ಭಟ್ಕಳ: ಮನೆಯಲ್ಲಿ ಯಾರು ಇರದ ಸಮಯದಲ್ಲಿ ಮಹಿಳೆಯೊರ್ವರು ಆತ್ಮಹತ್ಯೆ ಮಾಡಿಕೊಂಡಿದ್ದು, ಬಳಿಕ ಇದನ್ನು ನೋಡಿದ ತಾಯಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯಲ್ವಡಿಕವೂರ ಪಂಚಾಯಿತಿ ವ್ಯಾಪ್ತಿಯ ಸರ್ಪನಕಟ್ಟೆಯಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಯಲ್ವಡಿಕವೂರ ಪಂಚಾಯಿತಿಯ ಸರ್ಪನಕಟ್ಟೆ ಗೋರಿಕಲ್ ಮನೆಯ ಕೃಷ್ಣಮ್ಮ ನಾರಾಯಣ ನಾಯ್ಕ(೫೫) ಹಾಗೂ ಇವರ ಪುತ್ರಿ ಮಾದೇವಿ ದೊಡ್ಡಯ್ಯ ನಾಯ್ಯ(೩೭) ಆತ್ಮಹತ್ಯೆ ಮಾಡಿಕೊಂಡವರು. ಮನಯೆಲ್ಲಿ ಸೋಮವಾರ ಎಲ್ಲರೂ ಮದುವೆ ಸಮಾರಂಭಕ್ಕೆ ತೆರಳಿದಾಗ ಮೊದಲು ಮೊದೇವಿ ದೊಡ್ಡಯ್ಯ ನಾಯ್ಕ (ಮಗಳು) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಬಳಿಕ ಇದು ಮನೆಯ ಸದಸ್ಯರ ಗಮನಕ್ಕೆ ಬರುತ್ತಿರುವಂತೆ ಇದನ್ನು ಕಂಡ ತಾಯಿ ಕೃಷ್ಣಮ್ಮ ಕೂಡ ತನ್ನ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಗಳು ಮಾದೇವಿ ಮದುವೆಯಾಗಿ ೧೪ ವರ್ಷ ಆಗಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ೧೨ವರ್ಷಗಳಿಂದ ತನ್ನ ತಾಯಿಯ ಮನೆಯಲ್ಲಿ ಬೇರೆಯಾಗಿಯೆ ವಾಸವಿದ್ದಳು. ಭಾನುವಾರ ತಾಯಿ ಮಗಳ ನಡುವೆ ಯಾವುದೊ ವಿಷಯಕ್ಕೆ ಕಲಹ ಉಂಟಾಗಿದೆ ಈ ಹಿನ್ನಲೆಯಲ್ಲಿ ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮಾದೇವಿ ಡೆತ್ ನೋಟ್ ಬರೆದಿಟ್ಟಿದ್ದು ತನ್ನ ಸಾವಿಗೆ ಯಾರು ಕಾರಣರಲ್ಲ. ಆದರೆ ತನ್ನ ಶವವನ್ನು ತಾಯಿ ಮತ್ತು ಸಹೋದರ ನೋಡಬಾರದು ಎಂದು ಬರೆದಿದ್ದಳು. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿ.ಐ ಚಂದನ ಗೋಪಾಲ ತೆರಳಿ ತನಿಖೆ ಕೈಗೊಂಡಿದ್ದಾರೆ.