ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಈ ತಿಂಗಳ 20 ರ ವೇಳೆಗೆ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲು ಈಶ್ವರಪ್ಪ ಕಸರತ್ತು

ಬೆಂಗಳೂರು: ಈ ತಿಂಗಳ 20 ರ ವೇಳೆಗೆ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲು ಈಶ್ವರಪ್ಪ ಕಸರತ್ತು

Sun, 14 Feb 2010 18:31:00  Office Staff   S.O. News Service

ಬೆಂಗಳೂರು,ಫೆ,೧೩-ರಾಜ್ಯದಲ್ಲಿ ಬಿಜೆಪಿಯನ್ನು ಬಲಿಷ್ಟಗೊಳಿಸಲು ಮುಂದಾಗಿರುವ ಪಕ್ಷಾಧ್ಯಕ್ಷ ಈಶ್ವರಪ್ಪ, ಇದಕ್ಕೆ ಪೂರಕವಾಗಿ ಈ ತಿಂಗಳ ೨೦ ರ ವೇಳೆಗೆ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಲು ಕಸರತ್ತು ನಡೆಸಿದ್ದಾರೆ.

 

 

ಇಂದಿಲ್ಲಿ ಹಿರಿಯ ಸಚವ ಜಗದೀಶ್ ಶೆಟ್ಟರ್ ಅವರ ನಿವಾಸದಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಎಲ್ಲರ ಸಲಹೆ ಪಡೆದಿರುವ ಈಶ್ವರಪ್ಪ ಇನ್ನೊಂದು ವಾರದ ವೇಳೆಗೆ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲು ತೀರ್ಮಾನಿಸಿದ್ದಾರೆ.

 

 

ಮುಖ್ಯಮಂತ್ರಿ ಯಡಿಯೂರಪ್ಪ, ಅನಂತಕುಮಾರ್, ಜಗದೀಶ್ ಶೆಟ್ಟರ್, ಸದಾನಂದಗೌಡ, ಎಂಪಿ ಕುಮಾರ್, ಸತೀಶ್ ಹಾಗೂ ಸಂತೋಷ್‌ಕುಮಾರ್ ಸೇರಿದಂತೆ ಹಲವು ಪ್ರಮುಖರಿದ್ದ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳ ಆಯ್ಕೆಗೆ ಸಂಬಂಧಿಸಿದಂತೆ ಈಶ್ವರಪ್ಪ ವಿವರವಾಗಿ ಚರ್ಚೆ ನಡೆಸಿದರು.

 

ಪ್ರಾದೇಶಿಕ ಸಮತೋಲನ, ಎಲ್ಲ ಜಾತಿ-ವರ್ಗಗಳಿಗೆ ಪ್ರಾತಿನಿಧ್ಯ, ಪಕ್ಷದ ಸಂಘಟನೆಗಾಗಿ ನಿರಂತರ ದುಡಿಯುವ ಶಕ್ತಿ ಇರುವ ನಾಯಕರನ್ನು ಪದಾಧಿಕಾರಿಗಳನ್ನಾಗಿ ಮಾಡಲು ಈಶ್ವರಪ್ಪ ಬಯಸಿದ್ದು ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಂಡ ಎಲ್ಲ ನಾಯಕರ ಸಲಹೆಯನ್ನು ಪಡೆದಿದ್ದಾರೆ.

 

 

ಈ ಮುನ್ನ ಹದಿನಾರು ಮಂದಿ ಪದಾಧಿಕಾರಿಗಳ ಪಟ್ಟಿಯನ್ನು ಬಹುತೇಕ ಸಿದ್ಧಪಡಿಸಲಾಗಿತ್ತಾದರೂ ಇದೀಗ ಆ ಸಂಖ್ಯೆ ಇಪ್ಪತ್ತೆರಡಕ್ಕೆ ತಲುಪಿದೆ ಎಂದು ಮೂಲಗಳು ವಿವರ ನೀಡಿವೆ.

 

ಸರ್ಕಾರದಲ್ಲಿರುವವರು ಮತ್ತು ನಿಗಮ ಮಂಡಳಿಗಳಲ್ಲಿರುವವರನ್ನು ಪದಾಧಿಕಾರಿಗಳನ್ನಾಗಿ ನೇಮಕ ಮಾಡದಿರಲು ತೀರ್ಮಾನಿಸಿರುವುದರಿಂದ ಸಂಸದರು,ಶಾಸಕರು ಹಾಗೂ ಕಾರ್ಯಕರ್ತರ ವಲಯಗಳಿಂದಲೇ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಬೇಕಿದೆ.

 

ಇಂದು ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಾದಿಯಾಗಿ ಹಲವರು ಪಕ್ಷ ಸಂಘಟನೆಗಾಗಿ ಇಂತಿಂತವರನ್ನು ನೇಮಕ ಮಾಡಬೇಕು ಎಂದು ಸಲಹೆ ನೀಡಿದ್ದು ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಈ ಎಲ್ಲ ಸಲಹೆಗಳನ್ನು ಸ್ವೀಕರಿಸಿದ್ದಾರೆ.

 

 

ಇಂದಿನ ಸಭೆಯಲ್ಲೇ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಬಹುತೇಕ ಸಿದ್ಧಪಡಿಸಲು ತೀರ್ಮಾನಿಸಲಾಗಿತಾದರೂ ಅನಂತಕುಮಾರ್ ದಿಲ್ಲಿಗೆ ಹೊರಡಲು ತರಾತುರಿ ತೋರಿಸಿದ ಪರಿಣಾಮವಾಗಿ ಇಂದಿನ ಮಾತುಕತೆ ಸಲಹೆ ಸ್ವೀಕರಿಸಲು ಸೀಮಿತವಾಯಿತು ಎಂದು ಹೇಳಲಾಗಿದೆ.

 

 

ಹೀಗಾಗಿ ಇನ್ನು ಮೂರ್‍ನಾಲ್ಕು ದಿನಗಳಲ್ಲಿ ಪುನ: ಕೋರ್ ಕಮಿಟಿ ಸಭೆಯನ್ನು ಕರೆಯಲು ನಿರ್ಧರಿಸಲಾಗಿದ್ದು ಅಲ್ಲಿ ಪದಾಧಿಕಾರಿಗಳ ಪಟ್ಟಿ ಬಹುತೇಕ ಅಂತಿಮಗೊಳ್ಳುವ ಸಾಧ್ಯತೆಗಳು ಇವೆ.

 

ಒಂದು ವೇಳೆ ಅಲ್ಲಿ ಪದಾಧಿಕಾರಿಗಳ ಪಟ್ಟಿ ಅಂತಿಮಗೊಳ್ಳದಿದ್ದರೆ ಫೆಬ್ರವರಿ ೧೭ ಹಾಗೂ ೧೮ ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಪರಿಷತ್ ಸಭೆಯ ಕಾಲದಲ್ಲಿ ಪ್ರತ್ಯೇಕವಾಗಿ ಸಭೆ ನಡೆಸಿ ಪದಾಧಿಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಈಶ್ವರಪ್ಪ ನಿರ್ಧರಿಸಿದ್ದಾರೆ.


Share: