ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಹಜ್ಜ್ ಸಮಿತಿ ಅಧ್ಯಕ್ಷರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಪ್ರೊ.ಮುಮ್ತಾಝ್ ಅಲಿಖಾನ್ ಸ್ಪಷ್ಟನೆ

ಬೆಂಗಳೂರು: ಹಜ್ಜ್ ಸಮಿತಿ ಅಧ್ಯಕ್ಷರೊಂದಿಗೆ ಭಿನ್ನಾಭಿಪ್ರಾಯವಿಲ್ಲ: ಪ್ರೊ.ಮುಮ್ತಾಝ್ ಅಲಿಖಾನ್ ಸ್ಪಷ್ಟನೆ

Mon, 23 Nov 2009 02:57:00  Office Staff   S.O. News Service
ಬೆಂಗಳೂರು, ನ.೨೨: ರಾಜ್ಯ ಹಜ್ಜ್ ಸಮಿತಿ ಅಧ್ಯಕ್ಷ ಮುಹಮ್ಮದ್ ಗೌಸ್ ಬಾಷಾ ಮತ್ತು ತನ್ನ ನಡುವೆ ಯಾವುದೇ ಮನಸ್ತಾಪವಾಗಲಿ, ಭಿನ್ನಾಭಿಪ್ರಾಯವಾಗಲಿ ಇಲ್ಲ ಎಂದು ಹಜ್ಜ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಪ್ರೊ.ಮುಮ್ತಾಝ್ ಅಲಿಖಾನ್ ಸ್ಪಷ್ಟನೆ ನೀಡಿದ್ದಾರೆ.

ನಗರದ ಭೂಪಸಂದ್ರದಲ್ಲಿನ ವಿಧಾನಪರಿಷತ್ ಸದಸ್ಯ ಅಬ್ದುಲ್ ಅಝೀಮ್ ನಿವಾಸದಲ್ಲಿ ಹಜ್ಜ್ ಸಮಿತಿ ಸದಸ್ಯರು ಮತ್ತು ಮುಸ್ಲಿಮ್ ಸಮುದಾಯದ ಗಣ್ಯರಿಗಾಗಿ ಆಯೋಜಿಸಲಾಗಿದ್ದ ಸೌಹಾರ್ದ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಹಜ್ಜ್ ಸಮಿತಿ ಅಧ್ಯಕ್ಷರು ಹಾಗೂ ತಾವು ಒಟ್ಟಾಗಿ ಹಜ್ಜ್ ಯಾತ್ರಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಪೂರೈಸು ವುದರಲ್ಲಿ ಸಕ್ರಿಯರಾಗಿದ್ದೇವೆ. ಈ ಸಂಬಂಧ ಜನತೆಯಲ್ಲಿ ಅನಗತ್ಯ ಗೊಂದಲ ಬೇಡ ಎಂದು ಅವರು ತಿಳಿಸಿದರು.

ಹಜ್ಜ್ ಸಮಿತಿ ಅಧ್ಯಕ್ಷ ಮುಹಮ್ಮದ್ ಗೌಸ್ ಮಾತನಾಡಿ, ಸಚಿವ ಮುಮ್ತಾಝ್ ಅಲಿಖಾನ್ ಹಿರಿಯಣ್ಣ ನಂತೆ ನಾವು ಅವರನ್ನು ಗೌರವಿಸುತ್ತೇನೆ. ಹಜ್ಜ್ ಸಮಿತಿಯ ಸದಸ್ಯರು ಹಾಗೂ ಸಚಿವರು ಒಂದೇ ಕುಟುಂಬದ ಸದಸ್ಯರಿದ್ದಂತೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳು ಮೂಡಿದರೆ, ಪರಸ್ಪರ ಚರ್ಚೆ ನಡೆಸಿ ಪರಿಹರಿಸಿ ಕೊಳ್ಳುತ್ತೇವೆ ಎಂದರು.

ಕಳೆದ ವಾರ ಮಾಧ್ಯಮಗಳ ಮೂಲಕ ಸಚಿವ ಮುಮ್ತಾಝ್ ಅಲಿಖಾನ್ ಹಾಗೂ ಹಜ್ಜ್ ಸಮಿತಿ ಅಧ್ಯಕ್ಷ ಮುಹಮ್ಮದ್ ಗೌಸ್ ಕೆಲವು ಹೇಳಿಕೆಗಳನ್ನು ನೀಡಿದ್ದರು. ಇದರಿಂದಾಗಿ, ರಾಜ್ಯದ ಜನತೆ, ವಿಶೇಷವಾಗಿ ಮುಸ್ಲಿಮ್ ಬಾಂಧವರು ಗೊಂದಲ ದಲ್ಲಿದ್ದರು ಎಂದು ಸೌಹಾರ್ದ ಕೂಟದ ಆಯೋಜಕ ಹಾಗೂ ಹಜ್ಜ್ ಸಮಿತಿಯ ಸದಸ್ಯರು ಆಗಿರುವ ಅಬ್ದುಲ್ ಅಝೀಮ್ ತಿಳಿಸಿದರು.

ಆದರೆ, ಈಗ ಇವರಿಬ್ಬರು ತಮ್ಮ ಎಲ್ಲ ಅಭಿಪ್ರಾಯ ಭೇದ ಮತ್ತು ಗೊಂದಲಗಳನ್ನು ಪರಸ್ಪರ ಮಾತುಕತೆ ನಡೆಸಿ ಪರಿಹರಿಸಿಕೊಂಡಿದ್ದು, ಹಜ್ಜ್ ಯಾತ್ರಿಕರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಲು ನಿರಂತರ ಶ್ರಮ ಪಡುತ್ತಿದ್ದಾರೆ. ಸಚಿವರು, ಸಮಿತಿ ಅಧ್ಯಕ್ಷರು, ಸದಸ್ಯರು, ಸ್ವಯಂ ಸೇವಕರು ಮತ್ತು ಇಲಾಖೆಯ ಸಿಬ್ಬಂದಿಗಳು ಸ್ವಯಂ ಸ್ಫೂರ್ತಿಯಿಂದ ಸೇವೆ ಸಲ್ಲಿಸಿ ಯಾತ್ರಿಕರಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಈ ಮಹತ್ತರವಾದ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಂಡ ವರಿಗೆಲ್ಲ ದೇವರು ಉತ್ತಮ ಪ್ರತಿಫಲ ನೀಡಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಮುದಾಯದ ಹಿರಿಯ ಮುಖಂಡ ನ‌ಈಮುಲ್ಲಾ ಖಾನ್, ಐ‌ಎ‌ಎಸ್ ಅಧಿಕಾರಿಗಳಾದ ಮುಹಮ್ಮದ್ ಸನಾವುಲ್ಲಾ, ಝಮೀರ್ ಪಾಷ, ಸಚಿವರ ಆಪ್ತ ಕಾರ್ಯದರ್ಶಿ ಮುಜೀಬುಲ್ಲಾ ಝಫಾರಿ, ಹಜ್ಜ್ ಸಮಿತಿ ಕಾರ್ಯ ನಿರ್ವಾಹಣಾಧಿಕಾರಿ ನಯಾಝ್ ಅಹ್ಮದ್, ಮಾಜಿ ಸಚಿವ ಬಿ.ಎ.ಮೊದಿನ್, ಹಜ್ಜ್ ಸಮಿತಿ ಸದಸ್ಯರಾದ ಸಲೀಮ್ ಉಡುಪಿ, ಹುಸೈನ್ ಸಖಾಫಿ, ವಕ್ಫ್ ಮಂಡಳಿ ಮಾಜಿ ಸದಸ್ಯೆ ಸೀಮಾ ಮುಹ್ಸಿನ್ ಮತ್ತಿತರರು ಭಾಗವಹಿಸಿದ್ದರು.

Share: