ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನಗರಸಭೆ ತೆರಿಗೆ ಸಂಗ್ರಹಕ್ಕೆ ವೇಗ: ಹಿಂದಿನ ಅವಧಿಯ 2.55 ಕೋಟಿ ರೂ. ಗುತ್ತಿಗೆದಾರರ ಬಾಕಿ ಬಿಲ್ ಪಾವತಿ.

ನಗರಸಭೆ ತೆರಿಗೆ ಸಂಗ್ರಹಕ್ಕೆ ವೇಗ: ಹಿಂದಿನ ಅವಧಿಯ 2.55 ಕೋಟಿ ರೂ. ಗುತ್ತಿಗೆದಾರರ ಬಾಕಿ ಬಿಲ್ ಪಾವತಿ.

Sun, 26 May 2024 02:20:57  Office Staff   SO News

ಕಾರವಾರ : ನಗರಸಭೆಯ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿ ಅವರ ದಿಟ್ಟ ನಿರ್ಧಾರಗಳಿಂದ , ನಗರಸಭೆಯಲ್ಲಿ ಬಾಕಿ ಇದ್ದ ತೆರಿಗೆ ವಸೂಲಿ ಕಾರ್ಯಕ್ಕೆ ವೇಗ ದೊರೆತಿದೆ.  ಪ್ರಸ್ತುತ ಸಾಲಿನಲ್ಲಿ ಇದುವರೆಗೆ 309.93 ಲಕ್ಷ ತೆರಿಗೆ ವಸೂಲಿಯಾಗಿದ್ದು, ಇದು ವಾರ್ಷಿಕ ಗುರಿಯ ಶೇ.53 ರಷ್ಟು ಸಾಧನೆ ಆಗಿದೆ. ಅಲ್ಲದೇ ತೆರಿಗೆ ಸಂಗ್ರಹ ಉತ್ತಮವಾದ ಹಿನ್ನಲೆಯಲ್ಲಿ ಈ ಹಿಂದೆ 2021-22 ರಿಂದ ಬಾಕಿ ಇದ್ದ ಗುತ್ತಿಗೆದಾರರ 12.51 ಕೋಟಿ ಮೊತ್ತದಲ್ಲಿ 2.55 ಕೋಟಿ ರೂ ಗಳ ಬಿಲ್ ನ್ನು ಪಾವತಿಸಲಾಗಿದೆ.

ಕಾರವಾರ ನಗರಸಭೆಯಲ್ಲಿ 2021-22 ರಲ್ಲಿ ಅಧಿಕಾರಿಗಳು ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ , ಕಾರವಾರ ನಗರ ವ್ಯಾಪ್ತಿಯಲ್ಲಿ 263 ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ನಿರ್ವಹಿಸಿದ್ದ ಗುತ್ತಿಗೆದಾರರಿಗೆ ಅವರ ವೆಚ್ಚದ ಬಿಲ್ 12.51 ಕೋಟಿ ರೂ ಮೊತ್ತವನ್ನು ಪಾವತಿಸುವಲ್ಲಿ ತೀವ್ರ ತೊಂದರೆಯಾಗಿದ್ದು, ಅಲ್ಲದೇ ಪೂರ್ಣ ಪ್ರಮಾಣದ ತೆರಿಗೆ ವಸೂಲಾತಿ ನಡೆಯದೇ ಇದ್ದುದರಿಂದ ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಸಹ ಅಡಚಣೆಯಾಗಿತ್ತು.

2023 ರ ಆಗಸ್ಟ್ ತಿಂಗಳಲ್ಲಿ ನಗರಸಭೆಯ ಆಡಳಿತಾಧಿಕಾರಿಯಾಗಿ ಅಧಿಕಾರವಹಿಸಿಕೊಂಡ ಜಿಲ್ಲಾಧಿಕಾರಿಗಳ ಸೂಚನೆಯಂತೆ , ಶೇ.100 ರಷ್ಟು ಪೂರ್ಣ ಪ್ರಮಾಣದ ತೆರಿಗೆ ಸಂಗ್ರಹಕ್ಕೆ ಒತ್ತು ನೀಡಿದ್ದು, ನಗರಸಭೆಯ ಎಲ್ಲಾ ತೆರಿಗೆ ವಸೂಲಿಗಾರರಿಗೆ ತಮ್ಮ ವ್ಯಾಪ್ತಿಯಲ್ಲಿ ಬಾಕಿ ಇರುವ ತೆರಿಗೆಯನ್ನು ಸಂಪೂರ್ಣವಾಗಿ ವಸೂಲಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಮಾತ್ರವಲ್ಲದೇ, ಪ್ರತೀ ತಿಂಗಳು ತೆರಿಗೆ ವಸೂಲಿ ಮಾಡಲು ಗುರಿ ನಿಗಧಿಪಡಿಸಿದ ಕಾರಣ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಗತಿ ಸಾಧ್ಯವಾಗಿದೆ.

ನಗರಸಭೆಯ ತೆರಿಗೆ ವಸೂಲಿ ಉತ್ತಮಗೊಂಡರೂ ಸಹ, ಗುತ್ತಿಗೆದಾರರ ಹಳೆಯ ಬಾಕಿಯ ಮೊತ್ತ ಪಾವತಿಸಲು ಸಾಧ್ಯವಾಗಿರಲಿಲ್ಲ. ತೆರಿಗೆ ವಸೂಲಿ ಮೊತ್ತದಿಂದಲೇ ನಗರಸಭೆಯ ಅಭಿವೃಧ್ದಿ ಕಾರ್ಯಗಳು, ಸಿಬ್ಬಂದಿಯ ವೇತನ ಮತ್ತಿತರ ವೆಚ್ಚಗಳನ್ನು ಪಾವತಿಸಬೇಕಾಗಿದ್ದರಿಂದ , ತೆರಿಗೆ ಸಂಗ್ರಹದ ಮೊತ್ತದಲ್ಲಿ ನಗರಸಭೆಯ ಆಡಳಿತ ವೆಚ್ಚ ಪಾವತಿ ಮತ್ತು ಹಳೆಯ ಬಾಕಿ ಬಿಲ್ ಮೊತ್ತವನ್ನು ಪಾವತಿಸಲು ಶೇಕಡಾವಾರು ಪ್ರಮಾಣವನ್ನು ನಿರ್ಣಯಿಸಿ, ಗುತ್ತಿಗೆದಾರರ ಬಾಕಿ ಇರುವ ಮೊತ್ತವನ್ನು ಹಂತ ಹಂತವಾಗಿ ಪಾವತಿ ಮಾಡಲು ಯೋಜನೆ ರೂಪಿಸಿದ್ದು, ಅದರಂತೆ 2023-24 ರಲ್ಲಿ 27 ಮಂದಿ ಗುತ್ತಿಗೆದಾರರಿಗೆ 1.8 ಕೋಟಿ ಹಾಗೂ ಪ್ರಸ್ತುತ ಸಾಲಿನಲ್ಲಿ 40 ಗುತ್ತಿಗೆದಾರರಿಗೆ 1.47 ಕೋಟಿ ರೂ ಸೇರಿದಂತೆ ಇದುವರೆಗೆ 67 ಗುತ್ತಿಗೆದಾರರಿಗೆ 2.55 ಕೋಟಿ ರೂ ಗಳನ್ನು ಪಾವತಿಸಲಾಗಿದೆ.

ನಗರಸಭೆಯಲ್ಲಿ ನಿಗಧಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ನಡೆಯದ ಕಾರಣ, ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ಅಡಚಣೆಯಾಗುತ್ತಿರುವ ಬಗ್ಗೆ ತಿಳಿದುಬಂದಿತ್ತು. ಈ ಕುರಿತಂತೆ ನಗರಸಭೆಯ ಸಭೆಯಲ್ಲಿ ಎಲ್ಲಾ ಬಿಲ್ ಕಲೆಕ್ಟರ್ ಗಳಿಗೆ , ತೆರಿಗೆ ನೀಡದೇ ಇರುವವರಿಗೆ ನೋಟಿಸ್ ನೀಡಿ, ನಿಗಧಿತ ತೆರಿಗೆ ಸಂಗ್ರಹ ಮಾಡುವಂತೆ ನಿಗಧಿತ ಗುರಿ ನೀಡಲಾಗಿದೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿಗಮನಾರ್ಹ ಹೆಚ್ಚಳವಾಗಿದ್ದು, ಈ ಹಿಂದೆ ಅಭಿವೃಧ್ದಿ ಕಾಮಗಾರಿಗಳನ್ನು ನಿರ್ವಹಿಸಿದ್ದರೂ ಸಹ, ಅಧಿಕಾರಿಗಳ ತಪ್ಪು ನಿರ್ಣಯಗಳಿಂದ ವೆಚ್ಚ ಪಾವತಿಯಾಗದೇ ತೊಂದರೆಗೊಳಗಾಗಿದ್ದ ಗುತ್ತಿಗದಾರರಿಗೆ ಹಂತ ಹಂತವಾಗಿ ಮೊತ್ತವನ್ನು ಪಾವತಿ ಮಾಡಲಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ನಿರ್ಲಕ್ಷ  ತೋರಿರುವ ಸಿಬ್ಬಂದಿ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗಿದೆ ಎಂದು  ನಗರಸಭೆ ಆಡಳಿತಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.


Share: