ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಬೆಂಗಳೂರು: ಜಲಪ್ರವಾಹ ಸಂತ್ರಸ್ತರಿಗೆ ಆಹಾರ ಮತ್ತು ಇನ್ನಿತರ ಅಗತ್ಯವಸ್ತುಗಳ ಪೂರೈಕೆ - ಕುಮಾರಸ್ವಾಮಿ

ಬೆಂಗಳೂರು: ಜಲಪ್ರವಾಹ ಸಂತ್ರಸ್ತರಿಗೆ ಆಹಾರ ಮತ್ತು ಇನ್ನಿತರ ಅಗತ್ಯವಸ್ತುಗಳ ಪೂರೈಕೆ - ಕುಮಾರಸ್ವಾಮಿ

Sun, 04 Oct 2009 03:13:00  Office Staff   S.O. News Service
ಬೆಂಗಳೂರು, ಅ.3: ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಲಪ್ರಳಯದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳಿಗೆ ಪಕ್ಷದ ವತಿಯಿಂದ ಆಹಾರ, ಬಟ್ಟೆ, ರಗ್ಗುಗಳು ಸೇರಿದಂತೆ ಇನ್ನಿತರ ಅಗತ್ಯವಸ್ತುಗಳನ್ನು ಪೂರೈಸಲು ತುರ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಜೆಡಿ‌ಎಸ್ ರಾಜ್ಯಾಧ್ಯಕ್ಷ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿ ಹಾಗೂ ಪ್ರವಾಹಕ್ಕೆ ಸಿಲುಕಿ ಸಂತ್ರಸ್ತರಾಗಿರುವ ಜನರಿಗೆ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು ಎಂದರು.

ಮಳೆಯಿಂದ ತೊಂದರೆಗೊಳಗಾಗಿರುವ ಪ್ರತಿ ತಾಲೂಕುಗಳಲ್ಲೂ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮುಖಂಡರು, ಕಾರ್ಯಕರ್ತರನ್ನು ಒಳಗೊಂಡ ತಂಡಗಳನ್ನು ರಚಿಸಿ ಈ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲಾಗುವುದು. 

ನಾಳೆಯಿಂದಲೆ ನಾನೂ ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರು 15 ದಿನಗಳ ಕಾಲ ಉತ್ತರ ಕರ್ನಾಟಕದ ಮಳೆ ಪೀಡಿತ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಜನರಿಗೆ ಅಗತ್ಯವಿರುವ ನೆರವನ್ನು ಒದಗಿಸುವುದಾಗಿ ಕುಮಾರಸ್ವಾಮಿ ಹೇಳಿದರು.

ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ, ಕುರಿತು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಉತ್ತರ ಕರ್ನಾಟಕದಲ್ಲಿ ಮಳೆ ಆರಂಭವಾಗದಗಲೆ ವಿರೋಧ ಪಕ್ಷವಾಗಿ ಸರಕಾರಕ್ಕೆ ಮುನ್ನೆಚ್ಚರಿಕೆ ನೀಡಿದ್ದೇವೆ. ಆದರೆ, ಸಂತ್ರಸ್ತರ ನೆರವಿಗೆ ಧಾವಿಸದೆ ಚಿಂತನ ಬೈಠಕ್, ಸನ್ಮಾನ, ಪ್ರಶಸ್ತಿ ಸ್ವೀಕಾರದಲ್ಲಿ ಕಾಲ ಹರಣ ಮಾಡಿದೆ ಎಂದರು.

 ಈ ಸಂದರ್ಭದಲ್ಲಿ ರಾಜ್ಯ ಸರಕಾರವನ್ನು ಟೀಕಿಸುವುದರಿಂದ ಸಂತ್ರಸ್ತ ಜನತೆಯ  ಕಷ್ಟ ನಿವಾರಣೆಯಾಗುವುದಿಲ್ಲ. ಆದ್ದರಿಂದ, ಮಳೆಯಿಂದ ತೊಂದರೆUಡಾಗಿರುವ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರತಿ ಕುಟುಂಬಕ್ಕೆ 25 ಕೆ.ಜಿ.ಅಕ್ಕಿ, ಬಟ್ಟೆ, ರಗ್ಗು ಹಾಗೂ ಎರಡರಿಂದ ಮೂರು ಸಾವಿರ ರೂ. ನೀಡಲು ಉದ್ದೇಶಿಸಲಾಗಿದೆ. ಎಂಜಿನಿಯರ್, ವೈದ್ಯರು, ಅಧಿಕಾರಿಗಳು ತಮ್ಮ ದುಡಿಮೆಯ ಒಂದು ಭಾಗವನ್ನು ಹಾಗೂ ಸರಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಕುಮಾರಸ್ವಾಮಿ ಮನವಿ ಮಾಡಿದರು.

ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಇದೇ ತಿಂಗಳ 9 ಹಾಗೂ 11 ರಂದು ಕರೆಯಲಾಗಿದ್ದ ಪ್ರತಿಭಟನೆಯನ್ನು ಮುಂದೂಡಿ ಪರಿಹಾರ ಕಾರ್ಯಕ್ಕೆ ಮುಂದಾಗುತ್ತಿದ್ದೇವೆ ಎಂದು ತಿಳಿಸಿದ ಅವರು, ಎಲ್ಲ ಜಿಲ್ಲೆ, ತಾಲೂಕು, ಹೋಬಳಿಗಳಲ್ಲಿ ಸಾವಿರಾರು ಮಂದಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡಿದರು.

ಪ್ರವಾಹದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮನೆಗಳು ಕುಸಿದಿವೆ. ಜಾನುವಾರುಗಳು ಕೊಚ್ಚಿ ಹೋಗಿವೆ. ಇಂಥ ಪರಿಸ್ಥಿತಿಯಲ್ಲಿ ಸರಕಾರವನ್ನು ದೂರುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ನೆರೆ ಪೀಡಿತ ಪ್ರದೇಶಗಳ  ಪ್ರವಾಸ ಮುಗಿಸಿದ ನಂತರ ನೈಸ್ ಹಾಗೂ ಕೆ‌ಎಂಎಫ್ ವಿಚಾರದ ಕುರಿತು ಪ್ರತಿಕ್ರಿಯಿಸುವುದಾಗಿ ಅವರು ತಿಳಿಸಿದರು.

ಸಂಸದ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಮಾಜಿ ಶಾಸಕ ಚಂದ್ರಣ್ಣ, ನಾರಾಯಣ ಸ್ವಾಮಿ ಹಾಜರಿದ್ದರು

Share: