ಭಟ್ಕಳ, ಫೆಬ್ರವರಿ ೨೮: ಕಳೆದ ಬುಧವಾರದಂದು ನಗರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಚೆಂಗಪ್ಪ ಗೌಡರು ವೈ ಎಮ್. ಎಸ್. ಎ. ಮೈದಾನ ಸಹಿತ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಾಹಿಲ್ ಆನ್ಲೈನ್ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ಕ್ರೀಡಾಂಗಣ ನಿರ್ಮಿಸಲು ನಗರದ ವೈ ಎಂ ಎಸ್ ಎ ಮೈದಾನ ಅಥವಾ ಶಿರಾಲಿ ಗ್ರಾಮದಲ್ಲಿ ಪರಿಶೀಲನೆ ನಡೆಸಿರುವುದಾಗಿ ಹಾಗೂ ಈ ಬಗ್ಗೆ ಅಂತಿಮ ತೀರ್ಮಾನವನ್ನು ಶೀಘ್ರದಲ್ಲಿಯೇ ಪ್ರಕಟಿಸುವುದಾಗಿ ವಾಗ್ದಾನ ನೀಡಿದರು.
ಬಳಿಕ ಅವರು ಅಕ್ರಮ ಅರಣ್ಯ ಒತ್ತುವರಿ ಮಾಡಿಕೊಂಡಿರುವ ಸ್ಥಳಗಳಿಗೂ ಭೇಟಿ ನೀಡಿದರು.
ನಗರದಲ್ಲಿ ಕ್ರೀಡಾಂಗಣ ನಿರ್ಮಿಸಲು ಪರ ವಿರೋಧ ನಿಲುವುಗಳು ನಗರದ ಜನತೆಯಿಂದ ಹೊಮ್ಮುತ್ತಿರುವ ಸಂದರ್ಭದಲ್ಲಿ ಶಿರಾಲಿಯಲ್ಲಿಯೇ ಕ್ರೀಡಾಂಗಣ ನಿರ್ಮಿಸುವುದು ಸೂಕ್ತ ಎಂದು ಭಟ್ಕಳ ಎಂ.ಎಲ್ ಎ. ರವರ ನಿಲುವಾಗಿದೆ. ಆದರೆ ಪಟ್ಟಣದ ಸರಹದ್ದಿನ ಹೊರಗೆ ಕ್ರೀಡಾಂಗಣ ನಿರ್ಮಿಸಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.