ಭಟ್ಕಳ, ನವೆಂಬರ್ 2:ರಜತ ಗಣೇಶಮಹೋತ್ಸವ ಸಮಿತಿ ಮುಂಡಳ್ಳಿ ಆಶ್ರಯದಲ್ಲಿ ದಿ.ಸೋಮಯ್ಯ ಮಠದಹಿತ್ಲು ಸ್ಮರಣಾರ್ಥ ಮುಂಡಳ್ಳಿ ಶಾಲಾ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪರಶುರಾಮ ತಂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಕುದುರೆ ಬೀರಪ್ಪ ತಂಡ ದ್ವಿತೀಯ ಸ್ಥಾನವನ್ನು ಗಳಿಸಿದ್ದು, ಅಬ್ಬಿಮಹಾರಾಜ ತಂಡ ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ರಜತ ಗಣೇಶಮಹೋತ್ಸವ ಸಮಿತಿ ಮುಂಡಳ್ಳಿ ಇದರ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ದಾಮೋದರ ಗರ್ಡೀಕರ, ಜೆ.ಎನ್.ನಾಯ್ಕ, ಗಣೇಶೋತ್ಸವ ಸಮಿತಿ ಮುಂಡಳ್ಳಿ ಇದರ ಅಧ್ಯಕ್ಷ ತಿಮ್ಮಪ್ಪ ನಾಯ್ಕ, ರಜತ ಗಣೇಶ ಮಹೋತ್ಸವ ಸಮಿತಿ ಇದರ ಕಾರ್ಯದರ್ಶಿ ನಾರಾಯಣ ದೊಡ್ಮನೆ, ಗ್ರಾಮಪಂಚಾಯತ ಅಧ್ಯಕ್ಷ ನಾಗಪ್ಪ ನಾಯ್ಕ ಮುಂತಾದವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.