ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೆಂಗಳೂರು: ಫೆಲೆಸ್ತೀನ್‌ನಲ್ಲಿ ನರಮೇಧ: ಇಸ್ರೇಲ್ ವಿರುದ್ದ ಪ್ರತಿಭಟನೆ

ಬೆಂಗಳೂರು: ಫೆಲೆಸ್ತೀನ್‌ನಲ್ಲಿ ನರಮೇಧ: ಇಸ್ರೇಲ್ ವಿರುದ್ದ ಪ್ರತಿಭಟನೆ

Sun, 06 Oct 2024 13:22:44  Office Staff   Vb

ಬೆಂಗಳೂರು: ಗಾಝಾದಲ್ಲಿ ಫೆಲೆಸ್ತೀನ್ ಜನರ ವಿರುದ್ಧ ಇಸ್ರೇಲ್ ನಡೆಸಿದ ನರಮೇಧಕ್ಕೆ ಒಂದು ವರ್ಷ ಸಮೀಪಿಸುತ್ತಿದೆ. ಈ ದಾಳಿಯನ್ನು ಖಂಡಿಸಿ, ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೆಂಗಳೂರು ಫಾರ್ ಜಸ್ಟಿಸ್ ಆ್ಯಂಡ್ ಪೀಸ್' ಪ್ರತಿಭಟನೆ ನಡೆಸಿತು.

ಕೇಂದ್ರ ಮತ್ತು ಕರ್ನಾಟಕ ಸರಕಾರ ತಕ್ಷಣವೇ ಇಸ್ರೇಲ್ ಆಡಳಿತದೊಂದಿಗಿನ ಸಂಬಂಧವನ್ನು ಕಡಿತಗೊಳಿಸಬೇಕು. ಮತ್ತು ಫೆಲೆಸ್ತೀನಿಯರ ನರಮೇಧದಲ್ಲಿ ಭಾಗಿಯಾಗುವುದನ್ನು ನಿಲ್ಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಐಎಸ್‌ಎ ಸದಸ್ಯ ಸಚಿನ್ ಮಾತನಾಡಿ, ಲೆಬನಾನ್, ಯಮನ್, ಸಿರಿಯಾ, ಇರಾನ್ ವಿರುದ್ದ ಇಸ್ರೇಲ್ ದಾಳಿಯಲ್ಲಿ ಸಾಮ್ರಾಜ್ಯಶಾಹಿಯ ದುಷ್ಟತನ ಸ್ಪಷ್ಟವಾಗಿ ಗೋಚರಿಸುತ್ತದೆ. ಅಸಂಖ್ಯಾತ ಜೀವಗಳನ್ನು ಕಳೆದುಕೊಂಡಿರುವ ಫೆಲೆಸ್ತೀನಿಯನ್ ಜನರು ಪ್ರತಿರೋಧವನ್ನು ಮುಂದುವರಿಸಿದ್ದಾರೆ. ನಾವು ಅವರೊಟ್ಟಿಗೆ ನಿಲ್ಲಬೇಕು ಎಂದರು.

ಫೆಲೆಸ್ತೀನ್ ಧ್ವಜಕ್ಕೆ ಕರ್ನಾಟಕ ಪೊಲೀಸರು ಏಕೆ ಹೆದರುತ್ತಾರೆ ಎಂಬ ಪ್ರಶ್ನೆಯನ್ನು ನಾವು ಕೇಳಬೇಕು? ಪ್ರತಿರೋಧದ ಬಗ್ಗೆ ಅವರಿಗೆ ಇರುವ ಈ ಭಯ, ಅವರು ನರಮೇಧ ನಡೆಸುತ್ತಿರುವ ಇಸ್ರೇಲ್‌ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಬಯಲುಗೊಳಿಸುತ್ತಿದೆ ಎಂದು ಆರೋಪಿಸಿದರು.

ಸೂಡೆಂಟ್ಸ್ ಫಾರ್ ಪೀಪಲ್ಸ್ ಡೆಮಾಕ್ರಸಿ ಸಂಘಟನೆಯ ಶ್ರೀಲಕ್ಷ್ಮೀ ಮಾತನಾಡಿ, ಗಾಝಾದ ಪ್ರತಿಯೊಂದು ವಿಶ್ವವಿದ್ಯಾನಿಲಯದ ಮೇಲೆ ಬಾಂಬ್ ಸ್ಫೋಟಿಸಲಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಫೆಲೆಸ್ತೀನಿಯರ ಬೆಂಬಲಕ್ಕೆ ಬರಬೇಕಾಗಿದೆ. ದಿಲ್ಲಿ ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿದ್ಯಾರ್ಥಿಗಳ ಒಗ್ಗಟ್ಟಿನ ಧ್ವನಿಯನ್ನು ಭಾರತವು ಹಿಂಸಾತ್ಮಕವಾಗಿ ದಮನ ಮಾಡಿದೆ ಎಂದು ದೂರಿದರು. ಸಿಪಿಎಂ ಸದಸ್ಯ ಪ್ರಕಾಶ್ ಮಾತನಾಡಿ, ಅಂತ‌ರ್ ರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಜಗತ್ತಿನ ಮುಂದೆ ಭಾರತದ ಗೌರವವನ್ನು ನಾಶ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ನಿಲುವು ತೆಗೆದುಕೊಳ್ಳುತ್ತಿದೆ. ಇಸ್ರೇಲ್ ಮತ್ತು ಭಾರತದ ನಡುವಿನ ವ್ಯಾಪಾರವನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಫೆಲೆಸ್ತೀನ್ ಪರ ಹೋರಾಟದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಬಂದಾಗಿನಿಂದ ಭಾರತ ಫೆಲೆಸ್ತೀನ್ ಪರವಾಗಿಯೇ ಇತ್ತು. ಆದರೆ ಬಿಜೆಪಿ ನೇತೃತ್ವದ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಆ ನಿಲುವು ಬದಲಾಗಿದೆ. ಇದು ಭಾರತಕ್ಕೆ ಮೋದಿ ಸರಕಾರ ಮಾಡುವ ಅವಮಾನವಾಗಿದೆ ಎಂದು ಹೇಳಿದರು. ವಿಶ್ವಸಂಸ್ಥೆಯಲ್ಲಿ ಫೆಲೆಸ್ತೀನ್ ಬಿಕ್ಕಟ್ಟನ್ನು ನಿವಾರಣೆ ಮಾಡಲು ತೆಗೆದುಕೊಂಡ ನಿರ್ಣಯವನ್ನು ಅಮೆರಿಕ ತಳ್ಳಿ ಹಾಕುತ್ತಿದೆ. ಫೆಲೆಸ್ತೀನ್ ಪ್ರತ್ಯೇಕ ರಾಷ್ಟ್ರವಾಗಿ ಅಸ್ತಿತ್ವ ಪಡೆದುಕೊಳ್ಳಬೇಕು. ಎಲ್ಲ ದೇಶಗಳು ಇದನ್ನು ಮಾನ್ಯ ಮಾಡಬೇಕು ಎನ್ನುವುದು ವಿಶ್ವಸಂಸ್ಥೆಯ ನಿಲುವಾಗಿದೆ. ಆದರೆ ಇಸ್ರೇಲ್ ಮುಖಾಂತರ ಅಮೆರಿಕ ವಿರೋಧಿಸುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಮಾಅತ್-ಎ-ಇಸ್ಲಾಮಿ ಹಿಂದ್ ಕರ್ನಾಟಕದ ಯೂಸುಫ್ ಖನ್ನಿ ಮಾತನಾಡಿ, “ಮಕ್ಕಳು, ಅಮಾಯಕ ನಾಗರಿಕರು, ಮಹಿಳೆಯರು, ಆರೋಗ್ಯ ಕಾರ್ಯಕರ್ತರು, ಯುಎನ್ ಕಾರ್ಯಕರ್ತರು - ಎಲ್ಲರೂ ಕೊನೆಯಿಲ್ಲದೆ ಕೊಲ್ಲಲ್ಪಡುತ್ತಿದ್ದಾರೆ. ಜನರಿಗೆ ಕುಡಿಯುವ ನೀರು ಕೂಡ ಸಿಗುತ್ತಿಲ್ಲ! ಇಸ್ರೇಲ್ ಈಗ ತನ್ನ ನೆರೆಯ ದೇಶಗಳ ಮೇಲೆ ದಾಳಿ ಮಾಡುತ್ತಿದೆ. ನಾವು ಅಂತಹ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುವುದನ್ನು ಮುಂದುವರಿಸಬೇಕು. ಎಲ್ಲಾ ಇಸ್ರೇಲಿ ಸರಕಾರಿ ಸಂಸ್ಥೆಗಳ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಬಹಿಷ್ಕಾರಕ್ಕೆ ನಾವು ಕರೆ ನೀಡಬೇಕು ಎಂದರು.

ಪ್ರತಿಭಟನೆಯಲ್ಲಿ ಕಲೆಕ್ಟಿವ್ ಸಂಘಟನೆಯ ಟ್ವಿಶಾ, ಜಾಯಿಂಟ್ ಕಾನ್ಸರೇಶನ್ ಆಫ್ ಟ್ರೇಡ್ ಯೂನಿಯನ್ಸ್ ಮುಖಂಡ ಕೆ.ವಿ ಭಟ್, ವಕೀಲ ವಿನಯ್ ಶ್ರೀನಿವಾಸ್, ಮೈತ್ರೇಯಿ, ಅಂಕಣಕಾರ ಶಿವಸುಂದರ್, ಹೋರಾಟಗಾರ ಮಲ್ಲು ಕುಂಬಾರ ಮತ್ತಿತರರು ಉಪಸ್ಥಿತರಿದ್ದರು.


Share: