ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನಮ್ಮ ಧರ್ಮ ನಮ್ಮೊಂದಿಗೆ, ನಮ್ಮ ಪ್ರೀತಿ ಎಲ್ಲರೊಂದಿಗೆ: ಮುಹಮ್ಮದ್ ಕುಂಞಿ

ನಮ್ಮ ಧರ್ಮ ನಮ್ಮೊಂದಿಗೆ, ನಮ್ಮ ಪ್ರೀತಿ ಎಲ್ಲರೊಂದಿಗೆ: ಮುಹಮ್ಮದ್ ಕುಂಞಿ

Sat, 20 Jul 2024 23:13:54  Office Staff   SOnews

ಬೆಳಗಾವಿ: ನಮ್ಮ ಧರ್ಮ ನಮ್ಮೊಂದಿಗೆ ನಮ್ಮ ಪ್ರೀತಿ ಎಲ್ಲರೊಂದಿಗೆ ಇರಲಿ. ನಾವು ನಮ್ಮ ಧರ್ಮಗಳನ್ನು ಪಾಲಿಸೋಣ, ಆದರೆ ಎಲ್ಲರೊಂದಿಗೆ ಪ್ರೀತಿಯನ್ನು ಹಂಚಿಕೊಳ್ಳಬೇಕಾಗಿದೆ ಎಂದು ಶಾಂತಿ ಪ್ರಕಾಶನ ಸಂಸ್ಥೆಯ ಮುಹಮ್ಮದ್ ಕುಂಞಿ ಹೇಳಿದರು.

ಬೆಳಗಾವಿಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯಿಂದ ಸರ್ವಧರ್ಮಗಳ ಗುರುಗಳನ್ನು ಸೇರಿಸಿ ಹಮ್ಮಿಕೊಂಡಿದ್ದ ಸದ್ಭಾವನಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಪ್ರೀತಿ, ಸಾಮರಸ್ಯ ಮತ್ತು ಪರಸ್ಪರ ಸಹಕಾರ ವಾತಾವರಣ, ಬೆಳೆಯುವ ಅವಕಾಶಗಳನ್ನು ಪ್ರೋತ್ಸಾಹಿಸುವುದು, ಸಾಮಾಜಿಕ ಪಿಡುಗುಗಳ ನಿರ್ಮೂಲನೆ, ಸಂವಿಧಾನ ಖಾತರಿಪಡಿಸಿದ ಸಾಂಸ್ಕೃತಿಕ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಜನರಿಗೆ ಶಿಕ್ಷಣ ನೀಡುವುದು, ಕೋಮುದ್ವೇಷದ ಸಂದರ್ಭದಲ್ಲಿ ಪರಸ್ಪರ ಸಹಕಾರದೊಂದಿಗೆ ಪರಿಹಾರ ಕಂಡುಕೊಳ್ಳುವುದು, ಭಾರತೀಯ ಸಂವಿಧಾನವು ಪ್ರತಿಪಾದಿಸಿದ ಮೂಲಭೂತ ಮೌಲ್ಯಗಳಾದ ಸಮಾನತೆ, ನ್ಯಾಯ, ಸ್ವಾತಂತ್ರ್ಯ ಮತ್ತು ಭಾತೃತ್ವವನ್ನು ಬಲಪಡಿಸಿವುದು ಸದ್ಭಾವನಾ ಕಾರ್ಯಕ್ರಮದ ಉದ್ದೇಶವಾಗಿದೆ” ಎಂದರು.

ರಾಮಕೃಷ್ಣ ಆಶ್ರಮದ ಮೋಕ್ಷಾತ್ಮಾನಂದ ಸ್ವಾಮಿಜಿ ಮಾತನಾಡಿ, “ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರೂ ಕೂಡಾ ಧರ್ಮವು ಒಂದೇ ಆಗಿದೆ ಹಾಗೂ ಎಲ್ಲ ದೇವರುಗಳು ಒಂದೇ ಎಂದು ತಿಳಿಸಿದ್ದರು” ಎಂದರು.

ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿ ಮಾತನಾಡಿ, “ನಮ್ಮ ಮಠದ ಮೂಲಕ ನಾವು ಸರ್ವಧರ್ಮ ಸಮಾನತೆಯ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ ಹಾಗೂ ನಮ್ಮ ಮಠದಿಂದ ಉರ್ದು ಶಾಲೆಯನ್ನೂ ಕೂಡಾ ನಡೆಸುತ್ತಿದ್ದೇವೆ” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಖ್ ಸಮುದಾಯದ ಗುರುಗಳಾದ ಗುರುಬ್ಜೋತ್ ಸಿಂಗ್, ಬ್ರಹ್ಮಕುಮಾರಿ ಆಶ್ರಮದಿಂದ ರಾಜಯೋಗಿ ವಿದ್ಯಾ, ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಇಂಜಿನಿಯರ್ ಮೊಹಮ್ಮದ್ ಸಲೀಮ್, ರಾಜ್ಯಾಧ್ಯಕ್ಷ ಡಾ ಮೊಹಮ್ಮದ್ ಸಾದ್ ಬೆಳಗಾಮಿ, ಕ್ರಿಶ್ಚಿಯನ್ ಸಮುದಾಯದ ಪಾದ್ರಿಗಳು ಸೇರಿದಂತೆ ಯಾಸಿನ್ ಮಖಾಂದಾರ್, ಶಿವಾಜಿ ಕಾಗಣಿಗಕರ್, ಡಿ ಎಸ್ ಚೌಗಲೆ, ಕೃಷಿಕ ಸಮಾಜದ ಸಿದ್ದೇಗೌಡ ಮೋದಗಿ, ಬಸವರಾಜ ಹಿಮ್ಮಡಿ ಸೇರಿದಂತೆ ಬಹುತೇಕ ಗಣ್ಯರು ಇದ್ದರು.

 


Share: