ಮೈಸೂರು, ಜ.18 .2010ರಲ್ಲಿ ಕನ್ನಡ ಚಿತ್ರರಂಗ ಮತ್ತೊಂದು ಆಘಾತ ಅನುಭವಿಸಿದೆ. ಸಾಹಸ ಸಿಂಹ ವಿಷ್ಣುವರ್ಧನ್ ಅವರನ್ನು ಕಳೆದುಕೊಂಡ ಆಘಾತ ಇನ್ನೂ ಕನ್ನಡಿಗರ ಜನಮಾನಸದಿಂದ ಮಾಸಿಲ್ಲ. ಅದಾಗಲೇ ‘ಚಾಮಯ್ಯ ಮೇಷ್ಟ್ರು’ ಎಂಬ ಖ್ಯಾತಿಯ ಹಿರಿಯ ನಟ ಕೆ.ಎಸ್.ಅಶ್ವತ್ಥ್ (85) ನಗರದ ಬಿ.ಎಂ.ಆಸ್ಪತ್ರೆಯಲ್ಲಿ ಸೋಮವಾರ ಬೆಳಗಿನ ಜಾವ 2.40 ನಿಮಿಷಕ್ಕೆ ನಿಧನರಾಗಿದ್ದಾರೆ.
ಮೆದುಳು ಮತ್ತು ನರಸಂಬಂಧಿ ಸಮಸ್ಯೆಯಿಂದ ಅವರು ಜ.೧೩ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ೨೦೦೯ರ ಡಿಸೆಂಬರ್ ೨೯ ಮತ್ತು ೩೦ ರಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಮತ್ತು ಹಿರಿಯ ಗಾಯಕ ಡಾ.ಅಶ್ವತ್ಥ್ ನಿಧನದ ಸುದ್ದಿಯಿಂದ ಕೆ.ಎಸ್.ಅಶ್ವತ್ಥ್ ಅವರು ಆಘಾತಕ್ಕೀಡಾಗಿದ್ದರು.
೧೩ರ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದ ಅವರ ಪರಿಸ್ಥಿತಿ ಶುಕ್ರವಾರ ಗಂಭೀರವಾಗಿತ್ತು. ಹೀಗಾಗಿ, ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ೨ ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಕೊಂಚ ಸುಧಾರಿಸಿತ್ತು.
ಆದರೆ, ಸೋಮವಾರ ರಾತ್ರಿ ಮತ್ತೆ ಅವರ ಪರಿಸ್ಥಿತಿ ಹದಗೆಟ್ಟಿತು. ಅವರಿಗೆ ಚಿಕಿತ್ಸೆ ನೀಡುತ್ತಿದ್ದಾಗಲೇ ತಡ ರಾತ್ರಿ ೨.೪೦ಕ್ಕೆ ಕೊನೆಯುಸಿರೆಳದರು.
ಲೀಲಾವತಿ, ವಿನೋದ್ ರಾಜ್ ಭೇಟಿ: ಹಿರಿಯ ಚಿತ್ರನಟಿ ಲೀಲಾವತಿ ಮತ್ತು ಪುತ್ರ ವಿನೋದ್ ರಾಜ್ ಅಶ್ವತ್ಥ್ ಅವರನ್ನು ವೀಕ್ಷಿಸಿದರು. ಅಶ್ವತ್ಥ್ ಸ್ಥಿತಿ ಕಂಡು ಲೀಲಾವತಿ ಬಿಕ್ಕಿಬಿಕ್ಕಿ ಅತ್ತರು. ಅರ್ಧ ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿಯೇ ಇದ್ದು ಅಶ್ವತ್ಥ್ ಕುಟುಂಬಕ್ಕೆ ಧೈರ್ಯ ತುಂಬವ ಪ್ರಯತ್ನ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಲೀಲಾವತಿ, ಸುದ್ದಿ ಕೇಳಿ ನನಗೆ ಗಾಬರಿಯಾಗಿತ್ತು. ಆದರೆ, ಇಲ್ಲಿಗೆ ಬಂದು ವೀಕ್ಷಿಸಿದ ನಂತರ ಗುರುತಿಸಿ ಮಾತಿಗೆ ಪ್ರಯತ್ನಿಸುತ್ತಿದ್ದರು. ನಾನು ಸ್ವಲ್ಪ ಕೂಗಿದರೆ ಮಾತನಾಡುತ್ತಿದ್ದರೇನೋ. ಆದರೆ ನಾನು ವೈದ್ಯರ ಭಯದಿಂದಾಗಿ ಕೂಗಲಿಲ್ಲ. ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದರು.