕುತ್ತಿರುವವರು ಕೂಡಾ ಇದೇ ಜನತೆ. 

ಯಡಿಯೂರಪ್ಪ ಭಿನ್ನಮತ ಶಮನಗೊಳಿಸಲು ರೇಣುಕಾಚಾರ್ಯಗೆ ಸಚಿವ ಸ್ಥಾನ ನೀಡಲು ಮುಂದಾಗಿದ್ದಾರೆ. ಆದರೆ, ರೇಣುಕಾಚಾರ್ಯ ಅವರನ್ನು ವಿರೋಧಿಸುವ ಗುಂಪೊಂದು ಸೃಷ್ಟಿಯಾಗಿದೆ. ಭಿನ್ನಮತೀಯ ಚಟುವಟಿಕೆ ನಡೆಸಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವ ರೇಣುಕಾಚಾರ್ಯಗೆ ಮಂತ್ರಿಗಿರಿ ನೀಡಬಾರದು. ಅದರ ಬದಲಾಗಿ ಪಕ್ಷದಲ್ಲಿರುವ ಹಿರಿಯ ಶಾಸಕರಿಗೆ ಮಂತ್ರಿಗಿರಿ ನೀಡಿ ಎಂದು ಸುಮಾರು 35 ಮಂದಿ ಶಾಸಕರು ಸಹಿ ಸಂಗ್ರಹಿಸಿ ಒತ್ತಾಯಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ ಮಂತ್ರಿಗಿರಿಯ ವಿರೋಧಿ ಗುಂಪಿನ ನಾಯಕ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಪಕ್ಷದಲ್ಲಿ ಹಿರಿಯ ಶಾಸಕರಾದ ಶಂಕರಲಿಂಗೇಗೌಡ, ರಾಮದಾಸ್, ನಾರಾಯಣಸ್ವಾಮಿ, ಎಸ್ ಕೆ ಬೆಳ್ಳುಬ್ಬಿ, ಸಿಟಿ ರವಿ ಅವರನ್ನು ಮಂತ್ರಿ ಮಾಡಲಿ. ರೇಣುಕಾಚಾರ್ಯ ಅವರಿಗೆ ಬೇಡವೇ ಬೇಡ. ಬುಧವಾರದ ಅಧಿವೇಶನಕ್ಕೆ ಮುನ್ನ ಶಾಸಕಾಂಗ ಸಭೆ ಕರೆದು ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. 

ರೇಣುಕಾಚಾರ್ಯ ಬೆಂಬಲಿಗರಾದ ರೋಣದ ಶಾಸಕ ಕಳಕಪ್ಪ ಬಂಡಿ, ರೇಣುಕಾಚಾರ್ಯ ಏಕೆ ಸಚಿವರಾಗಬಾರದು. ಆಕಸ್ಮಾತ್ ರೇಣುಕಾಚಾರ್ಯಗೆ ಮಂತ್ರಿಗಿರಿ ತಪ್ಪಿದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈವರೆಗೊ ರೇಣುಕಾಚಾರ್ಯ ಪರವಿದ್ದ ಎಸ್ ಕೆ ಬೆಳ್ಳುಬ್ಬಿ ರೇಣುಕಾಚಾರ್ಯ ಅವರ ಮಂತ್ರಿಗಿರಿ ವಿರೋಧಿಸಿ ಸಹಿ ಹಾಕಿರುವುದು ವಿಚಿತ್ರವಾಗಿದೆ. ನನ್ನ ವಿರುದ್ಧ ಯಾವುದೇ ಸಹಿ ಸಂಗ್ರಹಣೆ ನಡೆದಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ನಾನು, ಮುಖ್ಯಮಂತ್ರಿಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಒಟ್ಟಿನಲ್ಲಿ ಬಿಜೆಪಿಯಲ್ಲಿ ಏನೇನೂ ನಡೆಯುತ್ತಿದೆ. ಏನಾದರೂ ಆಗಬಹುದು...
 
ಸೌಜನ್ಯ: ದಟ್ಸ್ ಕನ್ನಡ 

Share: