ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:ಜೆಡಿ‌ಎಸ್ ಅಧ್ಯಕ್ಷರಾಗಿ ಇನಾಯಿತುಲ್ಲಾ ಶಾಬಂದ್ರಿ ಆಯ್ಕೆ

ಭಟ್ಕಳ:ಜೆಡಿ‌ಎಸ್ ಅಧ್ಯಕ್ಷರಾಗಿ ಇನಾಯಿತುಲ್ಲಾ ಶಾಬಂದ್ರಿ ಆಯ್ಕೆ

Tue, 09 Mar 2010 16:01:00  Office Staff   S.O. News Service

ಭಟ್ಕಳ, ಮಾರ್ಚ್ 9: ಜ್ಯಾತ್ಯಾತೀತ ಜನತಾ ದಳದ ಭಟ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಪಕ್ಷದ ಹಿರಿಯ ಧುರೀಣ ಹಾಗೂ ಭಟ್ಕಳ ಪುರಸಭಾ ಸದಸ್ಯ ಇನಾಯಿತುಲ್ಲಾ ಶಾಬಂದ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 

ಮಂಗಳವಾರ ನಡೆದ ಪಕ್ಷದ ಸಭೆಯ ನಂತರ ಅಧ್ಯಕ್ಷರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರು, ನೂತನ ಆಯ್ಕೆಯಿಂದ ಜವಾಬ್ದಾರಿ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದರು. ಪ್ರಸಕ್ತ ಬಿಜೆಪಿ ಸರಕಾರದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದು, ಕಾಂಗ್ರೆಸ್ ಪಕ್ಷವೂ ಜನರಿಂದ ದೂರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜ್ಯಾತ್ಯಾತೀತ ಜನತಾದಳವೊಂದೇ ಸಮಸ್ಯೆಗಳಿಗೆ ಪರಿಹಾರವೆಂಬುದು ಜನರಿಗೆ ಮನವರಿಕೆಯಾಗಿದೆ ಎಂದ ಶಾಬಂದ್ರಿ, ಈ ಹಿಂದೆ ವಿವಿಧ ಕಾರಣಗಳಿಂದ ಪಕ್ಷವನ್ನು ತೊರೆದವರೆಲ್ಲರಿಗೂ ಮಾತೃ ಪಕ್ಷದ ಬಾಗಿಲು ತೆರೆದಿರುವುದಾಗಿ ಘೋಷಿಸಿದರು. ದೇವೇಗೌಡರು ಪ್ರಧಾನಮಂತ್ರಿಗಳಾಗಿದ್ದ ಅವಧಿಯಲ್ಲಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ದುಡಿದ ಅನುಭವ ತಮಗಿದೆ ಎಂದು ಹೇಳಿಕೊಂಡ ಅವರು ಈಗಾಗಲೇ ತಾಲೂಕಿನಲ್ಲಿ ಐದು ಘಟಕಗಳನ್ನು ರಚಿಸಿ ನಾಯಕರನ್ನು ನೇಮಿಸಲಾಗಿದೆ. ಜಿಲ್ಲಾಧ್ಯಕ್ಷರ ಅನುಮತಿಯನ್ನು ಪಡೆದು, ಹಿರಿಯರ ಸಹಕಾರದೊಂದಿಗೆ ಮುಂದಿನ ಒಂದು ವಾರದೊಳಗೆ ಪಕ್ಷದ ಕಾರ್ಯಕಾರಿ ಸಮಿತಿಯ ಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ಎಮ್.ಡಿ.ನಾಯ್ಕ, ಭಟ್ಕಳ ಪುರಸಭಾ ಸದಸ್ಯ ಕೃಷ್ಣಾನಂದ ಪೈ, ಮಂಜು ಗೊಂಡ, ವೆಂಕಟೇಶ ನಾಯ್ಕ, ಕೃಷ್ಣ ಹಳ್ಳೇರ, ಕೆ.ಎಮ್.ನಾಯ್ಕ, ದಾಸ ನಾಯ್ಕ, ಈಶ್ವರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

 

 

ಪದಾಧಿಕಾರಿಗಳ ಪ್ರಥಮ ಪಟ್ಟಿ ಬಿಡುಗಡೆ

 

ಜೆಡಿ‌ಎಸ್ ನೂತನ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ಪಕ್ಷದ ಪದಾಧಿಕಾರಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

 

ಉಪಾಧ್ಯಕ್ಷರಾಗಿ ಮಂಜು ಗೊಂಡ, ವಿಠ್ಠಲ್ ದೇವೇಂದ್ರ ನಾಯ್ಕ, ದುರ್ಗಾದಾಸ ಮಂಜು ದೇವಾಡಿಗ, ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣಾನಂದ ಪೈ, ಸಂಘಟನಾ ಕಾರ್ಯದರ್ಶಿಯಾಗಿ ರಾಜವರ್ಧನ ನಾಯ್ಕ, ಮಾದೇವ ಈರಪ್ಪ ನಾಯ್ಕ, ಫಾಸ್ಕಲ್ ಗೋಮ್ಸ, ಸುರೇಶ ನಾಯ್ಕ ಹೊಸಮನೆ, ಖಜಾಂಚಿಯಾಗಿ ಸೈಯದ್ ಹಸನ್ ಬರ್ಮಾವರ್ ನೇಮಕಗೊಂಡಿದ್ದಾರೆ. ಪಕ್ಷದ ಯುವ ಘಟಕದ ಅಧ್ಯಕ್ಷರನ್ನಾಗಿ ಪಾಂಡು ನಾಯ್ಕರ ಹೆಸರನ್ನು ಪಕ್ಷದ ವತಿಯಿಂದ ಶಿಫಾರಸ್ಸು ಮಾಡುವುದಾಗಿ ಅಧ್ಯಕ್ಷ ಶಾಬಂದ್ರಿ ಇದೇ ಸಂದರ್ಭದಲ್ಲಿ ಘೋಷಿಸಿದರು.

 


Share: