ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಎಸ್.ಎಂ. ಕೃಷ್ಣಾ ರವರ ಮಹತ್ವಾಕಾಂಕ್ಷಿ ವಿಮಾ ಯೋಜನೆ ರದ್ದುಪಡಿಸಲು ಯಡಿಯೂರಪ್ಪ ಸರ್ಕಾರ ಚಿಂತನೆ

ಬೆಂಗಳೂರು: ಎಸ್.ಎಂ. ಕೃಷ್ಣಾ ರವರ ಮಹತ್ವಾಕಾಂಕ್ಷಿ ವಿಮಾ ಯೋಜನೆ ರದ್ದುಪಡಿಸಲು ಯಡಿಯೂರಪ್ಪ ಸರ್ಕಾರ ಚಿಂತನೆ

Sat, 13 Feb 2010 03:12:00  Office Staff   S.O. News Service

ಬೆಂಗಳೂರು, ಫೆಬ್ರವರಿ ೧೨:ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣಾ ಅವರ ಕಾಲದಲ್ಲಿ ಜಾರಿಗೆ ತಂದಿದ್ದ ಮಹತ್ವಾಕಾಂಕ್ಷೆಯ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ರದ್ದುಪಡಿಸಲು ರಾಜ್ಯ ಬಿಜೆಪಿ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

 

 

ಯಶಸ್ವಿನಿ ಯೋಜನೆಯನ್ನು ರದ್ದುಪಡಿಸಿ ಆ ಜಾಗಕ್ಕೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆಯನ್ನು ಜಾರಿಗೆ ತರಲು ಬಿಜೆಪಿ ಸರ್ಕಾರ ಮುಂದಾಗಿದೆ.

 

ರಾಜ್ಯದ ಆಡಳಿತವನ್ನು ಕೇಸರಿಕರಣ ಮಾಡುತ್ತಿರುವ ಬೆಳವಣಿಗೆಯ ನಡುವೆಯೇ ಸರ್ಕಾರಿ ಯೋಜನೆಗಳನ್ನು ಕೂಡ ಬಿಜೆಪಿಮಯ ಮಾಡಲು ಈ ಸರ್ಕಾರ ಹೊರಟಿದ್ದು, ಇದರಿಂದಾಗಿ ಹಲವು ಮಹತ್ವಾಕಾಂಕ್ಷೆಯ ಯೋಜನೆಗಳು ಪರ್ಯಾಯ ಹೆಸರಿನಲ್ಲಿ ಅಸ್ಧಿತ್ವಕ್ಕೆ ತರಲು ಬಿಜೆಪಿ ಸರ್ಕಾರದಿಂದ ತೆರೆಮರೆಯ ಪ್ರಯತ್ನಗಳು ನಡೆಯುತ್ತಿವೆ.

 

ಉತ್ತರ ಕರ್ನಾಟಕ ಭಾಗದ ಐದು ಜಿಲ್ಲೆಗಳಲ್ಲಿ ಜಾರಿಗೆ ತಂದಿರುವ ವಾಜಪೇಯಿ ಆರೋಗ್ಯಶ್ರೀ ಯೋಜನೆಯನ್ನು ಬರುವ ಸಾಲಿನ ಬಜೆಟ್‌ನಲ್ಲಿ ರಾಜ್ಯಾದ್ಯಂತ ವಿಸ್ತರಿಸಿ ಯಶಸ್ವಿನಿ ಯೋಜನೆಯನ್ನು ಕೈಬಿಡಲು ಸರ್ಕಾರ ಈಗಾಗಲೇ ಸಮಾಲೋಚನಾ ಪ್ರಕ್ರಿಯೆಗಳನ್ನು ಆರಂಭಿಸಿದೆ.

 

ಸಹಕಾರಿ ಸಂಸ್ಧೆಗಳ ಸದಸ್ಯರಿಗೆ ಮಾತ್ರ ಜಾರಿಗೊಳಿಸಿದ್ದ ಯಶಸ್ವಿನಿ ಯೋಜನೆ ನಂತರ ಮೀನುಗಾರರು, ಅಲೆಮಾರಿ ಜನಾಂಗ, ನೇಕಾರರಿಗೂ ಕೂಡ ವಿಸ್ತರಣೆಯಾಗಿದ್ದು, ಮತ್ತಷ್ಟು ಜನರಿಗೆ ಯೋಜನೆ ಸೌಲಭ್ಯವನ್ನು ದೊರಕಿಸಿಕೊಡಲು ಪ್ರಯತ್ನ ನಡೆಸಿರುವ ಬೆಳವಣಿಗೆಯ ನಡುವೆಯೇ ಯಶಸ್ವಿನಿ ಯೋಜನೆ ಶೀಥಲ ಗೃಹಕ್ಕೆ ಸೇರಲು ಸಜ್ಜಾಗಿದೆ.

 

ರಾಜ್ಯದಲ್ಲಿ ಅತ್ಯುತ್ತಮವಾಗಿ ನಡೆಯುತ್ತಿರುವ ಯೋಜನೆಗಳ ಪೈಕಿ ಯಶಸ್ವಿನಿ ಅಗ್ರ ಸ್ಧಾನದಲ್ಲಿದ್ದು, ವಾಜಪೇಯಿ ಆರೋಗ್ಯ ಶ್ರೀ ಯೋಜನೆ ರಾಜ್ಯಾದ್ಯಂತ ಜಾರಿಗೆ ಬಂದರೆ ಯಶಸ್ವಿನಿ ತನ್ನ ಅಸ್ಧಿತ್ವನ್ನು ಕಳೆದುಕೊಳ್ಳಲಿದೆ. ಆದ ಕಾರಣ ಈ ಯೋಜನೆಯನ್ನು ಸ್ಧಗಿತಗೊಳಿಸುವುದೇ ಲೇಸು ಎಂಬ ನಿಲುವಿಗೆ ಸರ್ಕಾರ ಬಂದಿದೆ.

 

ವಾಜಪೇಯಿ ಆರೋಗ್ಯ ಶ್ರೀ ಯೋಜನೆಯಡಿ ಸದಸ್ಯರಾಗುವವರು ಯಾವುದೇ ರೀತಿಯ ಪ್ರೀಮಿಯಂ ಕಟ್ಟುವಂತಿಲ್ಲ. ಬಡವರು ಸೇರಿದಂತೆ ಸಹಕಾರಿ ವಲಯದ ಎಲ್ಲರಿಗೂ ಈ ಯೋಜನೆ ವ್ಯಾಪ್ತಿಯಡಿ ಚಿಕಿತ್ಸೆ ಪಡೆಯಲು ಸಹಕಾರಿಯಾಗುವಂತೆ ನೋಡಿಕೊಳ್ಳಲು ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಬರುವ ಸಾಲಿನ ಬಜೆಟ್‌ನಲ್ಲಿ ೩೦೦ ಕೋಟಿ ರೂಪಾಯಿ ಹಣವನ್ನು ಈ ಯೋಜನೆಗೆ ವಿನಿಯೋಗಿಸಲು ಸರ್ಕಾರ ಉದ್ದೇಶಿಸಿದೆ.

 

 

ಪ್ರಸ್ತುತ ಯಶಸ್ವಿನಿ ಯೋಜನೆಯಡಿ ೩೧ ಲಕ್ಷ ಮಂದಿ ಸದಸ್ಯರಿದ್ದು, ಸದಸ್ಯರಾದವರಿಗೆ ೨೦೦ ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಸದಸ್ಯರಿಂದ ೪೦ ಕೋಟಿ ರೂಪಾಯಿ ಪ್ರೀಮಿಯಂ ಸಂಗ್ರಹಿಸಲಾಗಿದೆ. ಇಷ್ಟೇ ಮೊತ್ತದ ಪ್ರಿಮಿಯಂನ್ನು ಸರ್ಕಾರ ಪಾವತಿ ಮಾಡಬೇಕಾಗಿದೆ.

 

ಈ ವರ್ಷದಲ್ಲಿ ೩೫,೫೯೭ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗಿದ್ದು, ಇದಕ್ಕಾಗಿ ೩೧.೬೧ ಕೋಟಿ ರೂ ಹಣ ಪಾವತಿಮಾಡಲಾಗಿದೆ. ಕಳೆದ ವಾರ ಸರ್ಕಾರ ಆಸ್ಪತ್ರೆಗಳಿಗಾಗಿ ನಾಲ್ಕು ಕೋಟಿ ರೂ ಹಣ ಬಿಡುಗಡೆ ಮಾಡಿತ್ತು. ಶಸ್ತ್ರ ಚಿಕಿತ್ಸೆ ಮತ್ತಿತರ ವೈದ್ಯಕೀಯ ಖರ್ಚು ವೆಚ್ಚಗಳಿಗಾಗಿ ಸರ್ಕಾರ ಇನ್ನೂ ೨೮.೪೭ ಕೋಟಿ ರೂ ಹಣ ಪಾವತಿ ಮಾಡಬೇಕಾಗಿದೆ.

 

ಸೂಕ್ತ ಚಿಕಿತ್ಸೆ ನೀಡದ ೧೫ ಆಸ್ಪತ್ರೆಗಳನ್ನು ಯೋಜನೆಯಿಂದ ಕೈಬಿಡಲಾಗಿತ್ತು. ಯೋಜನೆ ಯಶಸ್ವಿಯಾಗಿ ನಡೆಯುತ್ತಿದ್ದರೂ ಕೂಡ ಕೆಲವು ಲೋಪದೋಷಗಳಿದ್ದು, ಅವುಗಳನ್ನು ಸರಿಪಡಿಸುವ ಸಲುವಾಗಿ ಪ್ರತಿ ಪಕ್ಷದ ಮುಖಂಡರ ಸಭೆ ಕರೆಯುವುದಾಗಿ ಸಹಕಾರ ಸಚಿವ ಲಕ್ಷ್ಮಣ ಸವದಿ ಮೇಲ್ಮನೆಯಲ್ಲಿ ಭರವಸೆ ನೀಡಿದ್ದರು. ಆದರೆ ವಿಧಾನಮಂಡಲದ ಜಂಟಿ ಅಧಿವೇಶನ ಹತ್ತಿರ ಬರುತ್ತಿದ್ದರೂ ಕೂಡ ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

 

 

ವಿವಿಧ ವಲಯಗಳನ್ನು ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಸೇರ್ಪಡೆಮಾಡಿ ಸದಸ್ಯರ ಸಂಖ್ಯೆಯನ್ನು ೬೦ ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿತ್ತು. ಆದರೆ ಸರ್ಕಾರದ ವಲಯದಿಂದ ಅಷ್ಟಾಗಿ ಸೂಕ್ತ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಹಿನ್ನೆಡೆಯಾಗಿದೆ. ಸರ್ಕಾರ ಈ ಯೋಜನೆಯನ್ನು ಕಡೆಗಣಿಸುತ್ತಿರುವುದಕ್ಕೆ ಇದು ಸಾಕ್ಷಿ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

 

 

ಯಶಸ್ವಿನಿ ಯೋಜನೆಯಡಿ ಪ್ರತಿ ಸದಸ್ಯರು ೧೪೦ ರೂ ಶುಲ್ಕ ಪಾವತಿಸಬೇಕು. ಆದರೆ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಸಂಪೂರ್ಣವಾಗಿ ಉಚಿತವಾಗಿದೆ. ಉಚಿತವಾಗಿ ನೀಡುವ ಸೌಲಭ್ಯ ಇಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಯಾಗಲಿದೆ ಎಂಬುದು ಬೇರೆ ಮಾತಾದರೂ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ಯಶಸ್ವಿನಿ ಯೋಜನೆಯನ್ನು ಸ್ಧಗಿತಗೊಳಿಸಲು ಸರ್ಕಾರ ಮುಂದಾಗಿರುವುದು ಎಷ್ಟರ ಮಟ್ಟಿಗೆ ಸಮರ್ಥನೀಯ ಎಂಬುದನ್ನು ಸರ್ಕಾರವೇ ಹೇಳಬೇಕಾಗಿದೆ. 

 


Share: