ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಮಂಗಳೂರು: ಸರಕಾರಿ ಆಸ್ಪತ್ರೆಗಳ ಸ್ವಚ್ಛತೆ ಹೊಣೆ ಕೆ.ಎಂ.ಸಿ.ಗೆ : ಸಚಿವ ರಾಮಚಂದ್ರೇಗೌಡ

ಮಂಗಳೂರು: ಸರಕಾರಿ ಆಸ್ಪತ್ರೆಗಳ ಸ್ವಚ್ಛತೆ ಹೊಣೆ ಕೆ.ಎಂ.ಸಿ.ಗೆ : ಸಚಿವ ರಾಮಚಂದ್ರೇಗೌಡ

Tue, 12 Jan 2010 02:42:00  Office Staff   S.O. News Service

ಮಂಗಳೂರು, ಜ.11: ಬಡವರ ಆಶಾಕಿರಣ ಎಂದೇ ನಂಬಲಾದ ಮಂಗಳೂರಿನ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳ ಸ್ವಚ್ಛತೆ ಹೊಣೆ ಕೆ.ಎಂ.ಸಿ.ಆಸ್ಪತ್ರೆಗೆ ವಹಿಸಿಕೊಡಲಾಗಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ  ಹೇಳಿದರು.

ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳ ಎಲ್ಲ ವಿಭಾಗಗಳನ್ನು ಸೋಮವಾರ ಪರಿಶೀಲಿಸಿ, ಅಧಿಕಾರಿಗಳ ಜತೆ ಚರ್ಚಿಸಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಎರಡೂ ಆಸ್ಪತ್ರೆಗಳಲ್ಲಿ ಸ್ವಚ್ಛತೆಯ ಮತ್ತು ಸ್ಟಾಫ್ ನರ್ಸ್‌ಗಳ ಹಾಗು ಡಿ ಗ್ರೂಪ್ ನೌಕರರ ಕೊರತೆಯಿದೆ, ಸೆಕ್ಯುರಿಟಿ ಮತ್ತು ತಾಂತ್ರಿಕ ತೊಂದರೆಯೂ ಇದೆ. ಈ ನಿಟ್ಟಿನಲ್ಲಿ ಇಂದು ಕೆ‌ಎಂಸಿ ಆಸ್ಪತ್ರೆಯ ಮುಖ್ಯಸ್ಥರ ಜತೆ ಚರ್ಚೆ ನಡೆಸಿ ಕೆಲವೊಂದು ತೀರ್ಮಾನ ತೆಗೆದುಕೊಳ್ಳಲಾಗಿದೆ. ಆ ಪೈಕಿ ಸ್ವಚ್ಛತೆ ಮತ್ತು ಸೆಕ್ಯುರಿಟಿ ವ್ಯವಸ್ಥೆಯನ್ನು ಕೆ.ಎಂ.ಸಿ. ಸಂಸ್ಥೆಯವರು ಸ್ವಂತ ಖರ್ಚಿನಲ್ಲಿ ಮಾಡಿಕೊಡಲು ಮುಂದಾಗಿದ್ದಾರೆ. ಹಾಲಿ ಖಾಲಿ ಇರುವ ಸ್ಟಾಫ್ ನರ್ಸ್‌ಗಳನ್ನು ಸರಕಾರ ಭರ್ತಿ ಮಾಡಲಿದೆ. ಹೆಚ್ಚುವರಿ ಸ್ಟಾಫ್ ನರ್ಸ್ ಮತ್ತು ನುರಿತ ವೈದ್ಯರನ್ನು ಕೆ.ಎಂ.ಸಿ. ನೀಡಲಿದೆ. ಆರೋಗ್ಯ ಸುರಕ್ಷ ಸಮಿತಿಯಲ್ಲಿ ತಮಗೂ ಪ್ರಾತಿನಿಧ್ಯ ನೀಡುವಂತೆ ಕೆ.ಎಂ.ಸಿ. ಸಂಸ್ಥೆಯ ಮುಖ್ಯಸ್ಥರು ಕೋರಿಕೊಂಡಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವರು ಮತ್ತು ಮುಖ್ಯಮಂತ್ರಿಗಳ ಜತೆ ಚರ್ಚಿಸಲಿದ್ದೇನೆ.

ಹೊಸ ಕಟ್ಟಡ : ಲೇಡಿಗೋಶನ್ ಆಸ್ಪತ್ರೆಯಲ್ಲಿ ಕಟ್ಟಡವೊಂದರ ಅಗತ್ಯವಿದೆ. ನಮ್ಮ ಕೋರಿಕೆಯ ಮೇರೆಗೆ ಅದನ್ನು 1 ವರ್ಷದೊಳಗೆ ನಿರ್ಮಿಸಿಕೊಡಲು ಕೆ.ಎಂ.ಸಿ. ಸಂಸ್ಥೆಯವರು ಮುಂದೆ ಬಂದಿದ್ದು, ರೋಗಿಗಳ ಆರೈಕೆ ಜತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕೂ ಆದ್ಯತೆ ನೀಡಲಿದ್ದೇವೆ ಎಂದು ಸಚಿವ ರಾಮಚಂದ್ರೇಗೌಡ ನುಡಿದರು.

ಸ್ಪೆಷಲ್ ಆಸ್ಪತ್ರೆ : ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಯನ್ನು 7 ಜಿಲ್ಲೆಗಳಿಗೆ ಮಾದರಿಯಾಗಿ ಸೂಪರ್ ಸ್ಪೆಷಲ್ ಆಸ್ಪತ್ರೆಯನ್ನಾಗಿಸಬೇಕು ಎಂಬ ಕನಸನ್ನು ಸ್ಥಳೀಯ ಶಾಸಕರು ಬಯಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
 
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಯೋಗೀಶ್ ಭಟ್, ವೆನ್ಲಾಕ್ ಮುಖ್ಯ ವೈದ್ಯಾಧಿಕಾರಿ ಡಾ. ಪ್ರಭುದೇವ, ಲೇಡಿಗೋಶನ್ ಅಧೀಕ್ಷಕಿ ಡಾ. ಶಕುಂತಳಾ ಎಂ., ಕೆ.ಎಂ.ಸಿ. ಆಸ್ಪತ್ರೆಯ ಡಾ. ರಾಮದಾಸ ಪೈ, ಡಾ. ಎಚ್.ಎಸ್.ಬಲ್ಲಾಳ್, ಡಾ. ರಾಜಗೋಪಾಲ್ ಉಪಸ್ಥಿತರಿದ್ದರು. 

Share: