ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬಿಜೆಪಿ ಮುನ್ನಡೆಗೆ ತಡೆ ಆದರೂ …

ಬಿಜೆಪಿ ಮುನ್ನಡೆಗೆ ತಡೆ ಆದರೂ …

Thu, 07 Jan 2010 15:03:00  Office Staff   S.O. News Service

ಬಿಜೆಪಿ ಮುನ್ನಡೆಗೆ ತಡೆ ಆದರೂ …

ನಮ್ಮ ಮಾದ್ಯಮಗಳು ಎಷ್ಟು ವಸ್ತುನಿಷ್ಠ ?   ಅದೆಷ್ಟು ವ್ಯಕ್ತಿನಿಷ್ಠ ಅಂತಾ ಪ್ರತಿದಿನವೂ ಪ್ರತಿಬಾರಿಯೂ ಅನ್ನಿಸದೇ ಇರದು.  ಈ ಪಕ್ಷಾತೀತರ ಪಕ್ಷಪಾತ ಎಷ್ಟು ಎಲ್ಲಿಗೆ ನಿಂತಿದೆ ಎಂಬುದು ವಿಧಾನ ಪರಿಷತ್ ಚುನಾವಣೆ ಫಲಿತಾಂಶವನ್ನು ಪ್ರಕಟಿಸಿದ ರೀತಿ, ನೀಡಿದ ತಲೆಬರಹಗಳೇ ಸಾರಿದವು.  “ಬಿಜೆಪಿ ಓಟಕ್ಕೆ ಮೈತ್ರಿ ಲಗಾಮು” ಎಂದು ಪ್ರಜಾವಾಣಿ ಹೇಳಿತು.  ಹೌದಲ್ಲ! ಫಲಿತಾಂಶ ಒಂದೇ.  ಆದರೆ ಎಷ್ಟೆಲ್ಲಾ ನಮೂನೆಯ ವಿಶ್ಲೇಷಣೆ?!

ಚುನಾವಣೆ ನಡೆದದ್ದು 25 ಸ್ಥಾನಗಳಿಗೆ. 10 ಕಾಂಗ್ರೆಸ್, 10 ಬಿಜೆಪಿ 5 ಜೆಡಿ(ಎಸ್) ಗಳಿಸಿದ ಹಿನ್ನೆಲೆಯಲ್ಲಿ ಈ ಫಲಿತಾಂಶದ ಬಗ್ಗೆಯೂ ವಿವಿಧ ಪಕ್ಷಗಳು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸಿದವು. ಇದರಲ್ಲಿ ಸೋಲಿನ ಅಥವ ಗೆಲುವಿನ ವಸ್ತುನಿಷ್ಠ ವಿಮರ್ಶೆ ಕಾಣಲಿಲ್ಲ. ಯಾವುದು ಅನೈತಿಕ, ಅಕ್ರಮ ವಿಧಾನಗಳನ್ನು ಅನುಸರಿಸಲಾಯಿತೋ ಅವೆಲ್ಲವೂ ತಮ್ಮ ಚುನಾವಣೆಯ ಸಹಜ ತಂತ್ರಗಳೆಂದೇ ಬೀಗಿದವು. ಸಾರ್ವತ್ರಿಕ ಚುನಾವಣೆಗಳಲ್ಲಿ ಜನತೆಯ ಮತ ಅಪಹರಿಸಲು ಹಣ, ಆಮಿಷಗಳ ಹೊಳೆ ಇದ್ದಂತೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿದ್ದ ಜನಪ್ರತಿನಿಧಿಗಳನ್ನೇ ಭ್ರಷ್ಟರನ್ನಾಗಿಸಲು ಪಕ್ಷಗಳು ಮುಂದಾದವು.

ಇಂತಹ ಅಕ್ರಮಗಳ ಹೊಲಸನ್ನೇ ತೀರ್ಥಪ್ರಸಾದವಾಗಿ ಸ್ವೀಕರಿಸಿ ಅದರ ನಿಶೆಯಲ್ಲಿಯೇ ಮತ ಚಲಾಯಿಸಿದರು. ಮುತ್ಸದ್ಧಿಗಳ ಮೇಲ್ಮನೆಯನ್ನು ಪ್ರವೇಶಿಸಿದ್ದು ಬಹುತೇಕ ರಾಜಕೀಯ ’ದಂಧೆ’. ಇದರಲ್ಲಿ ಅಧಿಕಾರರೂಢ ಬಿಜೆಪಿಯ ’ಪ್ರತಾಪ’ಗಳು ಹಸಿಹಸಿಯಾಗಿಯೇ ವರದಿಯಾಗಿ ಹೊರಬಂದವು. ಚುನಾವಣಾ ಆಯೋಗವೂ ಸಹ ಇದನ್ನೆಲ್ಲ ಬಾಯ್ಮುಚ್ಚಿ ಕೈಕಟ್ಟಿ ನೋಡಿತಷ್ಟೆ. ಅನೈತಿಕ ಆಪರೇಷನ್ ಕಮಲ, ರೇಸಾರ್ಟ್ ಮೋಜನ್ನು “ಜಾಗೃತ” ಮತದಾರರು ಅನುಭವಿಸಿದ್ದು ಬಲಪಂಥೀಯ ರಾಜಕಾರಣದ ಅಧಃಪತನವನ್ನು ಸಾರಿ ಸಾರಿ ಹೇಳಿತು. ಹೀಗೆ ಗಳಿಸಿದ ಅಧಿಕಾರವನ್ನು ಅವರು ಆರಿಸಿಬಂದ ಸಂಸ್ಥೆಗಳ ಉದ್ಧಾರಕ್ಕೊ ಅಥವ ಖರ್ಚು ಮಾಡಿದ ಹಣದ ಗಳಿಕೆಗೆ ಮೀಸಲಿಡುತ್ತಾರೋ ಎಂದು ಹೇಳುವುದು ಅನಗತ್ಯ. ನಾಡಿನ ಬಹುತೇಕ ಮಾಧ್ಯಮಗಳು ಪ್ರತಿಷ್ಠಿತ ವೃತ್ತಿನಿಯಮ (ಪಕ್ಷಾತೀತವಿಲ್ಲದ)ದಾಚೆ ಮಾದ್ಯಮೋದ್ಯಮದ ಪರಿಭಾಷೆಯಲ್ಲೇ ವ್ಯವಹರಿಸಿದ್ದು.

ಬಿಜೆಪಿ ಗುಂಪುಗಾರಿಕೆ

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷದೊಳಗಿನ ಗುಂಪುಗಾರಿಕೆ, ಕಿತ್ತಾಟಗಳು, ದುರಾಡಳಿತ, ಅಕ್ರಮಗಳು ಭ್ರಷ್ಟತೆಯ ತಾರಕಸ್ಥಿತಿ ಹೀಗಿರುವಾಗಲೇ ಈ ಅಧಿಕಾರವನ್ನು ಬಳಸಿ ರಾಜ್ಯದಲ್ಲಿ ತನ್ನ ಕೋಮುವಾದಿ ಫ್ಯಾಸಿಸ್ಟ್ ಅಜೆಂಡಾದ ಜಾರಿಗೆ ಸತತವಾಗಿ ತೊಡಗಿರುವ ಆರೆಸ್ಸೆಸ್ ಪ್ರಯತ್ನಗಳು ಮತ್ತು ಮುಂದಿನ ಅದರ ಗುರಿಯತ್ತ ಧಾಪುಗಾಲಿನ ನಡೆಗಳ ನಡುವೆ ವಿಧಾನಪರಿಷತ್ಗೆ ನಡೆದ ಚುನಾವಣೆಗಳು ಮಹತ್ವವನ್ನು ಪಡೆದಿದ್ದವು. ವಿಧಾನಸಭೆಯಲ್ಲಿ ಬಿಜೆಪಿಗೆ ಬಹುಮತವಿದೆ. ಆದರೆ ಪರಿಷತ್ನಲ್ಲಿ ಇಲ್ಲ. ಹೀಗಾಗಿ ಯಾವುದೇ ಮಸೂದೆಗಳು ಪೂರ್ಣ ಅಂಗೀಕಾರವಾಗಬೇಕಾದರೆ ಮೇಲ್ಮನೆಯಲ್ಲಿಯೂ ಅಂಗೀಕಾರವಾಗಬೇಕು. ಹೀಗಾಗಿ ಪರಿಷತ್ನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳುವ ಮೂಲಕ ಮುಂದೆ ತರಬೇಕೆಂದಿರುವ ಹಲವು ಮಸೂದೆಗಳನ್ನು (ಗೋಹತ್ಯೆ  ನಿಷೇಧ ಕಾನೂನು, ಶಿಕ್ಷಣ ಮಸೂದೆಗಳು ಮುಂತಾದವು) ಸುಲಭವಾಗಿ ಅಂಗೀಕರಿಸಿ ಜಾರಿಗೆ ತರತಬೇಕೆಂಬ ಧಾವಂತ ಸಂಘ ಪರಿವಾರಕ್ಕೆ ಇತ್ತು. ಈಗಲೂ ಇದೆ. ಅದಕ್ಕಾಗಿಯೇ ಈ ಎಲ್ಲವನ್ನೂ ಅದು ದುರ್ಬಳಕೆ ಮಾಡಿತು. ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿತು. ಇದೇ ಉಮೇದಿನಲ್ಲಿ ಮುಖ್ಯ ಮಂತ್ರಿಗಳು ಹೇಗಿದ್ದರೂ 18 ಸ್ಥಾನಗಳನ್ನು ಗೆಲ್ಲುವುದಾಗಿ ಹೇಳುತ್ತಿದ್ದರೆ, ಇಂತಹದೇ ಉಹಾಲೋಕದ ಅಂಕಿಗಳನ್ನು ಪಕ್ಷದ ನಾಯಕರು ಹೇಳಿಕೊಂಡು ತಿರುಗಿದರು.  ಇಷ್ಟೆಲ್ಲವುಗಳ ನಡುವೆಯೂ ವಿರೋಧಪಕ್ಷಗಳಾದ ಕಾಂಗ್ರೆಸ್ ಜೆಡಿ(ಎಸ್)ನ ಮೈತ್ರಿಕೂಟ 15 ಸ್ಥಾನಗಳನ್ನು ಗಳಿಸಿದರೆ, ಬಿಜೆಪಿ 10ಕ್ಕೆ ತೃಪ್ತಿ ಪಡಬೇಕಾಯ್ತು. ಹೀಗೆ ಬಿಜೆಪಿ ಸಂಘಪರಿವಾರದ ನಿರೀಕ್ಷೆಯ ಓಟಕ್ಕೆ, ಆಡಬೇಕೆಂದಿದ್ದ ಆಟಕ್ಕೆ ಒಂದು ತಡೆಯಂತೂ ಈ ಫಲಿತಾಂಶ ನೀಡಿದೆ. ಕೋಮುವಾದಿ ಬಿಜೆಪಿ ಸರಕಾರದ ದುರಾಡಳಿತ, ಭ್ರಷ್ಟತೆ, ಅಕ್ರಮ ಜನವಿರೋಧಿ ನೀತಿಗಳಿಗೆ  ತಕ್ಕ ಉತ್ತರ ಸಿಕ್ಕಿದೆ.

ನಿಜ. ಹಿಂದಿನ (ಇದೇ ರಂಗದಿಂದ) ನಾಲ್ಕು ಸ್ಥಾನಗಳಿಗೆ ಹೋಲಿಸಿದರೆ ಈಗ ಬಿಜೆಪಿಗೆ 6 ಅಧಿಕ ಸ್ಥಾನಗಳು ಬಂದಿವೆ. ಇದರಲ್ಲಿ ನಾಲ್ಕು ಸ್ಥಾನಗಳಂತೂ ಖಂಡಿತಕ್ಕೂ  ಕಾಂಗ್ರೆಸ್-ಜೆಡಿ(ಎಸ್) ಪಕ್ಷಗಳ ವಿದ್ಯಮಾನಗಳು ಹಾಗೂ ಚುನಾವಣಾ ತಂತ್ರಗಾರಿಕೆಯ ವೈಫಲ್ಯದಿಂದಾಗಿಯೇ ಬಂದಿವೆ. ಇದರಲ್ಲಿ ಎರಡು ಸ್ಥಾನಗಳು ಕಾಂಗ್ರೆಸ್ನ ಆಂತರಿಕ ಗುಂಪುಗಾರಿಕೆ ಅಥವ ಅಭ್ಯರ್ಥಿ ಆಯ್ಕೆಯಲ್ಲಿನ ಸಮಸ್ಯೆಗಳಿಂದಲೂ ಆಗಿದೆ. ಉಧಾಹರಣೆಗೆ ಬೀದರ ಹಾಗೂ ಚಿತ್ರದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಟಿಕೇಟು ನಿರಾಕರಿಸಿದ್ದರಿಂದ ಇಬ್ಬರು ಶಾಸಕರು ಬಿಜೆಪಿಗೆ ಸೇರಿ ಅಲ್ಲಿ ಗೆದ್ದರು. ವೆುಸೂರು, ಚಾಮರಾಜನಗರ ಎರಡು ಸ್ಥಾನಗಳಲ್ಲಿ ಆಯ್ಕೆಯಾದುದರಲ್ಲಿ ಇಂತಹದೇ ಅನುಭವ-ನೆಲೆ  ಇದ್ದರೂ  ಗೆಲುವು ಪಡೆಯಲಾಗದ ಸ್ಥಿತಿ. ಬಿಜೆಪಿ ಇದನ್ನು ಬಳಸಿಕೊಂಡು ಗೆದ್ದಿತು. ದಕ್ಷಿಣ ಕನ್ನಡದಲ್ಲಿ ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡು ಹಿಂದೆ ಗೆದ್ದಿದ್ದ ಸ್ಥಾನ ಬಿಟ್ಟುಕೊಟ್ಟಿತು. ಹೀಗೆ ಇನ್ನೂ ಕೆಲವು ಸಂಗತಿಗಳನ್ನು ಗಮನಿಸಬಹುದು. ಹಾಗೆ ನೋಡಿದರೆ ಹಿಂದೆ 19 ಸ್ಥಾನಗಳಿದ್ದ ಕಾಂಗ್ರೆಸ್ 10 ಪಡೆದು 9 ಅನ್ನು ಕಳೆದುಕೊಂಡಿದೆ. ಇದರ ಬಹುತೇಕ ಲಾಭ ಬಿಜೆಪಿಗೆ ಆರು ಸಿಕ್ಕಿದೆ. ಇದು ಮೈತ್ರಿ ಪಕ್ಷಗಳ ಅದರಲ್ಲೂ ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆ ಎನ್ನುವಾಗಲೇ ಪ್ರಧಾನವಾಗಿ ಕಾಂಗ್ರೆಸ್ ಸತತವಾಗಿ ತೋರುತ್ತ ಬಂದಿರುವ ರಾಜಕೀಯ ನಿಷ್ಕ್ರೀಯತೆ, ಅಧಿಕೃತ ವಿರೋಧ ಪಕ್ಷವಾಗಿಯೂ ಜನತೆಯ ಜ್ವಲಂತ ಪ್ರಶ್ನೆಗಳನ್ನೆತ್ತಿಕೊಳ್ಳಲು ಅದರ ನಿರಾಕರಣೆ ಹಾಗೂ ಕೇಂದ್ರದ ಜನವಿರೋಧಿ ನೀತಿಗಳ ದುಷ್ಫಲಗಳಿವೆ. ಇನ್ನೊಂದೆಡೆ ಒಂದು ಸ್ಥಾನ ಹೊಂದಿದ್ದ ಜೆಡಿ(ಎಸ್) ಮತ್ತೆ ನಾಲ್ಕು ಸ್ಥಾನ ಹೆಚ್ಚಿಗೆ ಗಳಿಸಿ ದಕ್ಷಿಣ ಕರ್ನಾಟಕದಲ್ಲಿ ಅದರ ನೆಲೆ-ಪ್ರಭಾವವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ಇದರೊಂದಿಗೆ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಬಿಜೆಪಿ ಬಲವಾಗಿರುವ ಕೊಡಗು ಮತ್ತು ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಅದು ಸೋತಿರುವುದು.  ಬಹುತೇಕ ಗೆದ್ದಿರುವಲ್ಲಿಯೂ ಮತಗಳ ಅಂತರ ಅಷ್ಟೊಂದು ಹೆಚ್ಚು ಇಲ್ಲದಿರುವುದು. ಪ್ರಸಕ್ತವಾಗಿ 75 ಸದಸ್ಯರ ಪರಿಷತ್ನಲ್ಲಿ ಬಿಜೆಪಿ 34 ಹೊಂದಿದಂತಾಗಿದೆ. (ಹಿಂದೆ 28), ಕಾಂಗ್ರೆಸ್ 19 (ಹಿಂದೆ 28), ಜೆಡಿ(ಎಸ್) 17 (ಹಿಂದೆ 13), ಪಕ್ಷೇತರರು 3, ಜೆಡಿಯು 1, ಸಭಾಪತಿ 1(ಕಾಂಗ್ರೆಸ್). ಅಂದರೆ ಯಾರಿಗೂ ನಿಚ್ಚಳ ಬಹುಮತವಿಲ್ಲ. ಈಗಲೂ ಸೆಕ್ಯೂಲರ್ ಶಕ್ತಿಗೆ ಬಲವಿದೆ. ಆದರೆ ಈಗಿನ ಫಲಿತಾಂಶದಿಂದ ಬಿಜೆಪಿ ತುಂಬಾ ವಿಚಲಿತವಾಗಿಲ್ಲ. ತಾನೊಂದೇ ದೊಡ್ಡ ಪಕ್ಷವೆಂದೂ, ಮುಂದೆ ಖಾಲಿಯಾಗಲಿರುವ ಸ್ಥಾನಗಳಲ್ಲಿ ಅವನ್ನು ತನ್ನದಾಗಿಸಿಕೊಳ್ಳಬಹುದೆಂಬ ಹವಣಿಕೆಯಲ್ಲ್ಕಿದೆ. ಬಹುಮತಕ್ಕೆ ಕೆಲವೊಮ್ಮೆ ಆಪರೇಷನ್ ಕಮಲ ಎನ್ನಬಹುದು. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕಿದೆ.

-  ಗುರುಶಾಂತ್

 

ಸೌಜನ್ಯ: ಜನಶಕ್ತಿ 


Share: