ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಕೋಲಾರ: ಸೌಹಾರ್ದತೆಗಾಗಿ ಗಾಳಿಪಟ ಉತ್ಸವ

ಕೋಲಾರ: ಸೌಹಾರ್ದತೆಗಾಗಿ ಗಾಳಿಪಟ ಉತ್ಸವ

Sat, 13 Mar 2010 03:05:00  Office Staff   S.O. News Service

ಜಿಗಿ ಜಿಗಿಯುತ ನಲಿ, ಗಗನದ ಬಯಲಲಿ, ಪಟ ಗಾಳಿಯಲೀ ತೇಲಿ

ನೆಲದಿಂದ ದೂರ ಹೂಡಿ ದಾರ, ಹಾರು ಹೊಡೆಯದೆ ಜೋಲಿ

ಗಾಳಿಪಟ !

ಆಕಾಶದಲ್ಲಿ ಹಾರಾಡುತ್ತಿರುವ ಗಾಳಿಪಟ ಕಂಡರೆ ಸಾಕು ಆಬಾಲ ವೃದ್ದರಾದಿ (ಎಳೆ ಮಕ್ಕಳಿಂದ ಮುದುಕರವರೆಗೆ) ಎಲ್ಲರೂ `ಅಲ್ಲಿ! ಗಾಳಿಪಟ!!’ ಎಂದು ಉದ್ಗರಿಸದೇ ಇರಲು ಸಾಧ್ಯವೇ ಇಲ್ಲ. ಆ ಉದ್ಗಾರ ಕೇಳಿದೊಡನೆ ಸುತ್ತ ಮುತ್ತ ಇರುವ ಎಲ್ಲರೂ ತಲೆಯೆತ್ತಿ `ಎಲ್ಲಿದೆ ಗಾಳಿಪಟ!’ ಎಂದು ಹುಡುಕುವವರೇ.

ಗಾಳಿಪಟ ಕಂಡೊಡನೆ ಇಂತಹ ಉತ್ಸಾಹಭರಿತ ವಾತಾವರಣ ಸೃಷ್ಟಿಯಾದರೆ ಇನ್ನು ತಾವೇ ಗಾಳಿಪಟ ಹಾರಿಸುವಾಗ ಪಡುವ ಸಂತೋಷಕ್ಕಂತೂ ಪಾರವೇ ಇಲ್ಲ. ಅದರಲ್ಲೂ ಗುಂಪಾಗಿ ಕೂಡಿ ಗಾಳಿಪಟ ಬಿಡುವಾಗಿನ ಸಂತೋಷವಂತೂ ವರ್ಣಿಸಲು ಅಸಾಧ್ಯ. ಅಲ್ಲಿ ಶಾಂತಿ ಸೌಹಾರ್ದತೆಯ ವಾತಾವರಣ ತನ್ನಿಂದ ತಾನೇ ನಿರ್ಮಾಣವಾಗುತ್ತದೆ.

ಇದೇ ಕಾರಣದಿಂದಾಗಿ ಸಮುದಾಯ ಕೆ.ಜಿ.ಎಫ್. ಸಂಘಟನೆ `ಸೌಹಾರ್ದತೆಗಾಗಿ ಗಾಳಿಪಟ ಉತ್ಸವ’ ವನ್ನು ಕಳೆದ ಕೆಲವು ವರ್ಷಗಳಿಂದ ಪ್ರತಿವರ್ಷವೂ ನಡೆಸಿಕೊಂಡು ಬಂದಿದೆ.

ಈ ವರ್ಷವೂ `ಸೌಹಾರ್ದತೆಗಾಗಿ ಗಾಳಿಪಟ ಉತ್ಸವ 2010′ ನ್ನು ಫೆಬ್ರುವರಿ 14 ರಂದು ಬೆಮೆಲ್ ಕ್ರೀಡಾಂಣದಲ್ಲಿ ಆಯೋಜಿಸಿದ್ದರು. `ಪ್ರೇಮಿಗಳ ದಿನ’ ದಂದು ಸೌಹಾರ್ದತೆ ಕದಡಿಸುವ ಈ ದಿನಗಳಲ್ಲಿ ಅದೇ ದಿನದಂದು ಈ ಉತ್ಸವ ನಡೆದದ್ದು ಒಂದು ಆಕಸ್ಮಿಕ.

ಬೆಮಲ್ ಕಾರ್ಮಿಕ ಸಂಘದ ಉಪಾಧ್ಯಕ್ಷರಾದ `ಕಾ!ಇಕ್ಬಾಲ್ ಅಹಮ್ಮದ್’ ರವರು ಉತ್ಸವವನ್ನು ಉದ್ಘಾಟಿಸಿದರು.

ಯಾರ ಗಾಳಿಪಟ ಎಷ್ಟು ಎತ್ತರಕ್ಕೆ ಹಾರಿತು ಎಂಬುದು ಮುಖ್ಯವಲ್ಲ ಎಷ್ಟು ಬಣ್ಣಗಳ ಗಾಳಿಪಟಗಳು ಒಟ್ಟಿಗೆ ಹಾರಾಡಿದವು ಎಂಬುದು ಮುಖ್ಯ ಎಂದು ಅವರು ಹೇಳಿದರು. ಸಮುದಾಯ ಇಂಥಹ ಜನಪರ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು.

ವಿವಿಧ ವಿಭಾಗಗಳ ಜನತೆ ನೂರಾರು ಸಂಖ್ಯೆಯಲ್ಲಿ ತಮ್ಮ ಕುಟುಂಬಗಳೊಂದಿಗೆ ಭಾಗವಹಿಸಿದರು.ಈ ಉತ್ಸವ ಒಂದು ಹಬ್ಬದ ವಾತಾವರಣವನ್ನು ಉಂಟುಮಾಡಿತು.

 

ಸೌಜನ್ಯ: ಸಮುದಾಯ ಕೆ.ಜಿ.ಎಫ್.


Share: