ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಂಗಳೂರು: ಮೊಯ್ಲಿ, ಡಾ.ತುಂಬೆ, ಬೆಳಗಲಿ, ಬಾಲನ್, ಸಹಿತ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು: ಮೊಯ್ಲಿ, ಡಾ.ತುಂಬೆ, ಬೆಳಗಲಿ, ಬಾಲನ್, ಸಹಿತ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ

Thu, 31 Oct 2024 08:13:11  Office Staff   Vb

ಬೆಂಗಳೂರು: ರಾಜ್ಯ ಸರಕಾರವು 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಧಾರವಾಡದ ವಿದ್ಯಾವರ್ಧಕ ಸಂಘ, ಮಾಜಿ ಸಿಎಂ ಡಾ.ಎಂ.ವೀರಪ್ಪ ಮೊಯ್ಲಿ, ಯುಎಇ ತುಂಬೆ ಗ್ರೂಪ್‌ನ ಡಾ.ತುಂಬೆ ಮೊಯ್ದಿನ್, ಪತ್ರಿಕೆಯ ಅಂಕಣಕಾರ ಸನತ್‌ಕುಮಾರ್ ಬೆಳಗಲಿ, ಹೈಕೋರ್ಟ್ ವಕೀಲ ಮತ್ತು ಕಾರ್ಮಿಕ ಹೋರಾಟಗಾರರಾದ ಎಸ್ ಬಾಲನ್ ಸಹಿತ ವಿವಿಧ ಕ್ಷೇತ್ರಗಳ 69 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. 

ಬುಧವಾರ ವಿಕಾಸ ಸೌಧದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಸಾಧಕರ ಪಟ್ಟಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಜಾನಪದ, ಸಂಗೀತ, ಸಾಹಿತ್ಯ, ಸಮಾಜ ಸೇವೆ, ವೈದ್ಯಕೀಯ, ಮಾಧ್ಯಮ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಿಂದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. 

ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಒಟ್ಟು 1,575 ಭೌತಿಕ ಅರ್ಜಿಗಳು ಬಂದಿದ್ದವು. ಇದಲ್ಲದೇ ಸೇವಾ ಸಿಂಧು ಮೂಲಕ 1,309 ಜನರಿಗಾಗಿ 7,438 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಇವುಗಳನ್ನೆಲ್ಲಾ ಕೂಲಂಕಷವಾಗಿ ಪರಿಶೀಲನೆ ಮಾಡಿ ಅರ್ಹರನ್ನು ಆಯ್ಕೆ ಮಾಡಿದ್ದು, ಈ ಬಾರಿ 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. 

ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿಧ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ. ಅರ್ಜಿಯನ್ನು ಹಾಕದ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸಿರುವ 20ಕ್ಕೂ ಹೆಚ್ಚು ಮಂದಿಯನ್ನು ಗುರುತಿಸಿ, ಪ್ರಶಸ್ತಿ ನೀಡಲಾಗುತ್ತಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು. 

ಬಯಲಾಟ ಕ್ಷೇತ್ರದಲ್ಲಿ ವಿಜಯನಗರ ಜಿಲ್ಲೆಯ 92 ವರ್ಷದ ನಾರಾಯಣಪ್ಪ ಶಿಳ್ಳೇಕ್ಯಾತ, ಜಾನಪದ ಕ್ಷೇತ್ರದ ಅಂಧ ಕಲಾವಿದ ಬೀದರ್ ಜಿಲ್ಲೆಯ ನರಸಿಂಹಲು ಅವರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದೆ. ಈ ಬಾರಿ 13 ಮಹಿಳೆಯರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಶಿವರಾಜ್ ತಂಗಡಗಿ ತಿಳಿಸಿದರು.


Share: