ಬೆಂಗಳೂರು, ಮಾರ್ಚ್ 9: ನಿತ್ಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದ್ದು ತಮ್ಮ ವಿರುದ್ದ ವ್ಯವಸ್ಥಿತ ಷಡ್ಯಂತ್ರ ನಡೆಸಲಾಗಿದೆ ಎಂದು ರಾಸಲೀಲೆಯಲ್ಲಿ ತೊಡಗಿದ್ದಳೆನ್ನಲಾದ ಚಿತ್ರನಟಿ ರಂಜಿತಾ ಆರೋಪಿಸಿದ್ದಾರೆ.
ತಾವು ಸ್ವಾಮೀಜಿಯ ಭಕ್ತೆಯಾಗಿದ್ದು ಅವರ ಸೇವೆ ಮಾಡಲು ಮುಂದಾಗಿದ್ದೆ. ಇದಕ್ಕೆ ಇಲ್ಲದ ಸಂಬಂಧಗಳನ್ನು ಸೃಷ್ಟಿಸಿ ನಕಲಿ ವಿಡಿಯೋ ಚಿತ್ರೀಕರಿಸಲಾಗಿದೆ ಎಂದು ವಾರಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಂಜಿತಾ ಆರೋಪಿಸಿದ್ದಾರೆ.
ತಾವು ನಿತ್ಯಾನಂದ ಸ್ವಾಮೀಜಿಯ ಪರಮ ಶಿಷ್ಯೆಯಾಗಿದ್ದು ಅನಗತ್ಯವಾಗಿ ತಮ್ಮ ವಿರುದ್ದ ಸಂಚು ರೂಪಿಸಿ ಚಿತ್ರೀಕರಿಸಿರುವ ವಿಡಿಯೋ ಸಂಪೂರ್ಣ ಕಪೋಲ ಕಲ್ಪಿತವಾಗಿದೆ ಎಂದು ಹೇಳಿದ್ದಾರೆ.
ಚಿತ್ರನಟಿ ರಂಜಿತಾ ಇಷ್ಟೆಲ್ಲಾ ಸ್ಪಷ್ಟೀಕರಣ ನೀಡುವ ಪ್ರಯತ್ನ ಮಾಡಿದ್ದರೂ ಸಹ ನಿತ್ಯಾನಂದ ರಾಸಲೀಲೆ ಪ್ರಕರಣ ಮತ್ತೊಂದು ತಿರುವು ಪಡೆದಿದೆ. ವಿಶ್ವಸನೀಯ ಮೂಲಗಳ ಪ್ರಕಾರ ನಿತ್ಯಾನಂದ ಸ್ವಾಮಿಯ ಕಾರು ಚಾಲಕ ಕರುಪ್ಪಲೆನಿನ್ ಹಾಗೂ ಚಿತ್ರನಟಿ ರಂಜಿತಾ ಜತೆಗೂಡಿ ಸ್ವಾಮೀಜಿಯನ್ನು ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದ ಈ ಷಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.
ತಮಿಳು ಚಿತ್ರರಂಗದ ಖ್ಯಾತ ನಟಿ ಕೆ.ಆರ್.ವಿಜಯ ಅವರ ಸಂಬಂಧಿ ಸುಧಾ ಎಂಬುವರು ರಂಜಿತಾಳನ್ನು ಸ್ವಾಮೀಜಿ ಅವರಿಗೆ ಪರಿಚಯ ಮಾಡಿಸಿದ್ದರು. ಸ್ವಾಮೀಜಿಗೆ ಬಹಳ ಹತ್ತಿರವಾಗಿದ್ದ ನಟಿ ರಂಜಿತಾ ಸ್ವಾಮೀಜಿಯನ್ನು ಮದುವೆಯಾಗಲು ಬಯಸಿದ್ದಳು ಇದಕ್ಕೆ ಸ್ವಾಮೀಜಿ ಸಹ ಒಪ್ಪಿಗೆ ನೀಡಿದ್ದ ಎನ್ನಲಾಗುತ್ತಿದೆ.
ರಂಜಿತಾ ಈ ಮೊದಲು ಸೇನಾ ಯೋಧನೊಬ್ಬನನ್ನು ಮದುವೆಯಾಗಿ ವಿಚ್ಛೇದನ ಪಡೆದಿದ್ದಳು. ಇದೀಗ ಸ್ವಾಮೀಜಿಯನ್ನು ಮದುವೆಯಾದರೆ ಕೋಟ್ಯಾಂತರ ರೂ ಆಸ್ತಿ ಪಡೆಯಬಹುದು ಎಂದು ರೂಪಿಸಿದ್ದ ತಂತ್ರ ವಿಫಲವಾಗಿರುವುದರಿಂದ ಷಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಗೊಂದಲ ವಿವಾದಗಳ ನಡುವೆ ಸ್ವಾಮಿ ನಿತ್ಯಾನಂದ ವಾರಣಾಸಿ ಯಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗವಹಿಸಿದ್ದು ಇದೇ ೧೮ ರಂದು ಬೆಂಗಳೂರಿಗೆ ಆಗಮಿಸಿ ತಮ್ಮ ಮೇಲಿರುವ ವಿವಾದಗಳ ಕುರಿತು ಸ್ಪಷ್ಟೀಕರಣ ನೀಡಲಿದ್ದಾರೆ ಎಂದು ಸ್ವಾಮೀಜಿ ಪರ ವಕೀಲರು ತಿಳಿಸಿದ್ದಾರೆ.