ಬನ್ಸಾರ(ರಾಜಸ್ಥಾನ): ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ಧರ್ಮವನ್ನು ತನ್ನ ಚುನಾವಣಾ ಭಾಷಣದಲ್ಲಿ ಎಳೆದು ತರುವ ಮೂಲಕ ಪ್ರಧಾನಿಯವರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆಂದು ಪ್ರತಿಪಕ್ಷಗಳು ಆಪಾದಿಸಿವೆ.
ಬನ್ಸಾರದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶದಲ್ಲಿ ಪಾಲ್ಗೊಂಡ ಮೋದಿ ಅವರು, ಕಾಂಗ್ರೆಸ್ ಪ್ರಣಾಳಿಕೆಯನ್ನು ಕಟುವಾಗಿ ಟೀಕಿಸಿದರು. ಈ ಭರದಲ್ಲಿ ಮುಸ್ಲಿಮ್ ಸಮುದಾಯವನ್ನೂ ಎಳೆದು ತಂದ ಮೋದಿ, “ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಮ್ ಸಮುದಾಯಕ್ಕೆ ಹೆಚ್ಚು ಸಂಪತ್ತನ್ನು ಹಂಚುವುದೇ ಕಾಂಗ್ರೆಸ್ ಗ್ಯಾರಂಟಿ' ಎಂದು ವಾಗ್ದಾಳಿ ನಡೆಸಿದರು. ಒಂದೂವರೆ ನಿಮಿಷದ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.
“ಈ ದೇಶದ ಸಂಪತ್ತಿನ ಮೇಲೆ ಮೊದಲ ಅಧಿಕಾರ ಇರುವುದು ಮುಸ್ಲಿಮ್ ಸಮುದಾಯಕ್ಕೆ ಎಂದು ಹಿಂದಿನ ಕಾಂಗ್ರೆಸ್ ಸರಕಾರ ಹೇಳಿತ್ತು. ಇದರ ತಾತ್ಪರ್ಯವೆಂದರೆ, ಯಾರಿಗೆ ಹೆಚ್ಚು ಮಕ್ಕಳಿದ್ದಾರೊ ಅವರಿಗೆ ದೇಶದ ಸಂಪತ್ತನ್ನು ಹಂಚುವುದಾಗಿದೆ. ಈ ಸಂಪತ್ತನ್ನು ಕಾಂಗ್ರೆಸ್, ನುಸುಳುಕೋರರಿಗೆ ಹಂಚಲಿದೆ. ನೀವು ಕಷ್ಟಪಟ್ಟು ದುಡಿದ ಸಂಪತ್ತು ಮತ್ತು ಹಣವನ್ನು ನುಸುಳುಕೋರರಿಗೆ ಹಂಚಬೇಕೆ? ಇದಕ್ಕೆ ನಿಮ್ಮ ಒಪ್ಪಿಗೆ ಇದೆಯೆ? ಇದನ್ನು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯೇ ಹೇಳುತ್ತಿದೆ. ದೇಶದ ವೈಯಕ್ತಿಕ ಆಸ್ತಿಗಳನ್ನು ಕಸಿದು, ಅದನ್ನು ಮುಸ್ಲಿಮರಿಗೆ ಕಾಂಗ್ರೆಸ್ ಹಂಚಲಿದೆ. ಇದು ನಗರ ನಕ್ಸಲರ ಯೋಜನೆಯಾಗಿದೆ. ಇದರಿಂದ ನಮ್ಮ ಹೆಣ್ಣು ಮಕ್ಕಳ ಮಂಗಳ ಸೂತ್ರ ಕೂಡಾ ಉಳಿಯುವುದಿಲ್ಲ. ಅಷ್ಟು ಅತಿರೇಕಕ್ಕೆ ಕಾಂಗ್ರೆಸ್ ಹೋಗಲೂ ಬಹುದು ಎಂದು ನಾನು ಹೇಳುತ್ತಿದ್ದೇನೆ'' ಎಂದು ಪ್ರಧಾನಿ ಮೋದಿ ವಿವಾದಾತ್ಮಕ ಮತ್ತು ದ್ವೇಷ ಭಾಷಣಗೈದಿದ್ದಾರೆ.
ಈ ವೀಡಿಯೊವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, ಇದು ಪ್ರಧಾನಿ ಮೋದಿ ಪಾಲಿಗೆ ವಿನಾಶಕಾರಿಯಾಗಿದೆ. ಮೊದಲ ಹಂತದ ಮತದಾನದ ನಂತರ ಪ್ರಧಾನಿ ಮೋದಿ ಈ ಮಟ್ಟಕ್ಕೆ ಇಳಿದಿದ್ದಾರೆ. ಮತ್ತೊಮ್ಮೆ ಧರ್ಮಧಾರಿತವಾಗಿ ಮತ ಯಾಚನೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಮುಸ್ಲಿಮರ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ವೈಯಕ್ತಿಕ ಆಸ್ತಿಗಳನ್ನು ಕಸಿದುಕೊಳ್ಳುತ್ತದೆ ಹಾಗೂ ಹೆಚ್ಚು ಮಕ್ಕಳನ್ನು ಹೊಂದಿರುವ ಮುಸ್ಲಿಂ ಸಮುದಾಯಕ್ಕೆ ಹಂಚುತ್ತದೆ ಎಂದು ಆರೋಪಿಸಿದ್ದಾರೆ. ಇದು 10 ವರ್ಷಗಳ ಕಾಲ ದೇಶವನ್ನು ಆಳಿರುವ ಪ್ರಧಾನಿ ಮೋದಿ ಪರಿಸ್ಥಿತಿ. ಅಂದಮೇಲೆ ಇವರ ಮನಸ್ಥಿತಿ ಹೇಗಿರಬಹುದೆಂಬುದನ್ನು ಊಹಿಸಿ. ತೀರಾ ಹತಾಶರಾಗಿರುವ ಮೋದಿ ಇಂತಹ ಮಾತುಗಳನ್ನಾಡಿದ್ದಾರೆ.ಹಿ ಗಿದ್ದೂ ಚುನಾವಣಾ ಆಯೋಗ ಇನ್ನೂ ತನ್ನ ನಿದ್ರೆಯನ್ನು ಮುಂದುವರಿಸಿದರೆ ಬಹಳ ಕಷ್ಟವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಚುನಾವಣಾ ಆಯೋಗವೇನಾದರೂ ನಿದ್ರಿಸುತ್ತಿದೆಯೇ ಎಂದು ನೆಟ್ಟಿಗರು ಹಾಗೂ ಪ್ರತಿಪಕ್ಷಗಳು ಖಾರವಾಗಿ ಪ್ರಶ್ನಿಸಿವೆ.