ಬೆಂಗಳೂರು,ಜನವರಿ 11: ಮೂಲ ಒಪ್ಪಂದವನ್ನು ಉಲ್ಲಂಘಿಸಿ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಯೋಜನೆಗೆ ಸಂಬಂಧಿಸಿದಂತೆ ನೈಸ್ ಸಂಸ್ಥೆಗೆ ಒಂದೇ ಒಂದು ಎಕರೆ ಭೂಮಿಯನ್ನೂ ಹೆಚ್ಚುವರಿಯಾಗಿ ನೀಡಿಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ,ಇದೇ ಕಾಲಕ್ಕೆ ರಾಜ್ಯದಲ್ಲಿ ಅಶಾಂತಿಯನ್ನು ಹರಡಲು ಯತ್ನಿಸುತ್ತಿರುವ ದೇವೇಗೌಡರ ನಡವಳಿಕೆ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಸುದ್ಧಿಗಾರರ ಜತೆ ಮಾತನಾಡಿದ ಅವರು, ಮೂಲ ಒಪ್ಪಂದವನ್ನು ಉಲ್ಲಂಘಿಸಿ ಒಂದು ಎಕರೆ ಭೂಮಿಯನ್ನೂ ನಾವು ನೈಸ್ ಸಂಸ್ಥೆಗೆ ನಾವು ನೀಡಿಲ್ಲ.ಆದರೆ ದೇವೇಗೌಡರು ಏನನ್ನು ಕಲ್ಪಿಸಿಕೊಂಡು ಮಾತನಾಡುತ್ತಿದ್ದಾರೋ? ನನಗರ್ಥವಾಗುತ್ತಿಲ್ಲ ಎಂದರು.
ನಾವು ಅಧಿಕಾರಕ್ಕೆ ಬಂದ ಮೇಲೆ ಗೊಟ್ಟಿಗೆರೆ ಬಳಿ ಮೂರು ಎಕರೆ ಒಂದು ಗುಂಟೆ ಜಮೀನನ್ನು ಮಾತ್ರ ನೀಡಿದ್ದೇವೆ ಎಂದು ಸ್ಪಷ್ಟ ಪಡಿಸಿದ ಅವರು, ಇಡೀ ಯೋಜನೆಗೆ ಒಪ್ಪಿಗೆ ಕೊಟ್ಟಿದ್ದು ನಮ್ಮ ಸರ್ಕಾರವಲ್ಲ. ಹಿಂದಿನ ಸರ್ಕಾರಗಳು ಮಾಡಿಕೊಂಡ ಒಪ್ಪಂದವೇ ಜಾರಿಗೆ ಬರುತ್ತಿರುವುದೆಂದು ನುಡಿದರು.
ಆದರೆ ಮಾಜೀ ಪ್ರಧಾನಿ ದೇವೇಗೌಡರಿಗೆ ರಾಜ್ಯದಲ್ಲಿ ಶಾಂತಿ ಇರುವುದು ಬೇಕಾಗಿಲ್ಲ. ಒಬ್ಬ ಮಾಜೀ ಪ್ರಧಾನಿ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರೆ ಅಶಾಂತಿಯ ವಾತಾವರಣ ಹರಡುವುದಿಲ್ಲವೇ?. ಅವರ ಈ ನಡವಳಿಕೆಯ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಬೇಕು. ನಾನು ತಪ್ಪು ಮಾಡಿದ್ದರೆ ನನಗೂ ಸಾರ್ವಜನಿಕರು ಬುದ್ಧಿ ಹೇಳಲಿ ಎಂದರು.
ನೈಸ್ ಯೋಜನೆಗೆ ಸಂಬಂಧಿಸಿದಂತೆ ಯಾವ ವೇದಿಕೆಯಲ್ಲಿ ಚರ್ಚೆ ನಡೆದರೂ ನಾನು ಅದಕ್ಕೆ ಸಿದ್ಧನಾಗಿದ್ದೇನೆ. ಆದರೆ ಗೌಡರು ತಮ್ಮ ಬಗ್ಗೆ ಮಾಡಿದ ಟೀಕೆಯಿಂದ ರಾಜ್ಯದ ಆರು ಕೋಟಿ ಜನರಿಗೆ ಅಪಮಾನವಾಗಿದೆ ಎಂದರು. ತಾವು ಟೀಕಿಸಿದ್ದು ಅಡ್ವೋಕೇಟ್ ಜನರಲ್ ಅವರಿಗೆ, ಯಡಿಯೂರಪ್ಪ ಅವರಿಗಲ್ಲ ಎಂದು ದೇವೇಗೌಡರು ಹೇಳಿರುವ ಬಗ್ಗೆ ಕೇಳಿದಾಗ, ಅವರನ್ನು ಟೀಕಿಸಿದರೂ ಒಂದೇ, ತಮ್ಮನ್ನು ಟೀಕಿಸಿದರೂ ಒಂದೇ ಎಂದರು