ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಸಮಾಜ ಸೇವಕ ಎಸ್.ಎಸ್. ಕಾಮತ್ ರಿಗೆ ಗೌರವ ಸನ್ಮಾನ

ಪತ್ರಿಕಾ ದಿನಾಚರಣೆ ಅಂಗವಾಗಿ ಹಿರಿಯ ಸಮಾಜ ಸೇವಕ ಎಸ್.ಎಸ್. ಕಾಮತ್ ರಿಗೆ ಗೌರವ ಸನ್ಮಾನ

Tue, 02 Jul 2024 00:52:33  Office Staff   SOnews

 

ಭಟ್ಕಳ: ಪತ್ರಿಕಾ ದಿನಾಚರಣೆಯ ಅಂಗವಾಗಿ ಭಟ್ಕಳ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಿವೃತ್ತ ಬ್ಯಾಂಕ್ ನೌಕರ ಹಾಗೂ ಹಿರಿಯ ಸಮಾಜ ಸೇವಕ ಎಸ್. ಎಸ್. ಕಾಮತ್ ಅವರನ್ನು ಅವರ ಮನೆಯಲ್ಲಿಯೇ ಗೌರವಿಸಲಾಯಿತು.

ಸನ್ಮಾನ ಮತ್ತು ಗೌರವ  ಸ್ವೀಕರಿಸಿ ಮಾತನಾಡಿದ ಎಸ್.ಎಸ್.ಕಾಮತ್, ತಮ್ಮ ಸಮಾಜ ಸೇವೆಯ ಗುಣ ಬಾಲ್ಯದಿಂದಲೂ ಇದ್ದು ವಿದ್ಯಾಭ್ಯಾಸದ ದಿನಗಳಲ್ಲಿನ ಕಷ್ಟದ ಪರಿಸ್ಥಿತಿಯಲ್ಲಿಯೂ ತಮ್ಮ ಸ್ಪಂಧನೆಯನ್ನು ಸ್ಮರಿಸಿದರು. ತಮ್ಮ ಸಹೋದರಿ ಚಂದ್ರಕಲಾ ಕಾಮತ್ ಹಾಗೂ ಪತ್ನಿ ಆಶಾ ಕಾಮತ್ ಅವರ ಸಹಕಾರದಿಂದ ನಿವೃತ್ತಿಯ ನಂತರ ದೊಡ್ಡಮೊತ್ತವನ್ನು ಠೇವಣಿಯಾಗಿಟ್ಟು ಅದರ ಬಡ್ಡಿಯನ್ನು ಸಮಾಜ ಸೇವೆಗಾಗಿಯೇ ಇಟ್ಟಿರುವುದನ್ನು ಸ್ಮರಿಸಿದ ಅವರು ನೂರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ ತೃಪ್ತಿ ಇದೆ. ಊರಿನ ಆಗುಹೋಗುಗಳ ಕುರಿತು ಕಾಳಜಿ ವಹಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದ್ದು ಪ್ರತಿಯೊಂದು ಹಂತದಲ್ಲಿಯೂ ಸಹ ಪತ್ರಕರ್ತರ ಸಹಕಾರ ಸ್ಮರಣೀಯವಾದದ್ದು ಎಂದರು. ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಕರ್ತರನ್ನು ಸನ್ಮಾನಿಸಿ, ಗೌರವಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಆರ್. ಮಾನ್ವಿ ಮಾತನಾಡಿ ಸಂಘದ ವತಿಯಿಂದ ಪ್ರತಿ ವರ್ಷ ಪತ್ರಿಕಾ ದಿನಾಚರಣೆಯಂದು ಸಮಾಜಮುಖಿ ವ್ಯಕ್ತಿಯೋರ್ವರನ್ನು ಗೌರವಿಸುವ ಪರಿಪಾಠ ಹಾಕಿಕೊಂಡಿದೆ. ಅದರಂತೆ ಸಂಘದ ಎಲ್ಲಾ ಸದಸ್ಯರು ಕೂಡಾ ಎಸ್.ಎಸ್.ಕಾಮತ್ ಅವರ ಸಮಾಜ ಸೇವೆಯನ್ನು ಗುರುತಿಸಿ ಸನ್ಮಾನಕ್ಕೆ ಆಯ್ಕೆ ಮಾಡಿದ್ದೇವೆ. ಸಮಾಜ ಸೇವೆಯಲ್ಲಿ ಇತರರಿಗೆ ಮಾದರಿಯಾದ ಇವರ ಬದುಕು ಎಲ್ಲರಿಗೂ ಅನುಕರಣೀಯವಾಗಿದೆ ಎಂದರು.  

ಹಿರಿಯ ಲಯನ್ಸ್ ಸದಸ್ಯ ಎಂ.ವಿ. ಹೆಗಡೆ ಮಾತನಾಡಿ ಪತ್ರಿಕೆ ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಇತರ ಯಾವುದೇ ಮಾಧ್ಯಮ ಬಂದರೂ ಕೂಡಾ ಇಂದಿಗೂ ಪತ್ರಿಕೆಗಳು ತಮ್ಮನವನ್ನು ಉಳಿಸಿಕೊಂಡಿರುವುದನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿ ಸಾಹಿತಿ ಶಂಭು ಹೆಗಡೆ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ತಾಲೂಕಾ ಕಾರ್ಯದರ್ಶಿ ಶೈಲೇಶ ವೈದ್ಯ, ಸತೀಶಕುಮಾರ್ ಉಪಸ್ಥಿತರಿದ್ದರು.

ಕಾ.ನಿ.ಪತ್ರಕರ್ತರ ಸಂಘದ ತಾಲೂಕಾ ಉಪಾಧ್ಯಕ್ಷ ಮೋಹನ ನಾಯ್ಕ ಸ್ವಾಗತಿಸಿ, ನಿರೂಪಿಸಿದರು. ತಾಲೂಕಾ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.  ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ್ ವಂದಿಸಿದರು.


Share: