ಮುರ್ಡೇಶ್ವರ, ಫೆಬ್ರವರಿ 14: ಮಹಾಶಿವರಾತ್ರಿಯ ನಿಮಿತ್ತ ವಿಶ್ವಪ್ರಸಿದ್ಧ ಮುರುಡೇಶ್ವರಕ್ಕೆ ಜನಸಾಗರವೇ ಹರಿದು ಬಂದಿದೆ.
ಉಪವಾಸ ವೃತವನ್ನು ಆಚರಿಸಿದ ಸಾವಿರಾರು ಭಕ್ತಾದಿಗಳು ಶುಕ್ರವಾರ ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ತೆರಳಿ ಅಭಿಷೇಕ, ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ರುದ್ರಾಭಿಷೇಕ, ಪಂಚಾಮೃತಾಭಿಷೇಕಗಳು ಈಶ್ವರನಿಗೆ ಮಂತ್ರಘೋಷಗಳೊಂದಿಗೆ ಸಮರ್ಪಿತವಾದವು.
ಶುಕ್ರವಾರ ಬೆಳಿಗ್ಗೆ 5.30 ಗಂಟೆಯಿಂದಲೇ ಧಾರ್ಮಿಕ ವಿಧಿಗಳಿಗೆ ಚಾಲನೆ ನೀಡಲಾಗಿದ್ದು, ಬೆಳಿಗ್ಗೆ ೧೦ ಗಂಟೆಯವರೆಗೆ ವಿರಳವಾಗಿದ್ದ ಜನಸಂಖ್ಯೆ ಮಧ್ಯಾಹ್ನದ ವೇಳೆಗೆ ಏರಿಕೆಯನ್ನು ಕಂಡಿತು. ರಾಜ್ಯದ ವಿವಿಧ ಮೂಲೆಗಳಿಂದ ಬಂದ ಪ್ರವಾಸಿಗರು ವಿಶ್ವಪ್ರಸಿದ್ಧ ಶಿವನ ಸನ್ನಿಧಿಯಲ್ಲಿ ನಿಂತು ಪುಳಕಗೊಂಡರು. ಈ ಬಾರಿ ವಿದೇಶಿ ಪ್ರವಾಸಿಗರ ಸಂಖ್ಯೆಯೂ ಗಮನಾರ್ಹವಾಗಿತ್ತು.
ನೂಕುನುಗ್ಗಲು ಉಂಟಾಗದಂತೆ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು. ಅಲಂಕೃತಗೊಂಡ ಸ್ವರ್ಣರಥ ಸಂಚಾರವು ಶಿವರಾತ್ರಿ ಆಚರಣೆಗೆ ಮೆರುಗನ್ನು ನೀಡಿತು. ಶನಿವಾರವೂ ಭಕ್ತ ಸಮೂಹ ದೇವಸ್ಥಾನದಲ್ಲಿ ಸೇರುವ ನಿರೀಕ್ಷೆ ಇದೆ.