ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳದಲ್ಲಿ ಅನಿಯಮಿತ ವಿದ್ಯುತ್ ಕಡಿತ: ಹೆಸ್ಕಾಂ ಅಧಿಕಾರಿಗೆ ವಿವಿಧ ಸಂಘಟನೆಗಳ ಎಚ್ಚರಿಕೆ

ಭಟ್ಕಳದಲ್ಲಿ ಅನಿಯಮಿತ ವಿದ್ಯುತ್ ಕಡಿತ: ಹೆಸ್ಕಾಂ ಅಧಿಕಾರಿಗೆ ವಿವಿಧ ಸಂಘಟನೆಗಳ ಎಚ್ಚರಿಕೆ

Wed, 21 Apr 2010 14:13:00  Office Staff   S.O. News Service
ಭಟ್ಕಳದಲ್ಲಿ ಅನಿಯಮಿತ ವಿದ್ಯುತ್ ಕಡಿತ: ಮತ್ತೊಮ್ಮೆ ಗಡುವು ನೀಡಿದ ಸಂಘಟನೆಗಳು
ಭಟ್ಕಳ: ಭಟ್ಕಳದಲ್ಲಿ ಅನಿಯಮಿತ ವಿದ್ಯುತ್ ಕಡಿತದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅತಿಕ್ರಮಣದಾರರ ಹೋರಾಟ ಸಮಿತಿ ಮತ್ತು ಮಜ್ಲಿಸೆ ಇಸ್ಲಾಹ ವ ತಂಜೀಂ ನಿನ್ನೆ ಬೆಳಿಗ್ಗೆ ಮತ್ತೆ ಹೆಸ್ಕಾಂ ಕಚೇರಿಗೆ ತೆರಳಿ ಅನಿಯಮಿತ ವಿದ್ಯುತ್ ಕಡಿತವನ್ನು ನಿಲ್ಲಿಸಬೇಕೆಂದು ಆಗ್ರಹಿಸಿದೆ. ತಾಲೂಕಿನಲ್ಲಿ ಒಂದೊಮ್ಮೆ ಅನಿಯಮಿತ ವಿದ್ಯುತ್ ಕಡಿತ ಮುಂದುವರಿಸಿದಲ್ಲಿ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕಚೇರಿಯಲ್ಲೇ ಕೂಡಿ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಭಟ್ಕಳದಲ್ಲಿ ಕಳೆದ ಒಂದು ತಿಂಗಳಿನಿಂದ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತ ಮಾಡುತ್ತಿರುವುದನ್ನು ಪ್ರಸ್ತಾಪಿಸಿದ ತಂಜೀಂ ಅಧ್ಯಕ್ಷ ಡಾ. ಬದ್ರುಲ ಹಸನ್ ಮುಅಲ್ಲಿಮ್ ವಿದ್ಯುತ್ ಕಡಿತದಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ತಾಲೂಕಿನಲ್ಲಿ ವಿದ್ಯುತ್  ಎಷ್ಟೊತ್ತಿಗೆ ಹೋಗುತ್ತದೆ,ಬರುತ್ತದೆ ಎಂಬುದು ಗೊತ್ತಾಗುತ್ತಿಲ್ಲ. ಪ್ರತಿನಿತ್ಯ ಸಂಜೆ ೧.೧೫ ತಾಸು ವಿದ್ಯುತ್ ಕಡಿತ ಮಾಡಲಾಗುತ್ತಿದ್ದರೂ ಮತ್ತೆ ಹಗಲೊತ್ತಿನಲ್ಲಿ ತೆಗೆಯುವುದು ಯಾಕೆ ಎಂದು ಹೆಸ್ಕಾಂ ಅಭಿಯಂತರರಲ್ಲಿ ಪ್ರಶ್ನಿಸಿದರು. ಅತಿಕ್ರಮಣ ಹೋರಾಟಗಾರರ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ ಅಸಮರ್ಪಕ ವಿದ್ಯುತ್ ಕಡಿತದಿಂದ ತಾಲೂಕಿನ ಜನತೆ ಆಕ್ರೋಶಗೊಂಡಿದ್ದಾರೆ. ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳು, ರೈತರು,ಉದ್ಯಮಿಗಳು,ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಕಳೆದ ವಾರ ಹೆಸ್ಕಾಂ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಯಂತರರು ಸಂಜೆ ಹೊರತಾಗಿ ಬೇರೆ ಸಮಯದಲ್ಲಿ ವಿದ್ಯುತ್ ತೆಗೆಯುವುದಿಲ್ಲ ಎಂಬ ಭರವಸೆ ನೀಡಿದ್ದರು. ಆದರೆ ಪದೇ ಪದೇ ವಿದ್ಯುತ್ ಕಡಿತಗೊಳಿಸಿದ್ದರಿಂದ ನಾವು ಮತ್ತೆ ಕಚೇರಿಗೆ ಬರುವಂತಾಗಿದೆ. ಇದೇ ರೀತಿ ವಿದ್ಯುತ್ ಕಡಿತ ಮುಂದುವರಿಸಿದಲ್ಲಿ ಹೆಸ್ಕಾಂ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಗಳನ್ನು ಕಚೇರಿ ಒಳಗಡೆ ಇರುವಂತೆ ಮಾಡಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇವರ ಪ್ರಶ್ನೆಗೆ ಉತ್ತರಿಸಿದ ಹೆಸ್ಕಾಂ ಅಧಿಕಾರಿ ದಯಾಳ ವಿದ್ಯುತ್ ಕಡಿತ ನಾವು ಮಾಡುತ್ತಿಲ್ಲ. ಕಡಿತವನ್ನು ಮೇಲಿನಿಂದಲೇ ಮಾಡಲಾಗುತ್ತಿದೆ. ತಾಲೂಕಿನಲ್ಲಿ ವಿದ್ಯುತ್ ಕಡಿತದಿಂದಾಗುತ್ತಿರುವ ಸಮಸ್ಯೆಯ ಕುರಿತು ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಮಹಮ್ಮದ್ ಸಾಧಿಕ ಮಾತನಾಡಿ ನಗರದಲ್ಲಿ ಸಂಜೆ ಆರು ಗಂಟೆಗೆ ಬೀದಿ ದೀಪಗಳನ್ನು ಹಚ್ಚಲಾಗುತ್ತಿದೆ. ಬೆಳಿಗ್ಗೆ ಎಂಟು ಗಂಟೆಯಾದರೂ ನಂದಿಸುತ್ತಿಲ್ಲ. ಬೀದಿ ದೀಪ ಮುಂಚಿತವಾಗಿ ಹಾಕುವುದಕ್ಕಿಂತ ಸ್ವಲ್ಪ ತಡವಾಗಿ ಹಾಕಿದರೆ ಹಾಗೂ ಬೆಳಿಗ್ಗೆ ಮುಂಚಿತವಾಗಿ ನಂದಿಸಿದಲ್ಲಿ ಹೆಚ್ಚಿನ ವಿದ್ಯುತ್ ಉಳಿಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಉತ್ತರಿಸಿದ ದಯಾಳ ಈಗಾಗಲೇ ಪುರಸಭೆ ಹಾಗೂ ಗ್ರಾಮ ಪಂಚಾಯತ್‌ಗಳಿಗೆ ಇದೇ ಸಂಬಂಧವಾಗಿ ನೋಟೀಸು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ತಂಜೀಂ ಪ್ರಧಾನ ಕಾರ್ಯದರ್ಶಿ ಎಸ್ ಜೆ ಖಾಲೀದ, ಅಬ್ದುಲ ರಖೀಬ ಎಮ್.ಜೆ,  ಕೆ ಸುಲೇಮಾನ, ಗಣಪತಿ ನಾಯ್ಕ, ಎಪ್ ಕೆ ಮೊಗೇರ, ಅಬ್ದುರ್ರಹೀಮ, ನಝೀರ್ ಕಾಶೀಂ ಜಿ, ಇಕ್ಬಾಲ್ ಸುಹೈಲ್ ಮುಂತಾದವರು ಉಪಸ್ಥಿತರಿದ್ದರು.


Share: