ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪ್ರಯಾಣದ ಸಮಯ ವಾಂತಿಯೊಂದು 5 ಜನರ ಜೀವ ಉಳಿಸಿತು!

ಪ್ರಯಾಣದ ಸಮಯ ವಾಂತಿಯೊಂದು 5 ಜನರ ಜೀವ ಉಳಿಸಿತು!

Sun, 11 Aug 2024 23:12:14  Office Staff   SOnews

ಉಪ್ಪಿನಂಗಡಿ: ಪ್ರಯಾಣದ ಮಧ್ಯೆ ವಾಂತಿ ಮಾಡುವುದೆಂದರೆ ದೊಡ್ಡ ಕಿರಿಕಿರಿ. ಆದರೆ ಅದೇ ವಾಂತಿಯು ಇಲ್ಲಿ ಐವರ ಜೀವ ಉಳಿಸಿದೆ!

ಕಂಟೈನರ್‌ ಲಾರಿಯೊಂದು ಶನಿವಾರ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬರ್ಚಿನಹಳ್ಳದಲ್ಲಿ ದಾವಣಗೆರೆ ಮೂಲದವರು ಪ್ರಯಾಣಿಸುತ್ತಿದ್ದ  ಕಾರಿನ ಮೇಲೆ ಬಿದ್ದಿದ್ದು, ಕಾರು ಸಂಪೂರ್ಣ ಅಪ್ಪಚ್ಚಿಯಾಗಿದೆ. ಆದರೆ ಈ ಹೊತ್ತಿನಲ್ಲಿ ಕಾರಿನಲ್ಲಿ ಯಾರೂ ಇರಲಿಲ್ಲ. ಅದರಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ವಾಂತಿ ಬಂದ ಕಾರಣ  ಎಲ್ಲರೂ ಕೆಳಗಿಳಿದಿದ್ದರು. ಆದ್ದರಿಂದಲೇ ಇವರೆಲ್ಲರೂ ಜೀವ ಉಳಿಸಿಕೊಂಡರು.

ದಾವಣಗೆರೆಯ ನಿವಾಸಿಗರಾದ ಗಣೇಶ, ಶಿವು, ಕಾವ್ಯಾ, ದಂಡ್ಯಮ್ಮ ಅವರು ಚಾಲಕ ಅಬ್ದುಲ್‌ ರಹಿಮಾನ್‌ ಮುಲ್ಲಾ ಅವರೊಂದಿಗೆ ಶುಕ್ರವಾರ ಧರ್ಮಸ್ಥಳ ಕ್ಷೇತ್ರಕ್ಕೆ ಬಂದವರು ಶನಿವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶನ ಮಾಡಿ ಊರಿಗೆ ಹಿಂದಿರುಗುವ ವೇಳೆ 11.30ಕ್ಕೆ ಬರ್ಚಿನಹಳ್ಳದಲ್ಲಿ ಅಪಘಾತ ಸಂಭವಿಸಿದೆ.
ಕಾರಿನಲ್ಲಿದ್ದ ಕಾವ್ಯಾ ಎಂಬವರಿಗೆ ವಾಂತಿ ಬರುತ್ತಿದೆ ಎಂದು ತಿಳಿಸಿದ ಕಾರಣಕ್ಕೆ  ಹೆದ್ದಾರಿ ಬದಿಯಲ್ಲಿ ಕಾರನ್ನು ನಿಲ್ಲಿಸಿ ಕಾವ್ಯಾಳನ್ನು ಉಪಚರಿಸಲು ಎಲ್ಲರೂ  ಇಳಿದಿದ್ದರು. ಚಾಲಕ ಮೂತ್ರ ವಿಸರ್ಜನೆಗೆ ಹೋಗಿದ್ದರು. ಈ ವೇಳೆ ಎಲ್ಲರ ಕಣ್ಣೆದುರೇ ಅವರ ಕಾರಿನ ಮೇಲೆ  ಕಂಟೈನರ್‌ ಲಾರಿ ಮಗುಚಿ ಬಿದ್ದು ಕಾರು ಅಪ್ಪಚ್ಚಿಯಾಗಿದೆ.


Share: