ಕಾರವಾರ : ಜಿಲ್ಲಾ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಉಷಾ ಹೆಗಡೆ ಅವರಿಗೆ ಭ್ರಷ್ಟಾಚಾರದ ಪ್ರಕರಣದಲ್ಲಿ ಕಾರವಾರದ ಲೋಕಾಯುಕ್ತ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ಅವರು ಒಂದೇ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಜಿಲ್ಲಾ ಪಂಚಾಯತ್ ಸದಸ್ಯತ್ವ ಹುದ್ದೆಯನ್ನು ಸರಿಯಾಗಿ ನಿಭಾಯಿಸದೆ ಹಾಗೂ ಅಂಗನವಾಡಿ ಕಾರ್ಯಕರ್ತೆಯಾಗಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆಂದು ಆರೋಪಿಸಲಾಗಿತ್ತು.
ಜನವರಿ 2011 ರಿಂದ ನವೆಂಬರ್ 2012 ರವರೆಗೆ ಅಂಗನವಾಡಿ ಕಾರ್ಯಕರ್ತೆಯೆಂದು ಸರ್ಕಾರದಿಂದ ಗೌರವಧನ ಒಟ್ಟು 88,630 ಸ್ವೀಕರಿಸಿ ಸರ್ಕಾರಕ್ಕೆ ಮೋಸ ಮಾಡಿದ್ದಾಗಿ ಆರೋಪಿಸಲಾಗಿತ್ತು.
ಏಕಕಾಲದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿ ಕಾರ್ಯನಿರ್ವಹಿಸಿ ಅಂಗನವಾಡಿ ಕರ್ತವ್ಯದಲ್ಲಿಯೂ ಸರಿಯಾಗಿ ಹಾಜರಿರದೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹಾಜರಾತಿ ಪುಸ್ತಕದಲ್ಲಿ ಹಾಜರಿರುವುದಾಗಿ ಸುಳ್ಳು ಸಹಿ ಮಾಡಿದ್ದಾಗಿಯೂ ಮತ್ತು ಈ ಮೂಲಕ ಭಾರತೀಯ ದಂಡ ಸಹಿತ ಕಲಂ 468ರ ಮೇರೆಗೆ ದಂಡನೀಯವಾದ ಅಪರಾಧವನ್ನು ಎಸಗಿದ್ದಾರೆಂದು ಆಪಾದಿಸಲಾಗಿತ್ತು.
ಹೀಗಾಗಿ ಒಂದು ವರ್ಷಗಳ ಕಠಿಣ ಸಜೆ ಹಾಗೂ ಐದು ಸಾವಿರ ರೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಜಯಕುಮಾರ್ ಈ ತೀರ್ಪು ನೀಡಿದ್ದಾರೆ. ಲೋಕಾಯುಕ್ತ ವಿಶೇಷ ಅಭಿಯೋಜಕರಾದ ಎಲ್ ಎಂ ಪ್ರಭು ಪ್ರಕರಣ ನಡೆಸಿದ್ದರು.