ಸಕಲೇಶಪುರ, ಡಿಸೆಂಬರ್ 11: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಹೈಕಮಾಂಡ್ ಆದೇಶದಂತೆ ದಳ ಅಭ್ಯರ್ಥಿ ಪಟೇಲ್ ಶಿವರಾಮ್ ಗೆಲುವಿಗೆ ಶ್ರಮಿಸುವುದಾಗಿ ಸಕಲೇಶಪುರ ತಾಲ್ಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ತಿಳಿಸಿದ್ದಾರೆ.
ಸಕಲೇಶಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಜಯ್, ಚುನಾವಣೆಯ ಸಂದರ್ಭಕ್ಕೆ ಮಾತ್ರ ಜೆ. ಡಿ. ಎಸ್.ನೊಂದಿಗೆ ಹೊಂದಾಣಿಕೆ ಆಗಿದೆ. ನಾವು ಪಕ್ಷದ ಆದೇಶಕ್ಕೆ ಬದ್ಧರಾಗಿ ಪಟೇಲ್ ಶಿವರಾಮ್ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಏಳಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಕಾಂಗ್ರೆಸ್ ಹಿಡಿತದಲ್ಲಿವೆ. ಸುಮಾರು ೧೦೦ಕ್ಕೂ ಹೆಚ್ಚು ಮತಗಳು ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಬೀಳಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ದೊಡ್ಡೀರಯ್ಯ, ಮನ್ಸೂರ್, ಪೇಪರ್ ಮಂಜು, ಗ್ರಾ.ಪಂ. ಉಪಾಧ್ಯಕ್ಷರುಗಳಾದ ಕಾಂತರಾಜು ಮತ್ತು ಹರೀಶ್ ಇದ್ದರು.