ಮಂಗಳೂರು, ಫೆಬ್ರವರಿ ೧೪: ಪ್ರೇಮಿಗಳ ದಿನಾಚರಣೆಯಂದು ಪ್ರೇಮಿಗಳನ್ನು ಬಿಟ್ಟು ಮುಗ್ದ ಮಕ್ಕಳ ಮೇಲೆ ಆಕ್ರಮಣಕ್ಕೆ ಶ್ರೀರಾಮಸೇನೆ ಮುಂದಾಗಿದೆ. ಉಳ್ಳಾಲದ ಸಮೀಪ ಇಂದು ನಿಷೇದಾಜ್ಞೆ ವಿಧಿಸಿದ್ದರೂ ನಿಷೇದಾಜ್ಞೆಯ ಹೊತ್ತಿನಲ್ಲಿಯೇ ಮದ್ರಸಾದಿಂದ ಹಿಂದಿರುಗುತ್ತಿದ್ದ ಇಬ್ಬರು ಮಕ್ಕಳು ಹಾಗೂ ಅವರ ತಂದೆಯ ಮೇಲೆ ಕತ್ತಿಗಳಿಂದ ದಾಳಿ ನಡೆಸಿದ ವರದಿಯಾಗಿದೆ.
ಇಂದು ಸಂಜೆ ಮದ್ರಸಾದಿಂದ ಮನೆಯ್ಗೆ ಹಿಂದಿರುಗುತ್ತಿದ್ದ ಸಾಹಿಲ್ (ಒಂಭತ್ತು ವರ್ಷ) ಹಾಗೂ ಶಾಜಿಯಾ (ಹನ್ನೊಂದು ವರ್ಷ) ರನ್ನು ಕರೆದುಕೊಂಡು ಬರುತ್ತಿದ್ದ ತಂದೆ ಬದರುದ್ದೀನ್ ರವರ ಮೇಲೆ ಉಳ್ಳಾಲ ಹಳೆಯ ಪೋಲೀಸ್ ಠಾಣೆಯ ಬಳಿ ಏಕಾಏಕಿ ಕತ್ತಿಗಳಿಂದ ಆಕ್ರಮಣ ನಡೆಸಿದ ಶ್ರೀರಾಮಸೇನೆಯ ಕಾರ್ಯಕರ್ತರು ಮೂವರನ್ನೂ ಗಾಯಗೊಳಿಸಿದ್ದಾರೆ. ಮೂವರನ್ನೂ ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತಿದೆ. ಬದರುದ್ದೀನ್ ರವರಿಗೆ ತಲೆ ಹಾಗೂ ಕಿವಿಗಳಿಗೆ ತೀವ್ರತರದ ಗಾಯಗಳಾಗಿವೆ ಹಾಗೂ ಮಕ್ಕಳಿಗೂ ಮಾರಣಾಂತಿಕ ಗಾಯಗಳಾಗಿವೆ.
ಉಳ್ಳಾಲ ಸಿಪಿಐ ಯವರು ಈ ಪ್ರಕರಣದ ಸಂಬಂಧ ಮೂವರನ್ನು ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿದೆ.
ಈ ಆಕ್ರಮಣ ನಿಷೇಧಾಜ್ಞೆಯ ಹೊತ್ತಿನಲ್ಲಿಯೇ ನಡೆದಿರುವುದು ನಾಗರಿಕರಲ್ಲಿ ಸುರಕ್ಷತೆಯ ಭಾವನೆಗೆ ಧಕ್ಕೆ ತಂದಿದೆ.