ಭಟ್ಕಳ, ನವೆಂಬರ್ ೧೬: ಸ್ವಾತಂತ್ರ್ಯಾ ನಂತರ ದೇಶದ ಸಾಮರ್ಥ್ಯಕ್ಕೆ ತಕ್ಕ ಅಭಿವೃದ್ಧಿಯ ವೇಗ ಯಾಕೆ ಸಿಕ್ಕಿಲ್ಲ ಎಂದು ನಮ್ಮೊಳಗೆ ಚಿಂತನೆ ನಡೆಯಬೇಕಾಗಿದೆ. ಉದ್ಯೋಗವಕಾಶಗಳನ್ನು ಸೃಷ್ಟಿಸಲು ಸರಕಾರಗಳು ನಿರಂತರ ನಿರ್ಲಕ್ಷ ತೋರುತ್ತ ಬಂದಿರುವುದರಿಂದಲೇ ಪ್ರತಿಭಾ ಪಲಾಯನ ಮುಂದುವರೆಯಿತು. ಇದು ದೇಶದ ದುರಂತ ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಭಟ್ಕಳ ಎಜ್ಯುಕೇಶನ್ ಟ್ರಸ್ಟ ವತಿಯಿಂದ ಕಮಲಾವತಿ ಮತ್ತು ರಾಮನಾಥ ಶ್ಯಾನಭಾಗ ಸ್ಮರಣಾರ್ಥ ನಿರ್ಮಾಣವಾದ ‘ಕಮಲಾವತಿ ಮತ್ತು ರಾಮನಾಥ ಶಾನಭಾಗ ಸಭಾಗ್ರಹ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಗುಣಾತ್ಮಕ ಶಿಕ್ಷಣ ಇಂದಿನ ಅಗತ್ಯ ಎಂದ ಕಾಗೇರಿ, ಈ ಕಾರಣಕ್ಕಾಗಿ ಯೋಗ ಶಿಕ್ಷಣವನ್ನು ಶಿಕ್ಷಣ ಕ್ಷೇತ್ರದಲ್ಲಿ ಜಾರಿಗೆ ತರುವ ಚಿಂತನೆ ನಡೆದಿದೆ. ವ್ಯಕ್ತಿತ್ವ ನಿರ್ಮಾಣ, ಸ್ವಾಭಿಮಾನ ನಿರ್ಮಾಣವೇ ಎಲ್ಲರ ಗುರಿಯಾಗಬೇಕು ಎಂದು ತಿಳಿಸಿದರು. ಜನಮಾನಸದಲ್ಲಿ ರಾಷ್ಟ್ರೀಯ ಭಾವನೆಯ ಕೊರತೆಯು ಕ್ಷೀಣಿಸುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು ಜಪಾನ್, ಕೋರಿಯಾ, ಇಸ್ರೇಲ್‌ಗಳಂತಹ ಪುಟ್ಟ ದೇಶಗಳು ತೋರುತ್ತಿರುವ ಅಭಿವೃದ್ಧಿ ನಮಗೆ ಮಾದರಿಯಾಗಬೇಕು ಎಂದು ವಿವರಿಸಿದರು. ಶಾಲೆಗಳು ಮಕ್ಕಳಿಗೆ ಸಂಸ್ಕಾರವನ್ನು ನೀಡುತ್ತವೆ ಎಂದ ಕಾಗೇರಿ ಕಲಿತ ಶಾಲೆಗೆ ರಾಮನಾಥ ಕುಟುಂಬ ವರ್ಗದ ಕೊಡುಗೆಯನ್ನು ಕೊಂಡಾಡಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾರ್ಪೋರೇಶನ್ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಬಿ.ಆರ್.ಭಟ್, ವಿದ್ಯಾರ್ಥಿಯೋರ್ವರು ಶಾಲೆಯ ಏಳಿಗೆಗೆ ಶ್ರಮಿಸುತ್ತಿರುವುದನ್ನು ವಿವರಿಸುತ್ತಾ, ಉಳಿದವರಿಗೆ ಇದು ಮಾರ್ಗದರ್ಶಿಯಾಗಲಿ ಎಂದು ಹಾರೈಸಿದರು. ಅತಿಥಿಗಳೂ, ಸಭಾಗ್ರಹದ ನಿರ್ಮಾತೃರೂ ಆದ ಡಾ.ಗಜಾನನ ಶ್ಯಾನಭಾಗ ಮಾತನಾಡಿ, ಶಿಕ್ಷಣದಲ್ಲಿ ಪ್ರತಿಭೆಗೆ ಅವಕಾಶ ದೊರೆಯುವಂತಾಗಬೇಕು. ಇದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಹೇಳಿದರು. ವಾಮನ ಶ್ಯಾನಭಾಗ ಶಾಲೆಯೊಂದಿಗೆ ತಮಗಿರುವ ನಂಟನ್ನು ಬಿಡಿಸಿಟ್ಟರು. ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಜೆ.ಡಿ.ನಾಯ್ಕ, ರಚನಾತ್ಮಕ ಕಾರ್ಯಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿದರು. ವೇದಿಕೆಯ ಮೇಲೆ ರಾಜೇಶ ನಾಯಕ, ಪ್ರದೀಪ ಪೈ, ವಿಜಯಾ ಸುಧಾಕರ ಶ್ಯಾನಭಾಗ, ವಿ.ಹೊನ್ನಯ್ಯ ವಿಜಯಾ, ಮುಂಬೈ ಮುಂತಾದವರು ಉಪಸ್ಥಿತರಿದ್ದರು. ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಆರ್.ಜಿ.ಕೊಲ್ಲೆ ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷ ಸುರೇಶ ನಾಯ್ಕ ವಂದಿಸಿದರು.