ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಮತ್ತು ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್‌ರ ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿ.ಸಿ.ರೋಡ್‌ನಲ್ಲಿ ಸೋಮವಾರ ಬೆಳಗ್ಗೆ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಮಧ್ಯಾಹ್ನದ ವೇಳೆಗೆ ತಿಳಿಯಾಗಿದೆ.
ಸಂಘ ಪರಿವಾರ ನೀಡಿದ ಬಿ.ಸಿ. ರೋಡ್ ಚಲೋ ಕರೆಯ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನ ರಕೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ವಿರುದ್ಧ ಘೋಷಣೆ ಕೂಗುತ್ತಾ ಮುಂದೆ ಸಾಗಲು ಮುಂದಾದಾಗ ಅವರನ್ನು ಪೊಲೀಸರು ತಡೆದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ ತಲ್ಲಾಟ ನಡೆಯಿತು. ಪರಿಸ್ಥಿತಿ ಕೈ ಮೀರಿಹೋಗುವ ಹಂತಕ್ಕೆ ತಲುಪಿದಾಗ ಪೊಲೀಸರು ಬಸ್‌ಗಳನ್ನು ರಸ್ತೆಗೆ ಅಡ್ಡಲಾಗಿ ಇಟ್ಟು ತಡೆಯೊಡ್ಡಿದರು.
ಈ ಸಂದರ್ಭದಲ್ಲಿ ವಿಹಿಂಪ ಪ್ರಾಂತ ಸಹ ಕಾರ್ಯವಾಹ ಶರಣ್ ಪಂಪ್ ವೆಲ್ ಮಾತನಾಡಿ, ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ಅವರ ಸವಾಲು ಸ್ವೀಕರಿಸಿ ಬಿ.ಸಿ.ರೋಡಿಗೆ ಬಂದಿದ್ದೇನೆ. ಇನ್ನೂ ಮುಂದೆಯೂ ಇಂತಹ ಸವಾಲು ಸ್ವೀಕರಿಸಲು ತಯಾರಾಗಿದ್ದೇವೆ. ಮುಂದೆ ಅವಶ್ಯ ಬಿದ್ದರೆ ಆತ ಹೇಳಿದಂತೆ ಮಸೀದಿಗೆ ಹೋಗುವುದಕ್ಕೂ ಸಿದ್ದರಿದ್ದೇವೆ ಎಂದು ಎಚ್ಚರಿಸಿದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವ ಮೂಲಕ ಹಿಂದುತ್ವಕ್ಕೆ ಜಯಸಿಕ್ಕಿದೆ ಎಂದರು.
ಬಳಿಕ ಹೆದ್ದಾರಿಯಲ್ಲಿ ಕೆಲಹೊತ್ತು ಕಾರ್ಯಕರ್ತರು ಘೋಷಣೆ ಕೂಗಿ ದರು. ಸಂಘ ಪರಿವಾರದ ಪ್ರಮುಖರಾದ ಪುನೀತ್ ಅತ್ತಾವರ, ಆರ್.ಚೆನ್ನಪ್ಪ ಕೋಟ್ಯಾನ್, ಎ.ಗೋವಿಂದ ಪ್ರಭು, ಪ್ರಸಾದ್ ಕುಮಾರ್ ರೈ ಬಂಟ್ವಾಳ, ಭಾಸ್ಕರ್ ಧರ್ಮಸ್ಥಳ, ನವೀನ್ ನೆರಿಯಾ, ಭುಜಂಗ ಕುಲಾಲ್, ಗುರುರಾಜ್ ಬಂಟ್ವಾಳ, ನರಸಿಂಹ ಮಾಣಿ, ಮಹೇಶ್ ಬೈಲೂರು, ಕೃಷ್ಣಪ್ರಸಾದ್, ಮಿಥುನ್ ಕಲ್ಲಡ್ಕ ನವೀನ್ ಮೂಡುಶೆಡ್ಡೆ, ಸಚಿನ್ ಮೆಲ್ಕಾರ್, ದಿನೇಶ್ ಅಮ್ಮೂರು, ಸಂದೇಶ್ ಶೆಟ್ಟಿ ಅರೆಬೆಟ್ಟು, ಪುರುಷೋತ್ತಮ ಸಾಲ್ಯಾನ್, ರಾಮ್‌ದಾಸ್ ಬಂಟ್ವಾಳ ಮತ್ತಿತರರು ಭಾಗವಹಿಸಿದ್ದರು .
ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಪಿ.ಯತೀಶ್, ಎನ್. ಎ.ಸಿ.ಹರ್ಷವರ್ಧನ್, ತಹಶೀಲ್ದಾರ್ ಅರ್ಚನಾ ಭಟ್ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಿ ಬಿ.ಸಿ.ರೋಡ್ ಪರಿಸರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿ ಘರ್ಷಣೆಯನ್ನು ತಪ್ಪಿಸಿದರು.
ಏಕಕಾಲಕ್ಕೆ ಸಂಘ ಪರಿವಾರದ ಪ್ರತಿಭಟನೆ ಹಾಗೂ ಮೀಲಾದ್ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕಲ್ಪಿಸಲಾಯಿತು. ಬಿ.ಸಿ.ರೋಡ್ ಆಸುಪಾಸಿನ ವಿವಿಧೆಡೆಗಳಲ್ಲಿ ಮೀಲಾದ್ ರ್ಯಾಲಿ, ಕಾರ್ಯಕ್ರಮಗಳು ಯಾವುದೇ ರೀತಿಯ ಗೊಂದಲ, ಅಶಾಂತಿಗೆ ಅವಕಾಶ ನೀಡದೆ ನಡೆಯಿತು.